ಪಿಎಂ ಜನ್ ಧನ್ ಅಕೌಂಟ್, ಹೊಸದಾಗಿ ಕೆವೈಸಿ ಮಾಡಿಸಿ: ನಿಮ್ಮ ಊರಿಗೇ ಬಂದಿದೆ ಬ್ಯಾಂಕ್​ನ ಕ್ಯಾಂಪ್

PM Jan Dhan accounts re-KYC: ಪಿಎಂ ಜನ್ ಧನ್ ಯೋಜನೆ ಅಡಿ ತೆರೆಯಲಾದ ಬ್ಯಾಂಕ್ ಖಾತೆಗಳಿಗೆ ಕೆವೈಸಿ ನವೀಕರಣ ಪಡೆಯುತ್ತಿವೆ ಬ್ಯಾಂಕುಗಳು. ಜನರಿಗೆ ಅನುಕೂಲವಾಗಲೆಂದು ಪಂಚಾಯಿತಿ ಮಟ್ಟದಲ್ಲೇ ಬ್ಯಾಂಕುಗಳು ಕ್ಯಾಂಪ್ ಹಾಕಿವೆ. ಹತ್ತು ವರ್ಷದಿಂದ ಕೆವೈಸಿ ಅಪ್​ಡೇಟ್ ಆಗದ ಬ್ಯಾಂಕ್ ಖಾತೆಗಳಿಗೆ ಕೆವೈಸಿ ನವೀಕರಣ ಪಡೆಯಲಾಗುತ್ತಿದೆ ಎಂದು ಆರ್​ಬಿಐ ಗವರ್ನರ್ ತಿಳಿಸಿದ್ದಾರೆ.

ಪಿಎಂ ಜನ್ ಧನ್ ಅಕೌಂಟ್, ಹೊಸದಾಗಿ ಕೆವೈಸಿ ಮಾಡಿಸಿ: ನಿಮ್ಮ ಊರಿಗೇ ಬಂದಿದೆ ಬ್ಯಾಂಕ್​ನ ಕ್ಯಾಂಪ್
ಬ್ಯಾಂಕು

Updated on: Aug 06, 2025 | 3:23 PM

ನವದೆಹಲಿ, ಆಗಸ್ಟ್ 5: ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (RBI governor Sanjay Malhotra) ಇಂದು ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸುವಾಗ, ಪಿಎಂ ಜನ್ ಧನ್ ಯೋಜನೆಯಡಿಯ (PM Jan Dhan Yojana) ಬ್ಯಾಂಕ್ ಖಾತೆಗಳಿಗೆ ಮರು ಕೆವೈಸಿ ಮಾಡಬೇಕಾದ ಸಂಗತಿಯನ್ನು ವಿವರಿಸಿದ್ದಾರೆ. ಸೆಪ್ಟೆಂಬರ್ 30ರವರೆಗೆ ಈ ಕೆವೈಸಿ ಪಡೆಯಲೆಂದೇ ಬ್ಯಾಂಕುಗಳು ಪಂಚಾಯಿತಿ ಮಟ್ಟದಲ್ಲಿ ಕ್ಯಾಂಪ್ ಹಾಕಿರುವುದನ್ನು ಅವರು ತಿಳಿಸಿದ್ದಾರೆ.

ಪಿಎಂ ಜನ್ ಧನ್ ಯೋಜನೆ ಶುರುವಾಗಿ 10 ವರ್ಷ ಆಗಿದೆ. ಈ ಯೋಜನೆ ಅಡಿ ಹಲವು ಕೋಟಿಗಳ ಸಂಖ್ಯೆಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಪೈಕಿ ಸಾಕಷ್ಟು ಖಾತೆಗಳಿಗೂ 10 ವರ್ಷ ಆಗಿದ್ದು, ಪುನರ್​ಕೆವೈಸಿ ಆಗಿಲ್ಲ. ನವೀಕರಣದ ಅಗತ್ಯ ಇರುವ ಜನ್ ಧನ್ ಖಾತೆಗಳಿಗೆ ಗ್ರಾಹಕರಿಂದ ಕೆವೈಸಿ ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ.

ಇದನ್ನೂ ಓದಿ: T-bill SIP: ಸರ್ಕಾರದ ಟ್ರೆಷರಿ ಬಿಲ್​ಗಳಲ್ಲಿ ಎಸ್​ಐಪಿ ಮೂಲಕ ಹೂಡಿಕೆ; ಆರ್​ಬಿಐ ರಿಟೇಲ್ ಡೈರೆಕ್ಟ್​ನಲ್ಲಿ ಅವಕಾಶ

ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ನೀಡಿದ ಮಾಹಿತಿ ಪ್ರಕಾರ ಜನ್ ಧನ್ ಖಾತೆ ವಿತರಿಸಿರುವ ಬ್ಯಾಂಕುಗಳು ಜನರ ಮನೆ ಬಳಿಯೇ ಹೋಗಿ ಕೆವೈಸಿ ಪಡೆಯುತ್ತಿವೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಬ್ಯಾಂಕುಗಳು ಕ್ಯಾಂಪ್ ಹಾಕಿವೆ. ಜುಲೈ 1ರಿಂದಲೇ ಈ ಕಾರ್ಯ ನಡೆಯುತ್ತಿದ್ದು, ಸೆಪ್ಟೆಂಬರ್ 30ರವರೆಗೂ ಇರಲಿದೆ.

ಬ್ಯಾಂಕುಗಳ ಈ ಶಿಬಿರಗಳಲ್ಲಿ ಜನ್ ಧನ್ ಖಾತೆಗಳ ಕೆವೈಸಿ ನವೀಕರಣ ಕಾರ್ಯ ಮಾತ್ರವಲ್ಲದೇ, ಕಿರುವಿಮೆ ಅಥವಾ ಮೈಕ್ರೋ ಇನ್ಷೂರೆನ್ಸ್, ಪೆನ್ಷನ್ ಸ್ಕೀಮ್ ಇತ್ಯಾದಿ ಸೌಲಭ್ಯಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸಲಾಗುತ್ತದೆ. ಗ್ರಾಹಕರ ಕುಂದುಕೊರತೆಗಳನ್ನೂ ಆಲಿಸಿ ಪರಿಹಾರ ನೀಡುವ ಪ್ರಯತ್ನವಾಗಲಿದೆ.

ಪಿಎಂ ಜನ್ ಧನ್ ಯೋಜನೆ ಅಡಿ 55 ಕೋಟಿ ಬ್ಯಾಂಕ್ ಖಾತೆಗಳನ್ನು ಜನರು ತೆರೆದಿದ್ದಾರೆ. ಕೆವೈಸಿ ನವೀಕರಣ ಪಡೆಯಲು ಬ್ಯಾಂಕುಗಳು ಒಂದು ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಕ್ಯಾಂಪ್​ಗಳನ್ನು ಹಾಕಿವೆ.

ಇದನ್ನೂ ಓದಿ: RBI Monetary Policy: ಕೆವೈಸಿಯಿಂದ ಹಿಡಿದು ರೀಟೇಲ್ ಡೈರೆಕ್ಟ್​ವರೆಗೆ ಆರ್​ಬಿಐನಿಂದ ಮೂರು ಮಹತ್ವದ ಗ್ರಾಹಕಕೇಂದ್ರಿತ ಕ್ರಮಗಳ ಘೋಷಣೆ

ಕೆವೈಸಿ ನವೀಕರಣ ಯಾಕೆ?

ಬ್ಯಾಂಕುಗಳಾಗಲೀ, ಯಾವುದೇ ಹೂಡಿಕೆ ಮತ್ತು ಹಣಕಾಸು ಸೇವಾ ಸಂಸ್ಥೆಗಳಾಗಲೀ ಗ್ರಾಹಕರ ಮಾಹಿತಿಯನ್ನು ಕಾಲಕಾಲಕ್ಕೆ ನವೀಕರಿಸುತ್ತವೆ. ಗ್ರಾಹಕರು ಜೀವಂತವಾಗಿದ್ದಾರಾ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಒಂದು ಉದ್ದೇಶ. ಹಾಗೆಯೇ, ಗ್ರಾಹಕರ ವಿಳಾಸ ಇತ್ಯಾದಿ ಯಾವುದಾದರೂ ಮಾಹಿತಿಯಲ್ಲಿ ಬದಲಾವಣೆ ಆಗಿದ್ದರೆ ಅದನ್ನು ಪಡೆಯಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ