ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಸೋಲಾರ್ ಪಿವಿ ಮಾಡ್ಯೂಲ್; ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 43,000

PLI scheme for Solar Module manufacturing creates 43,000 jobs in 9 states: ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಸೋಲಾರ್ ಫೋಟೋ ವೋಲ್ಟಾಯ್ಕ್ ಮಾಡ್ಯೂಲ್​ಗಳನ್ನು ತಯಾರಿಸಲು ವಿವಿಧ ಸಂಸ್ಥೆಗಳಿಗೆ ಅನುಮತಿಸಲಾಗಿದೆ. ದೇಶಾದ್ಯಂತ 9 ರಾಜ್ಯಗಳಲ್ಲಿ ಸ್ಥಾಪನೆಯಾಗಿರುವ ಪಿವಿ ಮಾಡ್ಯೂಲ್ ಘಟಕಗಳಿಂದ 43,000 ಉದ್ಯೋಗಗಳು ಸೃಷ್ಟಿಯಾಗಿವೆ. ಗುಜರಾತ್​ನಲ್ಲೇ ಅರ್ಧದಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ. ತಮಿಳುನಾಡಿನಲ್ಲೂ 6,800 ಉದ್ಯೋಗಗಳು ಸೃಷ್ಟಿಯಾಗಿವೆ.

ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಸೋಲಾರ್ ಪಿವಿ ಮಾಡ್ಯೂಲ್; ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 43,000
ಸೋಲಾರ್ ಪ್ಯಾನಲ್

Updated on: Dec 04, 2025 | 5:04 PM

ನವದೆಹಲಿ, ಡಿಸೆಂಬರ್ 4: ಸೋಲಾರ್ ಪಿವಿ ಮಾಡ್ಯೂಲ್​ಗಳ (Solar PV Modules) ತಯಾರಿಕೆಗೆ ಪುಷ್ಟಿ ನೀಡಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪಿಎಲ್​ಐ ಸ್ಕೀಮ್​ನಿಂದ (PLI scheme) ದೇಶಾದ್ಯಂತ 43,000 ಉದ್ಯೋಗಗಳು ಸೃಷ್ಟಿಯಾಗಿವೆ. ಇದರಲ್ಲಿ 11,220 ನೇರ ಉದ್ಯೋಗಗಳು ಒಳಗೊಂಡಿವೆ. ಲೋಕಸಭೆಯಲ್ಲಿ ಸಲ್ಲಿಕೆಯಾಗಿರುವ ದತ್ತಾಂಶದಿಂದ ಈ ಮಾಹಿತಿ ತಿಳಿದುಬಂದಿದೆ.

2025ರ ಅಕ್ಟೋಬರ್​ವರೆಗೂ ಈ ಪಿವಿ ಮಾಡ್ಯೂಲ್ ಪಿಎಲ್​ಐ ಸ್ಕೀಮ್​ನಿಂದ 43,000 ಉದ್ಯೋಗಗಳ ಸೃಷ್ಟಿಯಾಗಿರುವುದು ತಿಳಿದುಬಂದಿದೆ. ಗುಜರಾತ್, ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಾಗೂ ಒಡಿಶಾ ಈ ಒಂಬತ್ತು ರಾಜ್ಯಗಳಲ್ಲಿ ಸೋಲಾರ್ ಮಾಡ್ಯೂಲ್ ಪಿಎಲ್​ಐ ಸ್ಕೀಮ್​ನಿಂದ ಈ ಉದ್ಯೋಗಗಳು ಸಿಕ್ಕಿವೆ.

ಇದನ್ನೂ ಓದಿ: ಟ್ಯಾರಿಫ್​ನಿಂದ ರುಪಾಯಿ ಮೌಲ್ಯ ಕುಸಿದಿದೆ, ಆದರೆ, ಕರೆನ್ಸಿ ದುರ್ಬಲಗೊಂಡಿಲ್ಲ: ಎಸ್​ಬಿಐ ರಿಸರ್ಚ್

ರಿಲಾಯನ್ಸ್ ಇಂಡಸ್ಟ್ರೀಸ್, ಅದಾನಿ ನ್ಯೂ ಇಂಡಸ್ಟ್ರೀಸ್, ಎಫ್​ಎಸ್ ಇಂಡಿಯಾ ಸೋಲಾರ್ ವೆಂಚರ್ಸ್, ವಿಎಸ್​ಎಲ್ ಗ್ರೀನ್ ಪವರ್, ಟಿಪಿ ಸೋಲಾರ್, ಆಂಪಿನ್ ಸೋಲಾರ್, ರಿನ್ಯೂ ಫೋಟೋ ವೋಲ್ಟಾಯ್ಕ್ಸ್, ಗ್ರಿವ್ ಎನರ್ಜಿ, ಅವಾಡ ಎಲೆಕ್ಟ್ರೋ ಮೊದಲಾದ ಸಂಸ್ಥೆಗಳು ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಪಿವಿ ಮಾಡ್ಯೂಲ್​ಗಳ ತಯಾರಿಕಾ ಘಟಕಗಳನ್ನು ಸ್ಥಾಪನೆ ಮಾಡಿವೆ.

ರಿಲಾಯನ್ಸ್ ಇಂಡಸ್ಟ್ರೀಸ್, ಅದಾನಿ ನ್ಯೂ ಇಂಡಸ್ಟ್ರೀಸ್ ಮೊದಲಾದ ಕಂಪನಿಗಳು ಭಾರೀ ಹೂಡಿಕೆಯೊಂದಿಗೆ ಗುಜರಾತ್​ನಲ್ಲಿ ಪಿವಿ ಮಾಡ್ಯೂಲ್ ತಯಾರಿಕಾ ಘಟಕಗಳನ್ನು ಸ್ಥಾಪನೆ ಮಾಡಿವೆ. ಈ ರಾಜ್ಯವೊಂದರಲ್ಲೇ 22,400 ಮಂದಿಗೆ ಕೆಲಸ ಸಿಕ್ಕಿದೆ. ತಮಿಳುನಾಡಿನಲ್ಲಿ 6,800 ಉದ್ಯೋಗಗಳು ಸೃಷ್ಟಿಯಾಗಿವೆ.

ಇದನ್ನೂ ಓದಿ: ಭಾರತದಲ್ಲಿ ಈ 3 ಬ್ಯಾಂಕುಗಳು ಅತೀ ಸುರಕ್ಷಿತವೆಂದು ಆರ್​ಬಿಐ ಘೋಷಣೆ; ಇವುಗಳಿಗೆ ವಿಶೇಷ ಮಾರ್ಗಸೂಚಿ

ಭಾರತದಲ್ಲಿ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಅನುಮತಿಸಲಾಗಿರುವ ಘಟಕಗಳಿಂದ ಒಟ್ಟು 48.3 ಗಿಗಾವ್ಯಾಟ್ ಪಿವಿ ಮಾಡ್ಯೂಲ್ ತಯಾರಿಕಾ ಸಾಮರ್ಥ್ಯ ಹೆಚ್ಚಲಿದೆ. ಸದ್ಯ ಭಾರತದಲ್ಲಿ ಇದರ ಸಾಮರ್ಥ್ಯ 121.68 ಗಿಗಾವ್ಯಾಟ್​ನಷ್ಟಿದೆ. ಈಗಲೂ ಕೂಡ ಚೀನಾದಿಂದ ಸಾಕಷ್ಟು ಪಿವಿ ಮಾಡ್ಯೂಲ್​ಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಜಗತ್ತಿನಲ್ಲಿ ಪಿವಿ ಮಾಡ್ಯೂಲ್​ಗಳನ್ನು ಅತಿಹೆಚ್ಚು ತಯಾರಿಸುತ್ತಿರುವುದು ಮತ್ತು ರಫ್ತು ಮಾಡುತ್ತಿರುವುದು ಚೀನಾ ದೇಶವೇ.

ಚೀನಾ ಒಂದು ವರ್ಷದಲ್ಲಿ ಸುಮಾರು 236 ಗಿಗಾವ್ಯಾಟ್​ನಷ್ಟು ಪಿವಿ ಮಾಡ್ಯೂಲ್​ಗಳನ್ನು ರಫ್ತು ಮಾಡುತ್ತದೆ. ಅದರ ಸ್ಥಾಪಿತ ಪಿವಿ ಘಟಕಗಳ ಸಾಮರ್ಥ್ಯ ಇನ್ನೂ ಅಧಿಕ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ