ಎಐ ಕ್ಷೇತ್ರದ ಭಾರತೀಯ ಕಂಪನಿಗಳ ಸಿಇಒಗಳು, ಪರಿಣಿತರ ಜೊತೆ ಪ್ರಧಾನಿ ಮೋದಿ ಸಭೆ
PM Modi interaction with CEOs and experts in AI field: ಎಚ್ಸಿಎಲ್ ಟೆಕ್, ವಿಪ್ರೋ ಇತ್ಯಾದಿ ಎಐ ಕ್ಷೇತ್ರದಲ್ಲಿ ತೊಡಗಿರುವ ಭಾರತೀಯ ಕಂಪನಿಗಳ ಸಿಇಒಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಮುಂದಿನ ತಿಂಗಳು (2026ರ ಫೆಬ್ರುವರಿ) ನಡೆಯಲಿರುವ ಎಐ ಇಂಪ್ಯಾಕ್ಟ್ ಸಮಾವೇಶಕ್ಕೆ ಪೂರ್ವಬಾವಿಯಾಗಿ ಈ ಕಾರ್ಯಕ್ರಮ ನಡೆದಿದೆ. ಭಾರತ ಎಐ ಕ್ಷೇತ್ರದಲ್ಲಿ ಸ್ವಾವಂಬನೆ ಸಾಧಿಸಲು ತಮ್ಮ ಸಹಕಾರ ಇರುತ್ತದೆ ಎಂದು ಟೆಕ್ ಕಂಪನಿಗಳ ಸಿಇಒಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ.

ನವದೆಹಲಿ, ಜನವರಿ 29: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಎಐ ಕ್ಷೇತ್ರದ ಪರಿಣಿತರು ಮತ್ತು ಸಿಇಒಗಳ ಜೊತೆ ಸಭೆ ನಡೆಸಿದರು. ಲೋಕ ಕಲ್ಯಾಣ್ ಮಾರ್ಗ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಿತು. ಫೆಬ್ರುವರಿಯಲ್ಲಿ ನಡೆಯಲಿರುವ ಇಂಡಿಯಾಎಐ ಇಂಪ್ಯಾಕ್ಟ್ ಸಮಿಟ್ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಪ್ರಧಾನಿಗಳು ಈ ಸಭೆ ನಡೆಸಿದ್ದಾರೆ. ಎಐ ಟೆಕ್ನಾಲಜಿಯಲ್ಲಿ ಸ್ವಾವಲಂಬನೆ ಸಾಧಿಸಬೇಕೆನ್ನುವ ಸರ್ಕಾರದ ಗುರಿಗೆ ಬೆಂಬಲವಾಗಿ ನಿಲ್ಲುವುದಾಗಿ ಸಿಇಒಗಳು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಯುಪಿಐ ರೂಪಿಸುವ ಮೂಲಕ ಭಾರತ ತಾನು ತಾಂತ್ರಿಕ ನಾವೀನ್ಯತೆ ಮಾಡಬಲ್ಲುದು ಎಂಬುದನ್ನು ಸಾಬೀತುಪಡಿಸಿದೆ. ಎಐ ಕ್ಷೇತ್ರದಲ್ಲೂ ಇದನ್ನೇ ಆಗುತ್ತದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಜನಸಂಖ್ಯಾ ಬಲ ಇದೆ, ವೈವಿಧ್ಯತೆ ಇದೆ, ಪ್ರಜಾತಂತ್ರ ಸಿಸ್ಟಂ ಇದೆ. ಈ ವಿಶೇಷ ಸಮ್ಮಿಳನವು ಭಾರತದ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಬಗ್ಗೆ ವಿಶ್ವದ ನಂಬಿಕೆ ಬೆಳೆಯಲು ಕಾರಣವಾಗಿದೆ ಎಂದೂ ಪ್ರಧಾನಿಗಳು ಬಣ್ಣಿಸಿದ್ದಾರೆ.
ಇದನ್ನೂ ಓದಿ: Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ
ತಂತ್ರಜ್ಞಾನದ ಹಂಚಿಕೆ ಮತ್ತು ಡಾಟಾ ಸೆಕ್ಯೂರಿಟಿಬಹಳ ಮಹತ್ವದ್ದು ಎಂದಿರುವ ಮೋದಿ, ನಿಷ್ಪಕ್ಷಪಾತವಾದ, ಸುಭದ್ರವಾದ ಮತ್ತು ಪಾರದರ್ಶಕವಾದ ಎಐ ಇಕೋಸಿಸ್ಟಂ ನಿರ್ಮಾಣಕ್ಕೆ ತಾವೆಲ್ಲರೂ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಎಐ ಟೆಕ್ ಸಿಇಒಗಳಿಗೆ ಕರೆ ನೀಡಿದ್ದಾರೆ.
ವಿಪ್ರೋ, ಟಿಸಿಎಸ್, ಎಚ್ಸಿಎಲ್ ಟೆಕ್, ಝೋಹೋ ಕಾರ್ಪೊರೇಶನ್, ಎಲ್ಟಿಐ ಮೈಂಡ್ಟ್ರೀ, ಜಿಯೋ ಪ್ಲಾಟ್ಫಾರ್ಮ್ಸ್, ಅದಾನಿ ಕಾನೆಕ್ಸ್, ಎನ್ನೆಕ್ಸ್ಟ್ರಾ ಡಾಟಾ, ನೆಟ್ವೆಬ್ ಟೆಕ್ನಾಲಜೀಸ್ ಇತ್ಯಾದಿ ಎಐ ಕ್ಷೇತ್ರದಲ್ಲಿ ತೊಡಗಿರುವ ಕಂಪನಿಗಳ ಸಿಇಒಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಹಾಗೆಯೇ, ಐಐಐಟಿ ಹೈದರಾಬಾದ್, ಐಐಟಿ ಮದ್ರಾಸ್, ಐಐಟಿ ಬಾಂಬೆಯಿಂದ ಪರಿಣಿತರೂ ಕೂಡ ಪಾಲ್ಗೊಂಡಿದ್ದರು. ಸರ್ಕಾರದ ಪರವಾಗಿ ಪ್ರಧಾನಿ ಜೊತೆ ಸಚಿವರಾದ ಅಶ್ವಿನಿ ವೈಷ್ಣವ್, ಜಿತಿನ್ ಪ್ರಸಾದ ಅವರೂ ಇದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




