ಪಿಎಂ ಉಜ್ವಲ ಯೋಜನೆ ಅಡಿ ಎಲ್​ಪಿಜಿಗೆ ಸಬ್ಸಿಡಿ ಮೊತ್ತ 200 ರೂನಿಂದ 300 ರೂಗೆ ಹೆಚ್ಚಳ

PM Ujjwala Yojana subsidy hike: ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಸಿಗುವ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. 200 ರೂನಷ್ಟು ನೀಡಲಾಗುತ್ತಿದ್ದ ಸಬ್ಸಿಡಿಯನ್ನು 300 ರುಪಾಯಿಗೆ ಏರಿಸಲಾಗಿದೆ. ಕೇಂದ್ರ ಸಂಪುಟ ಇಂದು ತೆಗೆದುಕೊಂಡ ನಿರ್ಧಾರಗಳಲ್ಲಿ ಇದೂ ಒಂದಾಗಿದೆ. ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್​ಪಿಜಿ ಸಬ್ಸಿಡಿ ಏರಿಸಿರುವ ವಿಚಾರವನ್ನು ತಿಳಿಸಿದ್ದಾರೆ.

ಪಿಎಂ ಉಜ್ವಲ ಯೋಜನೆ ಅಡಿ ಎಲ್​ಪಿಜಿಗೆ ಸಬ್ಸಿಡಿ ಮೊತ್ತ 200 ರೂನಿಂದ 300 ರೂಗೆ ಹೆಚ್ಚಳ
ಎಲ್​ಪಿಜಿ ಸಿಲಿಂಡರ್
Follow us
|

Updated on:Oct 04, 2023 | 4:11 PM

ನವದೆಹಲಿ, ಅಕ್ಟೋಬರ್ 4: ಬೆಲೆ ಏರಿಕೆಯ ಬಿಸಿಯಲ್ಲಿರುವ ಬಡ ಮತ್ತು ಮಧ್ಯಮವರ್ಗದವರಿಗೆ ತುಸು ನಿರಾಳ ತರುವ ಸುದ್ದಿ ಇದು. ಪಿಎಂ ಉಜ್ವಲ ಯೋಜನೆಯ (PM Ujjwala Yojana) ಫಲಾನುಭವಿಗಳಿಗೆ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಸಿಗುವ ಸಬ್ಸಿಡಿ (LPG price subsidy) ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. 200 ರೂನಷ್ಟು ನೀಡಲಾಗುತ್ತಿದ್ದ ಸಬ್ಸಿಡಿಯನ್ನು 300 ರುಪಾಯಿಗೆ ಏರಿಸಲಾಗಿದೆ. ಕೇಂದ್ರ ಸಂಪುಟ ಇಂದು ತೆಗೆದುಕೊಂಡ ನಿರ್ಧಾರಗಳಲ್ಲಿ ಇದೂ ಒಂದಾಗಿದೆ. ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್​ಪಿಜಿ ಸಬ್ಸಿಡಿ ಏರಿಸಿರುವ ವಿಚಾರವನ್ನು ತಿಳಿಸಿದ್ದಾರೆ.

ಎಷ್ಟಿದೆ ಎಲ್​ಪಿಜಿ ಸಿಲಿಂಡರ್ ಬೆಲೆ?

ಇತ್ತೀಚೆಗಷ್ಟೇ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರ 200 ರೂನಷ್ಟು ಇಳಿಕೆ ಮಾಡಿತ್ತು. ಎಲ್ಲಾ ಎಲ್​ಪಿಜಿ ಬಳಕೆದಾರರಿಗೂ ಇದು ಅನ್ವಯ ಆಗುತ್ತದೆ. ಬೆಂಗಳೂರಿನಲ್ಲಿ 1,105.50 ರೂ ಇದ್ದ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 905.59 ರುಪಾಯಿಗೆ ಇಳಿದಿದೆ. ಇದು ಸಾಮಾನ್ಯ ಬಳಕೆದಾರರು ನೀಡುವ ದರವಾಗಿದೆ.

ಇದನ್ನೂ ಓದಿ: ಅಮೆರಿಕದ ಕ್ರಿಪ್ಟಾನ್, ಟೆಕ್ಸಾಸ್ ಇನ್ಸ್​ಟ್ರುಮೆಂಟ್ಸ್, ಇಆರ್​ಪಿ ಲಾಜಿಕ್ ಕಂಪನಿಗಳಿಂದ ಕರ್ನಾಟಕದಲ್ಲಿ ಹೂಡಿಕೆ ಸಾಧ್ಯತೆ

ಆದರೆ, ಪಿಎಂ ಉಜ್ವಲ ಯೋಜನೆ ಹೊಂದಿರುವವರಿಗೆ ಸರ್ಕಾರ ಈ ಹಿಂದೆಯೇ 200 ರೂನಷ್ಟು ಸಬ್ಸಿಡಿ ಕೊಟ್ಟಿದೆ. ಈಗ ಮತ್ತಷ್ಟು 100 ರೂ ಸಬ್ಸಿಡಿ ಒದಗಿಸುತ್ತದೆ. ಅಲ್ಲಿಗೆ ಈ ಯೋಜನೆಯ ಫಲಾನುಭವಿಗಳಿಗೆ ಒಟ್ಟು 300 ರೂ ಸಬ್ಸಿಡಿ ಸಿಗುತ್ತದೆ. ಇದರೊಂದಿಗೆ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಅನ್ನು ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳು ಬೆಂಗಳೂರಿನಲ್ಲಿ 605.50 ರೂಪಾಯಿಗೆ ಪಡೆಯಬಹುದು.

ಏನಿದು ಪಿಎಂ ಉಜ್ವಲ ಯೋಜನೆ?

ಪ್ರತಿಯೊಂದು ಮನೆಗೂ ಎಲ್​ಪಿಜಿ ಸಂಪರ್ಕ ಕಲ್ಪಿಸಬೇಕೆಂಬ ಸರ್ಕಾರದ ಮಹದ್ಗುರಿ ಹಿನ್ನೆಲೆಯಲ್ಲಿ ಪಿಎಂ ಉಜ್ವಲ ಯೋಜನೆಯನ್ನು ರೂಪಿಸಲಾಗಿದೆ. 2016ರಲ್ಲಿ ಬಿಪಿಎಲ್ ಕಾರ್ಡ್​ದಾರರಿಗೆ ಉಚಿತ ಎಲ್​ಪಿಜಿ ಸಂಪರ್ಕ ಕಲ್ಪಿಸುವುದರೊಂದಿಗೆ ಯೋಜನೆ ಚಾಲನೆಗೊಂಡಿತು. 2021ರಲ್ಲಿ ಎರಡನೇ ಹಂತದ ಉಜ್ವಲ ಸ್ಕೀಮ್ ಅನ್ನು ಚಾಲನೆಗೆ ತರಲಾಯಿತು. ಕೆಲಸಕ್ಕೆಂದು ಬೇರೆ ರಾಜ್ಯಗಳಿಗೆ ವಲಸೆ ಹೋದ ಕುಟುಂಬದವರಿಗೂ ಕೂಡ ಯೋಜನೆ ಸಿಗುವಂತೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಉಜ್ಜೀವನ್ ಬ್ಯಾಂಕ್​ನ ಷೇರಿಗೆ ಭರ್ಜರಿ ಬೇಡಿಕೆ; ಆರು ತಿಂಗಳಲ್ಲಿ ಎರಡೂವರೆ ಪಟ್ಟು ಬೆಲೆ ಹೆಚ್ಚಳ

ಉಚಿತವಾಗಿ ಎಲ್​ಪಿಜಿ ಸಂಪರ್ಕದ ಜೊತೆಗೆ ಮೊದಲ ಸಿಲಿಂಡರ್ ಕೂಡ ಉಚಿತವಾಗಿ ಸಿಗುತ್ತದೆ. ಈಗ ಪ್ರತೀ ಸಿಲಿಂಡರ್​ಗೆ 300 ರೂನಷ್ಟು ಸಬ್ಸಿಡಿ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Wed, 4 October 23