ಯುಪಿಐ ಧಮಾಕ; 11 ತಿಂಗಳು, 15,547 ಕೋಟಿ ವಹಿವಾಟು; 223 ಲಕ್ಷ ಕೋಟಿ ರೂ ಹಣ ವರ್ಗಾವಣೆ
UPI transactions: 2024ರ ಜನವರಿಯಿಂದ ನವೆಂಬರ್ವರೆಗೆ ಯುಪಿಐ ಮೂಲಕ 223 ಲಕ್ಷ ಕೋಟಿ ರೂ ಮೌಲ್ಯದ 15,547 ಕೋಟಿ ವಹಿವಾಟುಗಳಾಗಿವೆ. ಅಕ್ಟೋಬರ್ ತಿಂಗಳೊಂದರಲ್ಲಿ 1,658 ಕೋಟಿ ವಹಿವಾಟಿನಲ್ಲಿ 23.49 ಲಕ್ಷ ಕೋಟಿ ರೂ ಹಣ ವರ್ಗಾವಣೆ ಆಗಿದೆ. 2016ರಲ್ಲಿ ಆರಂಭವಾದ ಯುಪಿಐ ಹಣ ಪಾವತಿ ವ್ಯವಸ್ಥೆ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಜನಪ್ರಿಯವಾಗುತ್ತಿರುವುದು ವಿಶೇಷ.
ನವದೆಹಲಿ, ಡಿಸೆಂಬರ್ 16: ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಕಾರಣವಾಗಿರುವ ಯುಪಿಐನ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಣಕಾಸು ಸಚಿವಾಲ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಈ ವರ್ಷದ (2024) ಜನವರಿಯಿಂದ ನವೆಂಬರ್ವರೆಗೆ 11 ತಿಂಗಳಲ್ಲಿ ಯುಪಿಐ ಮೂಲಕ 15,547 ಕೋಟಿ ವಹಿವಾಟುಗಳಾಗಿವೆ. ಇವುಗಳಿಂದ 223 ಲಕ್ಷ ಕೋಟಿ ರೂ ಹಣ ವರ್ಗಾವಣೆ ಆಗಿದೆ ಎನ್ನಲಾಗಿದೆ.
2024ರ ಅಕ್ಟೋಬರ್ ತಿಂಗಳಲ್ಲಿ 23.49 ಲಕ್ಷ ಕೋಟಿ ರೂ ಮೌಲ್ಯದ 1,658 ಕೋಟಿ ಸಂಖ್ಯೆಯಷ್ಟು ಯುಪಿಐ ವಹಿವಾಟುಗಳಾಗಿವೆ. ಹಿಂದಿನ ವರ್ಷದ ಅಕ್ಟೋಬರ್ಗೆ ಹೋಲಿಸಿದರೆ ವಹಿವಾಟು ಪ್ರಮಾಣ ಶೇ. 45ರಷ್ಟು ಹೆಚ್ಚಿದೆ.
ಇದನ್ನೂ ಓದಿ: ಚೀನಾದಿಂದ ಆಟಿಕೆ ಅಮದಿಗೆ ಕಡಿವಾಣ; ಗರಿಗೆದರುತ್ತಿರುವ ಭಾರತದ ಆಟಿಕೆ ಉದ್ಯಮದ ಮುಂದಿದೆ ಒಂದಷ್ಟು ಸವಾಲು
ಭಾರತದಲ್ಲಿ ರೂಪಿಸಲಾಗಿರುವ ಯುಪಿಐ ಪಾವತಿ ವ್ಯವಸ್ಥೆಯು ವಿಶ್ವದಲ್ಲೇ ವಿಶೇಷವಾಗಿದೆ. ಹಲವಾರು ದೇಶಗಳು ಯುಪಿಐ ಅನ್ನು ತಮ್ಮಲ್ಲಿ ಅಳವಡಿಸಲು ಆಸಕ್ತವಾಗಿವೆ. ಯುಎಇ, ಸಿಂಗಾಪುರ್, ಭೂತಾನ್, ನೇಪಾಳ್, ಶ್ರೀಲಂಕಾ, ಫ್ರಾನ್ಸ್ ಮತ್ತು ಮಾರಿಷಸ್ ಈ ಏಳು ದೇಶಗಳಲ್ಲಿ ಯುಪಿಐ ಅಳವಡಿಕೆ ಆಗಿದೆ. ಈ ಏಳು ದೇಶಗಳಿಂದ ಜನರು ಭಾರತಕ್ಕೆ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯ.
ರಾಷ್ಟ್ರೀಯ ಪಾವತಿ ನಿಗಮವಾದ ಎನ್ಪಿಸಿಐ 2016ರಲ್ಲಿ ಯುಪಿಐ ಅನ್ನು ಆರಂಭಿಸಿದೆ. ಬ್ಯಾಂಕ್ ಖಾತೆಗಳ ನಡುವೆ ಬಹಳ ವೇಗವಾಗಿ ಹಣ ವರ್ಗಾವಣೆ ಮಾಡುವ ಸಾಧನಗಳಲ್ಲಿ ಯುಪಿಐ ಒಂದು. ಒಂದು ಯುಪಿಐ ಅಪ್ಲಿಕೇಶನ್ನಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ಜೋಡಿಸಬಹುದು.
ಇದನ್ನೂ ಓದಿ: 2 ಲಕ್ಷ ರೂ ವಿಮಾ ಕವರೇಜ್ ನೀಡುವ ಜೀವನ್ಜ್ಯೋತಿ ಬಿಮಾ ಯೋಜನೆ; 21 ಕೋಟಿ ದಾಟಿದ ಫಲಾನುಭವಿಗಳ ಸಂಖ್ಯೆ
ಯುಪಿಐ ಪ್ಲಾಟ್ಫಾರ್ಮ್ನಲ್ಲಿ 632 ಬ್ಯಾಂಕುಗಳು ಕೈಜೋಡಿಸಿವೆ. ಇದರಿಂದ ಹೆಚ್ಚೆಚ್ಚು ಜನರು ಯುಪಿಐ ಬಳಸುವುದು ಹೆಚ್ಚಾಗಿದೆ. ಸಣ್ಣ ಉದ್ದಿಮೆಗಳು, ಬೀದಿಬದಿ ವ್ಯಾಪಾರಿಗಳು ಮೊದಲಾದ ಸಣ್ಣ ವರ್ತಕರಿಗೆ ಯುಪಿಐ ಸಾಕಷ್ಟು ಪ್ರಯೋಜನಕಾರಿಯಾಗಿದೆ. ವ್ಯಾಪಾರ ವಹಿವಾಟಿನಲ್ಲಿ ಸಾಮಾನ್ಯವಾಗಿ ಎದುರಾಗುತ್ತಿದ್ದ ‘ಚಿಲ್ಲರೆ’ ಸಮಸ್ಯೆಯೂ ಯುಪಿಐನಿಂದ ಹೆಚ್ಚಿನಂಶ ನಿವಾರಣೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ