- Kannada News Photo gallery Economic Survey 2026, key highlights from GDP projection to Infrastructure importance
ಆರ್ಥಿಕ ಸಮೀಕ್ಷೆ 2026; ಜಿಡಿಪಿ, ಹಣದುಬ್ಬರ, ಎಫ್ಡಿಐ, ಇನ್ಷೂರೆನ್ಸ್ ಇತ್ಯಾದಿ ಬಗ್ಗೆ ವರದಿಯಲ್ಲಿ ಹೇಳಿದ್ದಿದು
ನವದೆಹಲಿ, ಜನವರಿ 29: ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಸಮೀಕ್ಷೆಯನ್ನು ಇಂದು ಸಂಸತ್ನಲ್ಲಿ ಮಂಡಿಸಲಾಗಿದೆ. ಬಜೆಟ್ಗೆ ಕೆಲ ದಿನ ಮುನ್ನ ಈ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡುವುದು ವಾಡಿಕೆ. ದೇಶದ ಆರ್ಥಿಕ ಸ್ಥಿತಿಗತಿ ಹೇಗಿದೆ ಎನ್ನುವುದರ ಅಮೂಲಾಗ್ರ ಚಿತ್ರಣವನ್ನು ದೇಶದ ಮುಂದಿಡಲಾಗುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರಾದ ವಿ ಅನಂತನಾಗೇಶ್ವರನ್ ನೇತೃತ್ವದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ವತಿಯಿಂದ ಈ ಸಮೀಕ್ಷೆಯನ್ನು ತಯಾರಿಸಲಾಗಿದೆ. ಈ ವರದಿಯಲ್ಲಿ ಮುಖ್ಯಾಂಶಗಳೇನಿವೆ ಎನ್ನುವುದರ ಮಾಹಿತಿ ಇಲ್ಲಿದೆ...
Updated on: Jan 29, 2026 | 4:25 PM

ಜಿಡಿಪಿ ದರ: ಸಿಇಎ ನೇತೃತ್ವದಲ್ಲಿ ಸಿದ್ಧಗೊಂಡ, ನಿರ್ಮಲಾ ಸೀತಾರಾಮನ್ ಮಂಡಿಸಿದ 2026ರ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. 2025-26ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.4ರಷ್ಟು ಹೆಚ್ಚಬಹುದು. 2026-27ರಲ್ಲಿ ಆರ್ಥಿಕ ಬೆಳವಣಿಗೆ ಶೇ. 6.8-7.2ರ ಶ್ರೇಣಿಯಲ್ಲಿ ಇರಬಹುದು ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಹಣದುಬ್ಬರ ದರ: ಹಣದುಬ್ಬರ ದರ ಭಾರತದಲ್ಲಿ ಇತ್ತೀಚೆಗೆ ಬಹಳ ಕಡಿಮೆಗೊಂಡಿರುವುದನ್ನು ಆರ್ಥಿಕ ಸಮೀಕ್ಷೆಯಲ್ಲಿ ಹೈಲೈಟ್ ಮಾಡಲಾಗಿದೆ. ಆದರೆ, ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ ಮುಂದಿನ ವರ್ಷ (2026-27) ಹಣದುಬ್ಬರ ಹೆಚ್ಚಿರುವ ಸಾಧ್ಯತೆ ಇದೆ ಎಂದು ಹೇಳಿರುವ ಈ ಸಮೀಕ್ಷೆಯು, ಈ ಏರಿಕೆ ಚಿಂತೆಪಡುವಷ್ಟಿಲ್ಲ ಎಂದೂ ತಿಳಿಸಿದೆ.

ಇನ್ಫ್ರಾಸ್ಟ್ರಕ್ಚರ್ ಅಗತ್ಯ: ಇನ್ಫ್ರಾಸ್ಟ್ರಕ್ಚರ್ ಎಂದರೆ ರಸ್ತೆ, ರೈಲು ನಿರ್ಮಾಣ ಮಾತ್ರವಾಗೇ ಉಳಿದಿಲ್ಲ. ಡಿಜಿಟಲ್ ಸಿಸ್ಟಂ, ಕ್ಲೀನ್ ಎನರ್ಜಿ, ಜಲ ನಿರ್ವಹಣೆ, ಹೊಸ ತಂತ್ರಜ್ಞಾನಗಳು ಇತ್ಯಾದಿಯೆಲ್ಲವೂ ಇನ್ಫ್ರಾಸ್ಟ್ರಕ್ಚರ್ ಎನಿಸಿಕೊಳ್ಳುತ್ತವೆ. ಭಾರತದ ಮುಂದಿನ ಬೆಳವಣಿಗೆಗೆ ಪ್ರಮುಖ ಆಧಾರ ಸ್ತಂಭಗಳಲ್ಲಿ ಇನ್ಫ್ರಾಸ್ಟ್ರಕ್ಚರ್ ಕೂಡ ಒಂದಾಗಿರುತ್ತದೆ ಎಂಬುದನ್ನು ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಇನ್ಷೂರೆನ್ಸ್ ಸೆಕ್ಟರ್: ದೇಶದಲ್ಲಿ ಹೆಚ್ಚಿನ ಭಾಗದ ಜನರು ಇನ್ಷೂರೆನ್ಸ್ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. ಇನ್ಷೂರೆನ್ಸ್ ಕಂಪನಿಗಳಿಗೆ ಆದಾಯ ಹೆಚ್ಚುತ್ತಿದೆ. ಆದರೆ, ಹೆಚ್ಚು ಜನರಿಗೆ ಅದು ವ್ಯಾಪಿಸುತ್ತಿಲ್ಲ ಎನ್ನುವ ಅಂಶವನ್ನು ಆರ್ಥಿಕ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಇನ್ಷೂರೆನ್ಸ್ ಉತ್ಪನ್ನಗಳ ಮಾರಾಟ ಅಧಿಕಗೊಳ್ಳಬೇಕು ಎನ್ನುವ ಸಲಹೆಯನ್ನೂ ಅದು ನೀಡಿದೆ.

ಎಫ್ಡಿಐಗಳ ಹರಿವು: ಸಮೀಕ್ಷೆ ಪ್ರಕಾರ 2025ರ ಏಪ್ರಿಲ್ನಿಂದ ನವೆಂಬರ್ವರೆಗಿನ ಅವಧಿಯಲ್ಲಿ ಒಟ್ಟೂ ಎಫ್ಡಿಐ ಒಳಹರಿವು 64.7 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 55.8 ಬಿಲಿಯನ್ ಡಾಲರ್ ವಿದೇಶೀ ನೇರ ಹೂಡಿಕೆಗಳು ಹರಿದುಬಂದಿದ್ದವು. ನಿವ್ವಳ ಎಫ್ಡಿಐ ಒಳಹರಿವು ಏಳು ಪಟ್ಟು ಹೆಚ್ಚಾಗಿದೆ ಎಂಬ ಮಾಹಿತಿಯನ್ನು ಆರ್ಥಿಕ ಸಮೀಕ್ಷಾ ವರದಿಯಲ್ಲಿ ಹಂಚಿಕೊಳ್ಳಲಾಗಿದೆ.




