
ನವದೆಹಲಿ, ನವೆಂಬರ್ 19: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ (PM Fasal Bima Yojana) ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ. ಅದರ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ದೇಶಾದ್ಯಂತ ಹೆಚ್ಚಿನ ರೈತರು (farmers) ಕೇಳುತ್ತಾ ಬಂದಿದ್ದ ಬೇಡಿಕೆಯೊಂದನ್ನು ಪರಿಗಣಿಸಿ ಈ ಮಾರ್ಪಾಡು ಮಾಡಲಾಗಿದೆ. ಬೆಳೆ ವಿಮೆಯ (crop insurance) ವ್ಯಾಪ್ತಿಯಲ್ಲಿರುವ ಸ್ಥಳೀಯ ಅಪಾಯಗಳ (risks) ಪಟ್ಟಿಗೆ ಕಾಡು ಪ್ರಾಣಿ ದಾಳಿಯನ್ನೂ ಸೇರಿಸಲಾಗಿದೆ.
ಅಂದರೆ, ಕಾಡಾನೆ, ಮಂಗಗಳು ಇತ್ಯಾದಿ ಕಾಡುಪ್ರಾಣಿಗಳ ದಾಳಿಯಿಂದ ಬೆಳೆಗೆ ಹಾನಿಯಾದರೆ ಅದರ ನಷ್ಟವನ್ನು ವಿಮಾ ಸಂಸ್ಥೆಗಳು ತುಂಬಿಕೊಡುತ್ತವೆ. ಪಿಎಂ ಫಸಲ್ ಬಿಮಾ ಯೋಜನೆಯ ರಿಸ್ಕ್ ಪಟ್ಟಿಯಲ್ಲಿ ಈಗ ಇದನ್ನು ಹೊಸದಾಗಿ ಸೇರಿಸಲಾಗಿದೆ. ಇದು ಐದನೇ ಸೇರ್ಪಡೆಯಾಗಿದೆ.
ಹಾಗೆಯೇ, ಸ್ಥಳೀಕೃತ ವಿಪತ್ತು ಅಪಾಯಗಳ ಪಟ್ಟಿಗೆ ಭತ್ತ ಮುಳುಗಡೆಯನ್ನೂ ಸೇರಿಸಲಾಗಿದೆ. 2018ರಲ್ಲಿ ಇದನ್ನು ತೆಗೆದುಹಾಕಲಾಗಿತ್ತು. ಈಗ ಮತ್ತೆ ಇದನ್ನು ಪಟ್ಟಿಗೆ ಸೇರಿಸಿರುವುದು ಕರ್ನಾಟಕ ಸೇರಿದಂತೆ ಪ್ರವಾಹಪೀಡಿತ ರಾಜ್ಯಗಳಲ್ಲಿನ ಭತ್ತ ಬೆಳೆಗಾರರಿಗೆ ಸಮಾಧಾನ ತರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ
ಯಾವ ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾದರೆ ವಿಮಾ ಪರಿಹಾರ ಸಿಗುತ್ತದೆ, ಯಾವ ಜಿಲ್ಲೆಗಳು ಪ್ರವಾಹ ಸೂಕ್ಷ್ಮವಾಗಿವೆ ಎಂಬುದನ್ನು ಅವಲೋಕಿಸಿ ರಾಜ್ಯ ಸರ್ಕಾರಗಳು ಪಟ್ಟಿ ಬಿಡುಗಡೆ ಮಾಡಲಿವೆ. ಈ ಮೇಲಿನ ಪಿಎಂ ಫಸಲ್ ಬಿಮಾ ಯೋಜನೆಯ ಮಾರ್ಪಾಡುಗಳು 2026ರ ಬೇಸಿಗೆ ಹಂಗಾಮಿನಿಂದ (Kharif season) ಜಾರಿಗೆ ಬರಲಿವೆ.
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗೆ ವಿಮೆ ಮಾಡಿಸಬಹುದು. ನೈಸರ್ಗಿಕ ವಿಕೋಪಗಳಿಂದ ಬೆಳೆ ನಷ್ಟವಾದರೆ ವಿಮಾ ಪರಿಹಾರ ಸಿಗುತ್ತದೆ. ಬೆಳೆ ನಾಶವಾದಾಗ ರೈತರು ಬೆಳೆ ವಿಮೆ ಆ್ಯಪ್ ಮೂಲಕ 72 ಗಂಟೆಯೊಳಗೆ ರಿಪೋರ್ಟ್ ನೀಡಬೇಕು.
ಇದನ್ನೂ ಓದಿ: ಬರಲಿದೆ ಹೊಸ ಆಧಾರ್; ಹೆಸರು, ನಂಬರ್, ವಿಳಾಸ ಮರೆಮಾಚಿರುವ ಕಾರ್ಡ್ ಸದ್ಯದಲ್ಲೇ
ಬೇಸಿಗೆ ಹಂಗಾಮಿನ ಬೆಳೆಗಳಿಗೆ ಇನ್ಷೂರೆನ್ಸ್ ಪ್ರೀಮಿಯಮ್ ಶೇ. 2 ಎಂದು ನಿಗದಿ ಮಾಡಲಾಗಿದೆ. ಅಂದರೆ, 50,000 ರೂನ ಇನ್ಷೂರೆನ್ಸ್ ಮಾಡಿಸಿದರೆ ಅದರ ಪ್ರೀಮಿಯಮ್ 1,000 ರೂ ಇರುತ್ತದೆ. ಇನ್ನು, ಹಿಂಗಾರು ಬೆಳೆಗಳಿಗೆ (Rabi crops) ಇನ್ಷೂರೆನ್ಸ್ ಪ್ರೀಮಿಯಮ್ ಶೇ. 1.5ರಷ್ಟು ಇದೆ. ವಾಣಿಜ್ಯ ಬೆಳೆಗಳಿಗೆ (commercial crops) ಶೇ. 5 ಪ್ರೀಮಿಯಮ್ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ