ನವದೆಹಲಿ, ಡಿಸೆಂಬರ್ 16: ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜಿಲಿ ಯೋಜನೆ ಅಡಿಯಲ್ಲಿ 6,85,763 ಮನೆಗಳ ಸೂರುಗಳ ಮೇಲೆ ಸೌರ ವ್ಯವಸ್ಥೆ ಅಳವಡಿಕೆ ಮಾಡಲಾಗಿದೆ. 2024ರ ಫೆಬ್ರುವರಿ ತಿಂಗಳಲ್ಲಿ ಆರಂಭವಾದ ಈ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಬಹಳ ವೇಗದಲ್ಲಿ ಗುರಿ ಮುಟ್ಟುತ್ತಿದೆ. ಒಂದು ದಶಕದಲ್ಲಿ ಆದಷ್ಟು ಸೋಲಾರ್ ಇನ್ಸ್ಟಲೇಶನ್ ಒಂದು ವರ್ಷದಲ್ಲೇ ಆಗಿದೆಯಂತೆ. ಗುಜರಾತ್ ರಾಜ್ಯದಲ್ಲಿ ಅತಿಹೆಚ್ಚು ಸೋಲಾರ್ ಅಳವಡಿಕೆ ಆಗಿದೆ. ಮಹಾರಾಷ್ಟ್ರ, ಉತ್ತರಪ್ರದೇಶ ರಾಜ್ಯಗಳದ್ದು ನಂತರದ ಸ್ಥಾನ. ದಕ್ಷಿಣ ರಾಜ್ಯಗಳ ಪೈಕಿ ಕೇರಳದಲ್ಲಿ ಅತಿಹೆಚ್ಚು ಸೌರವಿದ್ಯುತ್ ಸಿಸ್ಟಂ ಅಳವಡಿಕೆ ಆಗಿದೆ.
ಪಿಎಂ ಸೂರ್ಯಘರ್ ಯೋಜನೆ ಅಡಿ ಹೆಚ್ಚು ಸ್ಥಾಪನೆ ಆಗಿರುವುದು 3-5 ಕಿವ್ಯಾ ಲೋಡ್ ವಿಭಾಗದಲ್ಲಿ. ಶೇ. 77ರಷ್ಟು ಸೋಲಾರ್ಗಳು ಇದೇ ಸೆಗ್ಮೆಂಟ್ನಲ್ಲಿ ಆಗಿದೆ. ಈ ಸೆಗ್ಮೆಂಟ್ಗೆ ಅತಿಹೆಚ್ಚು ಬೇಡಿಕೆ ಇದೆ. ಇದು 300ಕ್ಕೂ ಹೆಚ್ಚು ಯೂನಿಟ್ಗಳಷ್ಟು ವಿದ್ಯುತ್ ಅನ್ನು ಒದಗಿಸಬಲ್ಲುದು. ಇನ್ನು 5 ಕಿವ್ಯಾಗಿಂತ ಹೆಚ್ಚಿನ ಸಾಮರ್ಥ್ಯದ ಸೋಲಾರ್ಗಳು ಶೇ. 14ರಷ್ಟು ಸ್ಥಾಪನೆ ಆಗಿವೆ.
ಇದನ್ನೂ ಓದಿ: ದಪ್ಪದ 5 ರೂ ನಾಣ್ಯದ ಚಲಾವಣೆ ನಿಲ್ಲಿಸುತ್ತಿರುವ ಆರ್ಬಿಐ; ಕಾರಣಗಳಿವು…
ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯು ಮನೆಗಳಲ್ಲಿ ಸೋಲಾರ್ ಸಿಸ್ಟಂ ಅಳವಡಿಸಲು ಉತ್ತೇಜಿಸುತ್ತದೆ. ಮನೆ ಮಾಳಿಗೆಗಳ ಮೇಲೆ ಸೌರಫಲಕಗಳನ್ನು ಸ್ಥಾಪಿಸಿ ಅದರಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಇದು. ಸರ್ಕಾರವು ಸೋಲಾರ್ ಸ್ಥಾಪನೆಯ ಸುಮಾರು ಅರ್ಧದಷ್ಟು ವೆಚ್ಚವನ್ನು ಭರಿಸುತ್ತದೆ. 30,000 ರೂನಿಂದ 78,000 ರೂವರೆಗೆ ಸಬ್ಸಿಡಿ ಸಿಗುತ್ತದೆ.
ಪಿಎಂ ಸೂರ್ಯಘರ್ ಯೋಜನೆಯ ಪೋರ್ಟಲ್ಗೆ ಹೋಗಿ ಅಲ್ಲಿಂದ ಸೋಲಾರ್ ಅಳವಡಿಕೆಗೆ ಅರ್ಜಿ ಸಲ್ಲಿಸಬಹುದು. ಸಂಬಂಧಿತ ಡಿಸ್ಕಾಂನಿಂದ ಅನುಮೋದನೆ ಬಳಿಕ ನಿಗದಿತ ವೆಂಡರ್ಗಳು ಸೋಲಾರ್ ಸ್ಥಾಪನೆ ಮಾಡುತ್ತಾರೆ. ಅದಾದ ಬಳಿಕ ಸಬ್ಸಿಡಿ ಕ್ಲೇಮ್ ಮಾಡಬಹುದು. ಯೋಜನೆಯ ಪೋರ್ಟಲ್ ವಿಳಾಸ ಇಲ್ಲಿದೆ: www.pmsuryaghar.gov.in/
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ