ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Scheme) 15ನೇ ಕಂತಿನ ಹಣ ಬಿಡುಗಡೆ ದೀಪಾವಳಿ ಹಬ್ಬದ ಬಳಿಕ ಆಗಲಿದೆ. ವರದಿಗಳ ಪ್ರಕಾರ, ನವೆಂಬರ್ ಕೊನೆಯ ವಾರದಲ್ಲಿ 8 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಬಹುದು. ಬೆಳಗಾವಿಯಲ್ಲಿ ಮಾರ್ಚ್ 27ರಂದು 13ನೇ ಕಂತಿನ ಹಣ ಬಿಡುಗಡೆಯನ್ನು ನರೇಂದ್ರ ಮೋದಿ ಘೋಷಿಸಿದ್ದರು. 14ನೇ ಕಂತಿನ ಹಣವನ್ನು ರಾಜಸ್ಥಾನದಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ 15ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ನಡೆದಿದೆ.
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಮಾಡಿಸುವುದು ಕಡ್ಡಾಯ. ಕೆವೈಸಿ ಅಪ್ಡೇಟ್ ಮಾಡಿರುವವರಿಗೆ ಮಾತ್ರವೇ ಹಣ ಸಿಗುತ್ತದೆ. ಇನ್ನೂ ಕೆವೈಸಿ ಅಪ್ಡೇಟ್ ಮಾಡದವರು, ಮತ್ತು ಆಧಾರ್ ದಾಖಲೆಯಲ್ಲಿರುವ ಹೆಸರಿನ ಪ್ರಕಾರ ನೊಂದಣಿ ಮಾಡದವರ ಖಾತೆಗಳಿಗೂ ಹಣ ಸಿಗುವುದಿಲ್ಲ. ಆನ್ಲೈನ್ ಮೂಲಕ ಕೆವೈಸಿ ಅಪ್ಡೇಟ್ ಮಾಡಲು ಸರ್ಕಾರ ವಿವಿಧ ಮಾರ್ಗಗಳನ್ನು ನೀಡಿದೆ.
ಪಿಎಂ ಕಿಸಾನ್ ಪೋರ್ಟಲ್ನಲ್ಲಿ ಇಕೆವೈಸಿ ಅಪ್ಡೇಟ್ ಮಾಡುವ ಆಯ್ಕೆ ಇದೆ. ಆನ್ಲೈನ್ನಲ್ಲಿ ಕಷ್ಟವಾದವರಿಗೆ ಅವರ ಗ್ರಾಮದ ಸಮೀಪದ ಸಿಎಸ್ಸಿ ಸೆಂಟರ್ಗಳಿಗೆ ಹೋಗಿ ಬಯೋಮೆಟ್ರಿಕ್ ನೀಡಿ ಇಕೆವೈಸಿ ಸಲ್ಲಿಸಬಹುದು.
ಇದನ್ನೂ ಓದಿ: RML: ವಯಸ್ಸಾದವರಿಗೊಂದು ಹಣಕಾಸು ಅಸ್ತ್ರ; ಮನೆಪತ್ರ ಅಡ ಇಟ್ಟು ಹಣ ಪಡೆಯಿರಿ, ಸಾಯುವವರೆಗೂ ಮನೆಮಾಲೀಕರಾಗಿರಿ
2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ವ್ಯವಸಾಯಕ್ಕೆ ಧನ ಸಹಾಯ ನೀಡುವ ಉದ್ದೇಶ ಹೊಂದಿದೆ. ವರ್ಷಕ್ಕೆ ಮೂರು ಕಂತುಗಳಲ್ಲಿ 2,000 ರೂಗಳಂತೆ ಒಟ್ಟು ಒಂದು ವರ್ಷದಲ್ಲಿ 6,000 ರೂ ನೀಡಲಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ಏಪ್ರಿಲ್ನಿಂದ ಜುಲೈವರೆಗೆ, ಆಗಸ್ಟ್ನಿಂದ ನವೆಂಬರ್ವರೆಗೆ, ಹಾಗೂ ಡಿಸೆಂಬರ್ನಿಂದ ಮಾರ್ಚ್ವರೆಗೆ ಹೀಗೆ ಮೂರು ಅವಧಿಗಳಲ್ಲಿ ರೈತರ ಖಾತೆಗಳಿಗೆ ಸರ್ಕಾರ ನೇರವಾಗಿ ಹಣ ಬಿಡುಗಡೆ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Mon, 6 November 23