
ನವದೆಹಲಿ, ಸೆಪ್ಟೆಂಬರ್ 10: ವಿಶ್ವದ ಶ್ರೇಷ್ಠ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಭಾರತದ ಐಐಎಂಗಳು ಒಳಗೊಂಡಿವೆ. ಹಾಗೆಯೇ, ತಾಂತ್ರಿಕ ಶಿಕ್ಷಣದಲ್ಲೂ ಭಾರತದ ಹಲವು ಕಾಲೇಜು, ಯೂನಿವರ್ಸಿಟಿಗಳು ವಿಶ್ವ ಗುಣಮಟ್ಟದ್ದಾಗಿವೆ. ಭಾರತೀಯ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮ ಓಬಿರಾಯನ ಕಾಲದ್ದು ಎಂದು ಮೂಗು ಮುರಿಯುವವರಿಗೆ ಉತ್ತರ ಎಂಬಂತೆ, ವೆಂಚರ್ ಕ್ಯಾಪಿಟಲ್ ರಿಸರ್ಚ್ ಸಂಸ್ಥೆಯೊಂದು ಪ್ರಕಟಿಸಿದ ಪಟ್ಟಿ ಪ್ರಕಾರ, ವಿಶ್ವದ ಟಾಪ್-100 ಶಿಕ್ಷಣ ಸಂಸ್ಥೆಗಳ ಪೈಕಿ ಭಾರತದ ಎಂಟು ವಿವಿಗಳು ಸ್ಥಾನ ಪಡೆದಿವೆ. ‘ಪಿಚ್‌ಬುಕ್’ (PitchBook) ಪ್ರಕಟಿಸಿರುವ 2026ರ ಉದ್ಯಮಶೀಲತಾ ವಿಶ್ವವಿದ್ಯಾಲಯಗಳ ಶ್ರೇಯಾಂಕದಲ್ಲಿ (Global University Rankings for Entrepreneurs) ಭಾರತದ 8 ಪ್ರಮುಖ ಶಿಕ್ಷಣ ಸಂಸ್ಥೆಗಳು ವಿಶ್ವದ ಅಗ್ರ 100 ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ನವೋದ್ಯಮ (Start-up) ಹಾಗೂ ಉದ್ಯಮಶೀಲತೆಯ ಕ್ಷೇತ್ರದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (IITs) ಹಳೆಯ ವಿದ್ಯಾರ್ಥಿಗಳ ಕೊಡುಗೆಯನ್ನು ಈ ಶ್ರೇಯಾಂಕ ಎತ್ತಿಹಿಡಿದಿದೆ.
ಈ ಶ್ರೇಯಾಂಕವನ್ನು 2015ರ ಜನವರಿಯಿಂದ 2026ರ ಆಗಸ್ಟ್ ರವರೆಗೆ ವೆಂಚರ್ ಕ್ಯಾಪಿಟಲ್ (VC) ಹೂಡಿಕೆಗಳನ್ನು ಪಡೆದ ವಿಶ್ವದ 2.22 ಲಕ್ಷಕ್ಕೂ ಹೆಚ್ಚು ಉದ್ಯಮಿಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಹೊಸ ಕೈಗಾರಿಕಾ ಕ್ರಾಂತಿ; ಆರು ವಲಯಗಳ ಉತ್ಕೃಷ್ಟ ಬೆಳವಣಿಗೆ: ಜೆಫರೀಸ್ ವರದಿ
ಐಐಟಿ ಬಾಂಬೆಗೆ ಹೋಲಿಸಿದರೆ ಕಡಿಮೆ ಉದ್ಯಮಿಗಳನ್ನು ಹೊಂದಿದ್ದರೂ, ಹೂಡಿಕೆದಾರರಿಂದ $55.65 ಬಿಲಿಯನ್ ಬಂಡವಾಳ ಸಂಗ್ರಹಿಸುವ ಮೂಲಕ ಐಐಟಿ ದೆಹಲಿ ಅಗ್ರಸ್ಥಾನದಲ್ಲಿದೆ. ಐಐಟಿ ಬಾಂಬೆ $33.64 ಬಿಲಿಯನ್, ಐಐಟಿ ಖರಗ್‌ಪುರ $23.19 ಬಿಲಿಯನ್, ಐಐಟಿ ಮದ್ರಾಸ್ $22.98ಬಿಲಿಯನ್ ಹಾಗೂ ಐಐಟಿ ಕಾನ್ಪುರ $21.2 ಬಿಲಿಯನ್ ನಿಧಿ ಸಂಗ್ರಹಿಸಿವೆ.
ಇದನ್ನೂ ಓದಿ: ಟರ್ಮ್ ಇನ್ಷೂರೆನ್ಸ್ಗೆ ಏಜೆಂಟ್ಗಳು ಶಿಫಾರಸು ಮಾಡೋದು ನೋಡಿದ್ದೀರಾ? ಇಲ್ಲಿವೆ ಉತ್ತಮ ಲಾಭ ತರುವ ಕೆಲ ಹೂಡಿಕೆಗಳು
ಐಐಟಿಗಳ ಕೊಡುಗೆ: ಶ್ರೇಯಾಂಕದ ಅಗ್ರ 100 ರಲ್ಲಿರುವ ಭಾರತದ 5 ಐಐಟಿಗಳು ಒಟ್ಟಾಗಿ 2,705 ಉದ್ಯಮಿಗಳು ಮತ್ತು 2,256 ಕಂಪನಿಗಳನ್ನು ಸೃಷ್ಟಿಸಿದ್ದು, ಒಟ್ಟು $156.65 ಬಿಲಿಯನ್ ಮೊತ್ತದಷ್ಟು ವೆಂಚರ್ ಕ್ಯಾಪಿಟಲ್ ನಿಧಿಯನ್ನು ಸಂಗ್ರಹಿಸಿವೆ.
ದೇಶಗಳ ಹಂತದಲ್ಲಿ ಭಾರತಕ್ಕೆ 3ನೇ ಸ್ಥಾನ: ಜಾಗತಿಕ ಪಟ್ಟಿಯಲ್ಲಿ 62 ವಿಶ್ವವಿದ್ಯಾಲಯಗಳೊಂದಿಗೆ ಅಮೆರಿಕ (US) ಪ್ರಥಮ ಸ್ಥಾನದಲ್ಲಿದ್ದರೆ, ತಲಾ 8 ವಿಶ್ವವಿದ್ಯಾಲಯಗಳೊಂದಿಗೆ ಕೆನಡಾ ಮತ್ತು ಭಾರತ ಜಂಟಿ 2ನೇ ಸ್ಥಾನವನ್ನು ಹಂಚಿಕೊಂಡಿವೆ. ಯುಸಿ ಬರ್ಕ್ಲಿ (UC Berkeley) ವಿಶ್ವದ ಪ್ರಥಮ ಶ್ರೇಯಾಂಕಿತ ಸಂಸ್ಥೆಯಾಗಿ ಹೊರಹೊಮ್ಮಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ