ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್ಒ) ಎಂಬುದು ಸಾಮಾಜಿಕ ಭದ್ರತಾ ಸಂಸ್ಥೆ. ಅದರ ನಿರ್ವಹಣೆ ಮಾಡುವುದು ಭಾರತ ಸರ್ಕಾರ. ಇಪಿಎಫ್ (ಕಾರ್ಮಿಕರ ಭವಿಷ್ಯ ನಿಧಿ) ಅನ್ನು ಆನ್ಲೈನ್ನಲ್ಲೇ ವೆಬ್ಸೈಟ್ ಮೂಲಕ ವಿಥ್ಡ್ರಾ/ವರ್ಗಾವಣೆ ಮಾಡುವುದಕ್ಕೆ ಸಾಧ್ಯವಿದೆ. ಭಾರತದಲ್ಲಿ ಎಲ್ಲ ಸ್ಥಿರವಾದ ಸಿಬ್ಬಂದಿಗೂ ಬೇಸಿಕ್ ಪೇ- ಮೂಲವೇತನ (ಮತ್ತು ಅನ್ವಯ ಆಗುವಲ್ಲಿ ತುಟ್ಟಿಭತ್ಯೆ- ಡಿಯರ್ನೆಸ್ ಅಲೋವೆನ್ಸ್)ನ ಶೇ 12ರಷ್ಟು ಪ್ರತಿ ತಿಂಗಳು ಕೊಡುಗೆ ನೀಡಬೇಕು. ಉದ್ಯೋಗಿ ಮತ್ತು ಉದ್ಯೋಗದಾತರು ಜಮೆ ಮಾಡುವ ಮೊತ್ತ ಮತ್ತು ಅದರ ಮೇಲಿನ ಬಡ್ಡಿ ಸಿಬ್ಬಂದಿಯ ಪಿಎಫ್ ಖಾತೆಯಲ್ಲಿ ಇರುತ್ತದೆ. ಅದನ್ನು ಕೆಲವು ಷರತ್ತುಗಳೊಂದಿಗೆ ವಿಥ್ಡ್ರಾ ಮಾಡಬಹುದು.
ಇಪಿಎಫ್ ಎಂಬುದು ಭಾರತದಲ್ಲಿ ಉದ್ಯೋಗಿಗಳಿಗೆ ಉಳಿತಾಯ, ಪೆನ್ಷನ್ ಮತ್ತು ವಿಮೆ ಅನುಕೂಲಗಳನ್ನು ಒದಗಿಸುತ್ತದೆ. ಸಿಬ್ಬಂದಿ ತಮ್ಮ ನಿವೃತ್ತಿ ಸಮಯದಲ್ಲಿ ಅಥವಾ ಎರಡು ತಿಂಗಳಿಗಿಂತ ಹೆಚ್ಚು ಅವಧಿಗೆ ನಿರುದ್ಯೋಗಿಗಳಾದಾಗ ಇಪಿಎಫ್ ಖಾತೆಯಲ್ಲಿನ ಪೂರ್ತಿ ಮೊತ್ತವನ್ನು ವಿಥ್ಡ್ರಾ ಮಾಡಬಹುದು. ಕೆಲವು ಸಂದರ್ಭದಲ್ಲಿ ಭಾಗಶಃ ವಿಥ್ಡ್ರಾ ಮಾಡುವುದಕ್ಕೆ ಸಹ ಅವಕಾಶ ನೀಡಲಾಗಿದೆ. ಹಾಗಂದರೆ, ವೈದ್ಯಕೀಯ ತುರ್ತು, ಮದುವೆ, ವಿಪತ್ತು ಹಾಗೂ ಮನೆ ನವೀಕರಣಕ್ಕೆ ಭಾಗಶಃ ವಿಥ್ಡ್ರಾ ಮಾಡಬಹುದು.
ಆನ್ಲೈನ್ ಇಪಿಎಫ್ ವರ್ಗಾವಣೆ ಮಾಡುವುದು ಹೇಗೆ?
1) ಯೂನಿಫೈಡ್ ಮೆಂಬರ್ ಪೋರ್ಟಲ್ಗೆ ಭೇಟಿ ನೀಡಬೇಕು ಮತ್ತು ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಮೂಲಕ ಹಾಗೂ ಪಾಸ್ವರ್ಡ್ ಮೂಲಕ ಲಾಗಿನ್ ಆಗಬೇಕು.
2) ಆನ್ಲೈನ್ ಸರ್ವೀಸಸ್ಗೆ ತೆರಳಿ, ಅಲ್ಲಿ ಒನ್ ಮೆಂಬರ್- ಒನ್ ಇಪಿಎಫ್ ಅಕೌಂಟ್ (ಟ್ರಾನ್ಸ್ಫರ್ ರಿಕ್ವೆಸ್ಟ್) ಅನ್ನು ಕ್ಲಿಕ್ ಮಾಡಬೇಕು.
3) ವೈಯಕ್ತಿಕ ಮಾಹಿತಿ ಮತ್ತು ಸದ್ಯಕ್ಕಿರುವ ಉದ್ಯೋಗದ ಪಿಎಫ್ ಖಾತೆಯನ್ನು ಪರಿಶೀಲಿಸಿಕೊಳ್ಳಬೇಕು.
4) ಗೆಟ್ ಡೀಟೇಲ್ಸ್ ಕ್ಲಿಕ್ ಮಾಡಿದರೆ ಈ ಹಿಂದಿನ ಉದ್ಯೋಗದ ಪಿಎಫ್ ಖಾತೆ ಮಾಹಿತಿಯು ಕಾಣಿಸಿಕೊಳ್ಳುತ್ತದೆ.
5) ಒಂದೋ ಈ ಹಿಂದಿನ ಉದ್ಯೋಗದಾತರು ಅಥವಾ ಈಗಿನ ಉದ್ಯೋಗದಾತರು ಯಾರು ಎಂಬುದನ್ನು ಅರ್ಜಿ ಹಾಕುವ ಮುನ್ನ ಆಯ್ಕೆ ಮಾಡಿಕೊಳ್ಳಿ.
6) ಯುಎಎನ್ಗೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುವುದಕ್ಕೆ ಗೆಟ್ ಒಟಿಪಿ ಎಂಬುದರ ಮೇಲೆ ಕ್ಲಿಕ್ ಮಾಡಿ. ಒಟಿಪಿಯನ್ನು ನಮೂದಿಸಿ, ಸಬ್ಮಿಟ್ ಎಂಬುದರ ಮೇಲೆ ಕ್ಲಿಕ್ ಮಾಡಿ.
ಒಟಿಪಿಯನ್ನು ಸಲ್ಲಿಸಿದ ಮೇಲೆ ಕೆಲವು ಸ್ಕ್ಯಾನ್ಡ್ ದಾಖಲಾತಿಗಳ ಅಗತ್ಯ ಬರಬಹುದು. ಕ್ಲೇಮ್ ಅರ್ಜಿಯನ್ನು ಭರ್ತಿ ಮಾಡಿರುತ್ತೀರಲ್ಲಾ ಅದಕ್ಕೆ ಪೂರಕವಾದ ದಾಖಲಾತಿಗಳಿವು. ಯೂನಿಫೈಡ್ ಪೋರ್ಟಲ್ನಲ್ಲಿ ಉದ್ಯೋಗದಾತರಿಗೆ ಇಂಟರ್ಫೇಸ್ ಇರುತ್ತದೆ. ಅವರು ಆ ಮೂಲಕ ಇಪಿಎಫ್ ವರ್ಗಾವಣೆಗೆ ಡಿಜಿಟಲ್ ಆಗಿಯೇ ಮಂಜೂರು ಮಾಡುತ್ತಾರೆ. ಇದಕ್ಕೆ 15ರಿಂದ 20 ದಿನ ಸಮಯ ಆಗಬಹುದು. ಇಪಿಎಫ್ ಖಾತೆಗೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಹಣ ಬರುತ್ತದೆ. ಈ ಮಾಹಿತಿಯನ್ನು ಇಪಿಎಫ್ಒ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಹಂಚಿಕೊಂಡಿದೆ. ಇಪಿಎಫ್ಒದಿಂದ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ಗಳನ್ನು ನಿವೃತ್ತಿ ನಂತರದ ಆರ್ಥಿಕ ಭದ್ರತೆಗೆ ನಿರ್ವಹಣೆ ಮಾಡಲಾಗುತ್ತದೆ.
ಇದನ್ನೂ ಓದಿ: PF Benefits: ಇನ್ಷೂರೆನ್ಸ್ನಿಂದ ಪೆನ್ಷನ್ ತನಕ ಪ್ರಾವಿಡೆಂಟ್ ಫಂಡ್ 5 ಅನುಕೂಲಗಳು
(Here is the PF withdrawal rule to follow to get the money from EPFO or for transfer money from one account to another)
Published On - 11:22 am, Sat, 29 May 21