ನವದೆಹಲಿ, ಸೆಪ್ಟೆಂಬರ್ 10: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬುಧವಾರ ಬೆಳಗ್ಗೆ 10:30ಕ್ಕೆ ಸೆಮಿಕಾನ್ ಇಂಡಿಯಾ 2024 ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರ ರಾಜಧಾನಿ ನಗರಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿರುವ ಇಂಡಿಯಾ ಎಕ್ಸ್‌ಪೋ ಮಾರ್ಟ್ನಲ್ಲಿ ನಡೆಯಲಿರುವ ಸೆಮಿಕಾನ್ ಇಂಡಿಯಾ 2024 ಸಮಾವೇಶ ಮೂರು ದಿನಗಳ ಕಾಲ ನಡೆಯಲಿದೆ.
ಸೆಮಿಕಂಡಕ್ಟರ್ ಡಿಸೈನ್, ಮ್ಯಾನುಫ್ಯಾಕ್ಚರಿಂಗ್ ಮತ್ತು ಟೆಕ್ನಾಲಜಿಗೆ ಭಾರತವು ಜಾಗತಿಕ ಕೇಂದ್ರವಾಗಬೇಕು ಎನ್ನುವುದು ಪ್ರಧಾನಿಗಳ ಆಶಯವಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಸೆಮಿಕಾನ್ ಸಮಾವೇಶದಲ್ಲಿ ಇದಕ್ಕೆ ಪೂರಕವಾದ ಥೀಮ್ ಇಟ್ಟುಕೊಳ್ಳಲಾಗಿದೆ. ನಿನ್ನೆ ಪಿಎಂಒ ಕಚೇರಿಯಿಂದ ಬಿಡುಗಡೆ ಆದ ಪತ್ರಿಕಾ ಪ್ರಕಟಣೆ ಪ್ರಕಾರ ಸೆಮಿಕಾನ್ ಇಂಡಿಯಾ 2024 ಸಮಾವೇಶದ ಥೀಮ್ ‘ಸೆಮಿಕಂಡ್ಟರ್ ಭವಿಷ್ಯ ರೂಪಿಸುವುದು’.
ಸೆಪ್ಟೆಂಬರ್ 11ರಿಂದ 13ರವರೆಗೆ ಮೂರು ದಿನ ಕಾಲ ನಡೆಯಲಿರುವ ಸಮಾವೇಶದಲ್ಲಿ, ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಹಬ್ ಆಗಿ ರೂಪಿಸಲು ಅಗತ್ಯ ಇರುವ ಸೆಮಿಕಂಡ್ಟರ್ ಕಾರ್ಯತಂತ್ರ ಮತ್ತು ನೀತಿಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಜಾಗತಿಕ ಸೆಮಿಕಂಡಕ್ಟರ್ ದೈತ್ಯ ಸಂಸ್ಥೆಗಳ ಮುಂದಾಳುಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆಮಿಕಂಡಕ್ಟರ್ ಕ್ಷೇತ್ರದ ದೊಡ್ಡ ಕಂಪನಿಗಳು, ಪರಿಣಿತರು, ಜಾಗತಿಕ ನಾಯಕರು ಈ ಸಮಾವೇಶದ ಮೂಲಕ ಒಂದೆಡೆ ಸೇರಲಿದ್ದಾರೆ.
ಇದನ್ನೂ ಓದಿ: ಚಂದ್ರನಲ್ಲಿ ಪರಮಾಣು ಶಕ್ತಿ ಸ್ಥಾವರ ನಿರ್ಮಿಸಲು ರಷ್ಯಾ, ಚೀನಾ ಕೈಜೋಡಿಸಲಿರುವ ಭಾರತ
ಮಾಹಿತಿ ಪ್ರಕಾರ, ಮೂರು ದಿನಗಳ ಸೆಮಿಕಾನ್ ಇಂಡಿಯಾ 2024 ಸಮಾವೇಶದಲ್ಲಿ 150 ಜನರು ವಿಚಾರ ಮಂಡನೆ ಮಾಡಲಿದ್ದಾರೆ. 250ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ, 4ನೇ ಜಾಗತಿಕ ಮರು ಹೂಡಿಕೆ ಮತ್ತು ಮರುಬಳಕೆ ಇಂಧನ ಹೂಡಿಕೆದಾರರ ಸಮಾವೇಶ ಮತ್ತು ಎಕ್ಸ್‌ಪೋ-2024 ಗುಜರಾತ್ನ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ಸೆ.16 ರಿಂದ 18 ರವರೆಗೆ ನಡೆಯಲಿದೆ. ತಮ್ಮ ತವರು ರಾಜ್ಯವಾದ ಗುಜರಾತ್‌ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ಪೋವನ್ನು ಉದ್ಘಾಟಿಸಲಿದ್ದಾರೆ. ಗಾಂಧಿನಗರದಲ್ಲಿ 3 ದಿನಗಳ ಸಭೆಯನ್ನು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದೆ. ಇದು ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ