ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳು: ಏಪ್ರಿಲ್ ನಂತರದ ಕ್ವಾರ್ಟರ್ನಲ್ಲಿ ಬಡ್ಡಿದರ ವಿವರ
Small Savings Schemes Interest rates: ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳಿಗೆ ಕಳೆದ ವಾರ ಬಡ್ಡಿದರಗಳನ್ನು ಪರಿಷ್ಕರಿಸಲಾಗಿದ್ದು ಯಾವ ಬದಲಾವಣೆಯೂ ಆಗಿಲ್ಲ. ಜನವರಿಯಿಂದ ಮಾರ್ಚ್ವರೆಗೆ ಇದ್ದ ಬಡ್ಡಿದರಗಳೇ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಗೆ ಮುಂದುವರಿಸಲಾಗಿದೆ. ಅಂಚೆ ಕಚೇರಿಯ ವಿವಿಧ ಅವಧಿಯ ಠೇವಣಿಗಳು, ಅಂಚೆ ಕಚೇರಿ ಆವರ್ತಿತ ಠೇವಣಿ, ಸುಕನ್ಯಾ ಸಮೃದ್ಧಿ ಯೋಜನೆ, ಕಿಸಾನ್ ವಿಕಾಸ್ ಪತ್ರ, ರಾಷ್ಟ್ರೀಯ ಉಳಿತಾಯ ಪತ್ರ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳನ್ನು ಸರ್ಕಾರ ನಡೆಸುತ್ತದೆ.
ಸರ್ಕಾರದಿಂದ ಹಲವು ಸಣ್ಣ ಉಳಿತಾಯ ಯೋಜನೆಗಳನ್ನು (Small Savings Schemes) ನಡೆಸಲಾಗುತ್ತದೆ. ಕಾಲ ಕಾಲಕ್ಕೆ ಸರ್ಕಾರ ಇವುಗಳಿಗೆ ಬಡ್ಡಿದರ ಪರಿಷ್ಕರಿಸುತ್ತಿರುತ್ತದೆ. ಕಳೆದ ವಾರ ಸರ್ಕಾರ ಮುಂದಿನ ತ್ರೈಮಾಸಿಕ ಅವಧಿಗೆ ಈ ಸ್ಮಾಲ್ ಸೇವಿಂಗ್ ಸ್ಕೀಮ್ಗಳಿಗೆ ಬಡ್ಡಿದರ ಪರಿಷ್ಕರಿಸಿದೆ. ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ ಇದ್ದ ದರಗಳನ್ನೇ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ ಅವಧಿಗೆ ಮುಂದುವರಿಸಲಾಗಿದೆ. ಅಂದರೆ, ಸಣ್ಣ ಉಳಿತಾಯ ಯೋಜನೆಯ ಬಡ್ಡಿದರದಲ್ಲಿ ಯಾವ ವ್ಯತ್ಯಯ ಆಗಿಲ್ಲ. ಬಡ್ಡಿದರ ಶೇ. 6.9ರಿಂದ ಆರಂಭವಾಗಿ ಶೇ. 8.2ರವರೆಗೂ ಇದೆ. ಒಂದು ವರ್ಷದ ಅಂಚೆ ಕಚೇರಿ ಠೇವಣಿಗೆ ಶೇ. 6.9 ಬಡ್ಡಿದರ ಇದೆ. ಎಸ್ಸಿಎಸ್ಎಸ್ ಮತ್ತು ಎಸ್ಎಸ್ವೈ ಯೋಜನೆಗಳಿಗೆ ಗರಿಷ್ಠ ಶೇ. 8.2ರಷ್ಟು ಬಡ್ಡಿ ನೀಡಲಾಗುತ್ತದೆ.
2024ರ ಏಪ್ರಿಲ್ನಿಂದ ಜೂನ್ವರೆಗಿನ ಮೂರು ತಿಂಗಳಿಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರದ ವಿವರ
- ಅಂಚೆ ಕಚೇರಿ 1 ವರ್ಷದ ಅವಧಿ ಠೇವಣಿ: ಶೇ. 6.9
- ಅಂಚೆ ಕಚೇರಿ 2 ವರ್ಷದ ಅವಧಿ ಠೇವಣಿ: ಶೇ. 7.0
- ಅಂಚೆ ಕಚೇರಿ 3 ವರ್ಷದ ಅವಧಿ ಠೇವಣಿ: ಶೇ. 7.1
- ಅಂಚೆ ಕಚೇರಿ 5 ವರ್ಷದ ಅವಧಿ ಠೇವಣಿ: ಶೇ. 7.5
- ಅಂಚೆ ಕಚೇರಿ 5 ವರ್ಷದ ಆವರ್ತಿತ ಠೇವಣಿ (ಆರ್ಡಿ): ಶೇ. 6.7
- ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್: ಶೇ. 7.7
- ಕಿಸಾನ್ ವಿಕಾಸ್ ಪತ್ರ: ಶೇ. 7.5
- ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಶೇ. 7.1
- ಸುಕನ್ಯಾ ಸಮೃದ್ಧಿ ಯೋಜನೆ: ಶೇ. 8.2
- ಹಿರಿಯ ನಾಗರಿಕರ ಉಳಿತಾಯ ಯೋಜನೆ: ಶೇ. 8.2
- ಮಾಸಿಕ ಆದಾಯ ಖಾತೆ: ಶೇ. 7.4
ಇದನ್ನೂ ಓದಿ: ಸರ್ಕಾರದಿಂದ ನಡೆಸಲಾಗುವ ಪಿಪಿಎಫ್ನಿಂದ ಲಾಭಗಳೇನು?; 15 ವರ್ಷದಲ್ಲಿ ಸಿಗುವ ರಿಟರ್ನ್, ಇತ್ಯಾದಿ ವಿವರ ತಿಳಿಯಿರಿ
ಇದರ ಜೊತೆಗೆ ಅಂಚೆ ಕಚೇರಿಯಲ್ಲಿ ನಿಮ್ಮ ಸೇವಿಂಗ್ಸ್ ಖಾತೆಯಲ್ಲಿರುವ ಹಣಕ್ಕೆ ಶೇ. 4ರಷ್ಟು ಬಡ್ಡಿ ಸಿಗುತ್ತದೆ. ಬ್ಯಾಂಕುಗಳಲ್ಲೂ ಕೂಡ ಸೇವಿಂಗ್ಸ್ ಅಕೌಂಟ್ನಲ್ಲಿನ ಹಣಕ್ಕೆ ಹೆಚ್ಚೂಕಡಿಮೆ ಇಷ್ಟು ಬಡ್ಡಿ ಸಿಗುತ್ತದೆ.
ಕಮರ್ಷಿಯಲ್ ಬ್ಯಾಂಕುಗಳಲ್ಲಿ ಒಂದು ವರ್ಷದಿಂದ ಐದು ವರ್ಷದ ನಿಶ್ಚಿತ ಠೇವಣಿಗಳಿಗೆ ಶೇ. 7ರಿಂದ ಶೇ. 8ರವರೆಗೆ ಬಡ್ಡಿ ಕೊಡಲಾಗುತ್ತದೆ. ಬ್ಯಾಂಕುಗಳಲ್ಲಿ ಆರ್ಡಿಗಳಿಗೆ ಶೇ. 7.5ರವರೆಗೂ ಬಡ್ಡಿ ಸಿಗುತ್ತದೆ.
ಸರ್ಕಾರದಿಂದ ನಡೆಸಲಾಗುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಮೊದಲಾದ ಸ್ಕೀಮ್ಗಳಲ್ಲಿನ ಬಡ್ಡಿದರಗಳನ್ನು ಮಾರುಕಟ್ಟೆ ದರಕ್ಕೆ ಜೋಡಿಸಲಾಗಿದೆ. 10 ವರ್ಷದ ಸರ್ಕಾರಿ ಬಾಂಡ್ನ ಯೀಲ್ಡ್ಗೆ ಅನುಗುಣವಾಗಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ನಿಗದಿ ಮಾಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ