ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅನ್ನೋ ನಾಣ್ನುಡಿಯನ್ನು ಕೇಳಿರಬಹುದು. ಇವತ್ತಿನ ದಿನಗಳಲ್ಲಿ ಸಾಲ ಮಾಡದವರನ್ನು ಹುಡುಕುವುದು, ಸಾವಿಲ್ಲದ ಮನೆಯಲ್ಲಿ ಸಾಸಿವೆ ಹುಡುಕಿದಂತೆ. ಇದು ತುಸು ಅತಿಶಯೋಕ್ತಿ ಎನಿಸಿದರೂ ಸಾಲ ಮಾಡದವರು ಇರುವುದು ತೀರಾ ಅಪರೂಪ ಎನ್ನುವುದು ಸತ್ಯ. ಇವತ್ತು ಹಣ ಸಾಕಾಗದೇ ಸಾಲ ಮಾಡಬೇಕೆಂದಿಲ್ಲ, ತೆರಿಗೆ ಉಳಿಸಲೂ ಸಾಲ (Loan) ಪಡೆಯುವವರಿದ್ದಾರೆ. ಏನೇ ಆದರೂ ಸಾಲ ಸಾಲವೇ.
ಸಾಲಗಳಲ್ಲಿ ಗೃಹಸಾಲ (Home Loan) ಬಹಳ ಮುಖ್ಯವಾದುದು. ಸ್ವಂತ ಸೂರಿನ ಕನಸು ಹೊಂದಿರುವವರು ಲಕ್ಷ, ಕೋಟಿಗಟ್ಟಲೆ ಗೃಹ ಸಾಲ ಪಡೆಯುತ್ತಾರೆ. ಇವುಗಳ ಇಎಂಐ ಏನಿಲ್ಲವೆಂದರೂ ತಿಂಗಳಿಗೆ 15 ಸಾವಿರದಿಂದ 60 ಸಾವಿರ ರೂವರೆಗೂ ಇರಬಹುದು. ಗೃಹ ಸಾಲ ಪೂರ್ತಿ ತೀರಿಸುವ ಹೊತ್ತಿಗೆ ಎರಡು ಪಟ್ಟು ಹೆಚ್ಚು ಮೊತ್ತದ ಬಡ್ಡಿಯನ್ನೇ ಕಟ್ಟಿರುತ್ತೇವೆ. ದೊಡ್ಡ ಸಾಲವೋ, ಸಣ್ಣ ಸಾಲವೂ, ನಾವು ಹೊರೆಯಿಲ್ಲದೇ ಅದನ್ನು ತೀರಿಸುವ ಬಗೆ ಹೇಗೆ? ಕೆಲ ತಜ್ಞರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಒಂದಿಷ್ಟು ಸಲಹೆಗಳನ್ನು ಇಲ್ಲಿ ನೀಡಿದ್ದೇವೆ.
ಸಾಲಗಳನ್ನು ನಿಭಾಯಿಸುವ ಅಂಶಗಳು
ಆರ್ಬಿಐ ಆಗಾಗ ರೆಪೋ ದರಗಳನ್ನು ಏರಿಳಿಕೆ ಮಾಡುತ್ತಿರುತ್ತದೆ. ಬಡ್ಡಿ ದರ ಇಳಿದಾಗ ನೀವು ಸಾಲ ತೆಗೆದುಕೊಂಡಿರುವ ಬ್ಯಾಂಕ್ ಕೂಡ ಬಡ್ಡಿ ದರ ಇಳಿಸಿದೆಯಾ ಎಂದು ಖಾತ್ರಿಪಡಿಸಿಕೊಳ್ಳಿ. ಅಗತ್ಯಬಿದ್ದರೆ ಬ್ಯಾಂಕ್ ಮ್ಯಾನೇಜರನ್ನು ಸಂಪರ್ಕಿಸಿ ವಿಚಾರಿಸಿ.
ಇದನ್ನೂ ಓದಿ: Adani Effect: ಅದಾನಿ ಷೇರು ಏನಾದರಾಗಲೀ, ಭಾರತದ ಬುಲ್ಸ್ಟ್ರೀಟ್ ಜಗ್ಗೋದು ಕಷ್ಟ
ಇಎಂಐ ಮೊತ್ತ ಹೆಚ್ಚಿಸಿ: ನಿಮ್ಮಲ್ಲಿ ಆದಾಯ ಹೆಚ್ಚಾಗಿ ಹೆಚ್ಚು ಹಣವನ್ನು ಸಾಲದ ಕಂತುಗಳಿಗೆ ಕಟ್ಟಲು ಸಮರ್ಥರಿದ್ದರೆ ಆಗ ಇಎಂಐ ಮೊತ್ತವನ್ನು ಹೆಚ್ಚಿಸಿಕೊಳ್ಳಿ. ಇದರಿಂದ ಬೇಗ ಕಂತುಗಳು ಮುಗಿಯುತ್ತವೆ. ಹೆಚ್ಚು ಬಡ್ಡಿ ಕಟ್ಟುವುದೂ ತಪ್ಪುತ್ತದೆ.
ಇಎಂಇ ಕಡಿಮೆ ಮಾಡಿ: ಒಂದು ವೇಳೆ ನಿಮಗೆ ಇತರ ಅಗತ್ಯ ಕಮಿಟ್ಮೆಂಟ್ಗಳು ಬಂದುಬಿಟ್ಟು ಸಾಲದ ಕಂತು ಕಟ್ಟುವುದು ಕಷ್ಟ ಎನಿಸಿದರೆ ಬ್ಯಾಂಕ್ ಮ್ಯಾನೇಜರ್ ಜೊತೆ ಮಾತನಾಡಿ ಇಎಂಐ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾ ಎಂದು ಕೇಳಿ. ಕಂತುಗಳು ಹೆಚ್ಚಾದರೆ ಇಎಂಐ ಮೊತ್ತ ತುಸು ಕಡಿಮೆ ಆಗುತ್ತದೆ.
ಹೆಚ್ಚುವರಿ ಹಣ ಇದ್ದರೆ ಸಾಲಕ್ಕೆ ಕಟ್ಟಿ: ನಿಮಗೆ ದಿಢೀರನೇ ಒಂದಷ್ಟು ಹಣ ಲಭ್ಯವಾದರೆ ಅದನ್ನು ಸಾಲಕ್ಕೆ ಕಟ್ಟುವುದು ಹೆಚ್ಚು ಸೂಕ್ತ. ಇದರಿಂದ ಸಾಲದ ಹೊರೆ ತಗ್ಗುತ್ತದೆ. ನೀವು ಸಾಲ ಪಡೆಯುವ ಮುನ್ನ ಬ್ಯಾಂಕ್ ಜೊತೆ ಈ ವಿಚಾರ ಮಾಡಿ ಇಂಥ ಸಾಧ್ಯತೆಯನ್ನು ವಿಚಾರಿಸಿದ್ದರೆ ಉತ್ತಮ. ಈಗಲೂ ಬ್ಯಾಂಕ್ ಸಂಪರ್ಕಿಸಿ ವಿಚಾರಿಸಿ.
ಕ್ರೆಡಿಟ್ ಸ್ಕೋರ್ ಗಮನದಲ್ಲಿರಲಿ: ನಿಮ್ಮೆಲ್ಲಾ ಸಾಲದ ಕಂತುಗಳನ್ನು ನಿಗದಿತ ಅವಧಿಯಲ್ಲಿ ಕಟ್ಟಿದರೆ ಮತ್ತು ಕ್ರೆಡಿಟ್ ಕಾರ್ಡ್ ಬಿಲ್ಲುಗಳನ್ನೂ ನಿಯಮಿತವಾಗಿ ಕಟ್ಟುತ್ತಾ ಬಂದಿದ್ದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಸಹಜವಾಗಿ ಉತ್ತಮವಾಗಿರುತ್ತದೆ. ಬ್ಯಾಂಕ್ನಿಂದ ನಿಮಗೆ ಅತ್ಯುತ್ತಮ ಬಡ್ಡಿ ದರದಲ್ಲಿ ಸಾಲದ ಆಫರ್ ಸಿಗುತ್ತದೆ. ನೀವು ಈಗಾಗಲೇ ಗೃಹಸಾಲ ಪಡೆದಿದ್ದು, ಕ್ರೆಡಿಟ್ ಸ್ಕೋರ್ ಕೂಡ ಉತ್ತಮವಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಬಲ್ಲ ಇತರ ಬ್ಯಾಂಕ್ಗೆ ನಿಮ್ಮ ಈಗಿನ ಸಾಲವನ್ನು ಟ್ರಾನ್ಸ್ಫರ್ ಮಾಡಬಹುದು. ಈ ರೀತಿಯ ಲೋನ್ ಟ್ರಾನ್ಸ್ಫರ್ ಈಗ ಸಾಮಾನ್ಯ.
ಓವರ್ಡ್ರಾಫ್ಟ್ ಸೌಲಭ್ಯ: ನಿಮ್ಮಲ್ಲಿ ಹೆಚ್ಚುವರಿ ಆದಾಯದ ನಿರೀಕ್ಷೆ ಇದ್ದರೆ ಗೃಹ ಸಾಲ ಪಡೆಯುವಾಗ ಓವರ್ಡ್ರಾಫ್ಟ್ ಸೌಲಭ್ಯ ಪಡೆಯಬಹುದು. ಈ ಸೌಲಭ್ಯದಲ್ಲಿ ಸಾಲಕ್ಕೆ ತುಸು ಹೆಚ್ಚಿನ ಬಡ್ಡಿ ದರ ಇರುತ್ತದೆಯಾದರೂ ನಿಮ್ಮಲ್ಲಿನ ಹೆಚ್ಚುವರಿ ಹಣವನ್ನು ಓವರ್ಡ್ರಾಫ್ಟ್ ಖಾತೆಯಲ್ಲಿ ಇರಿಸಬಹುದು. ಇದರಿಂದ ಬಡ್ಡಿ ಉಳಿಸಬಹುದು.
Published On - 2:05 pm, Sun, 19 February 23