PNB Metlife Bonus: ಪಿಎನ್ಬಿ ಮೆಟ್ಲೈಫ್ನಿಂದ 532 ಕೋಟಿ ರೂಪಾಯಿ ಬೋನಸ್ ಘೋಷಣೆ
ಪಿಎನ್ಬಿ ಮೆಟ್ಲೈಫ್ ಇಂಡಿಯಾದ ಕನಿಷ್ಠ 4.6 ಲಕ್ಷ ಗ್ರಾಹಕರಿಗೆ 532 ಕೋಟಿ ರೂಪಾಯಿಯ ದೊಡ್ಡ ಮೊತ್ತದ ವಾರ್ಷಿಕ ಬೋನಸ್ ಅನ್ನು ಘೋಷಣೆ ಮಾಡಲಾಗಿದೆ.
ಪಿಎನ್ಬಿ ಮೆಟ್ಲೈಫ್ ಇಂಡಿಯಾ ಇನ್ಷೂರೆನ್ಸ್ ಲಿಮಿಟೆಡ್ (PNB Metlife) ಗುರುವಾರದಂದು 532 ಕೋಟಿ ರೂಪಾಯಿಯ ದೊಡ್ಡ ಮೊತ್ತದ ಬೋನಸ್ ಅನ್ನು ಪಾರ್ಟಿಸಿಪೇಟಿಂಗ್ ಪ್ರಾಡಕ್ಟ್ನ ಅರ್ಹ ಪಾಲಿಸಿದಾರರಿಗಾಗಿ ಘೋಷಣೆ ಮಾಡಿದೆ. ಕನಿಷ್ಠ 4.6 ಲಕ್ಷ ಗ್ರಾಹಕರು ಬೋನಸ್ಗೆ ಅರ್ಹರಿದ್ದಾರೆ ಎಂದು ಕಂಪೆನಿಯಿಂದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪಿಎನ್ಬಿ ಮೆಟ್ ಲೈಫ್ನಿಂದ ಶೇ 7ರಷ್ಟು ಬೋನಸ್ ಏರಿಕೆ ಮಾಡಲಾಗಿದೆ. ಕಂಪೆನಿಯ ಪಾರ್ಟಿಸಿಪೇಟಿಂಗ್ ಪಾಲಿಸಿದಾರರ ಫಂಡ್ಗಳಿಂದ ಬಂದ ಲಾಭದ ಭಾಗವೇ ಬೋನಸ್. ಇದನ್ನು ಅವರ ಗ್ಯಾರಂಟೀಡ್ ಮೆಚ್ಯೂರಿಟಿ ಅನುಕೂಲಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಇದರಿಂದ ನಿಧಿಯ ವಿಸ್ತರಣೆ ಆಗುತ್ತದೆ. ಕಂಪೆನಿ ಪ್ರಬಲವಾದ ಫಂಡ್ ಮ್ಯಾನೇಜ್ಮೆಂಟ್ ಸಾಮರ್ಥ್ಯದಿಂದ ಹಾಗೂ ರಿಸ್ಕ್ ಮ್ಯಾನೇಜ್ಮೆಂಟ್ ಅಭ್ಯಾಸದಿಂದ ಪಾಲಿಸಿದಾರರಿಗೆ ಹೆಚ್ಚಿನ ಬೋನಸ್ ಬಂದಿದೆ ಎಂದು ಕಂಪೆನಿ ತಿಳಿಸಿದೆ.
ಮಾರ್ಚ್ 31, 2021ಕ್ಕೆ ಅನ್ವಯ ಆಗುವಂತೆ ಅರ್ಹ ಇರುವ ಎಲ್ಲ ಪಾರ್ಟಿಸಿಪೇಟಿಂಗ್ ಪಾಲಿಸಿಗಳಿಗೆ ಬೋನಸ್ ನೀಡಲಾಗುವುದು. ಇದನ್ನು ಪಾಲಿಸಿದಾರರ ಅನುಕೂಲಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಈ ರೀತಿಯ ಬೋನಸ್ ಘೋಷಣೆ ಮಾಡುವುದರಿಂದ ಗ್ರಾಹಕರಿಗೆ ಅನುಕೂಲ ಆಗಲಿದೆ ಎಂದು ಕಂಪೆನಿ ಹೇಳಿದೆ. ಪಿಎನ್ಬಿ ಮೆಟ್ಲೈಫ್ನಿಂದ ಜೀವನದ ವಿವಿಧ ಹಂತಗಳಿಗಾಗಿಯೇ ನಾನಾ ಸ್ಕೀಮ್ಗಳಿವೆ. ಮಕ್ಕಳ ಶಿಕ್ಷಣ, ಕುಟುಂಬ ರಕ್ಷಣೆ, ದೀರ್ಘಾವಧಿ ಉಳಿತಾಯ ಮತ್ತು ನಿವೃತ್ತಿಯ ಅನುಕೂಲಗಳು ಹೀಗೆ ಎಂದು ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ. ಪಾರ್ಟಿಸಿಪೇಟಿಂಗ್ ಲೈಫ್ ಇನ್ಷೂರೆನ್ಸ್ ಪ್ಲಾನ್ಗಳು ಗ್ರಾಹಕರಿಗೆ ಡಿವಿಡೆಂಡ್ ವಿತರಣೆಯ ಮೂಲಕ ಸಂಪತ್ತು ಕ್ರೋಡೀಕರಣಕ್ಕೆ ಅವಕಾಶ ಒದಗಿಸುತ್ತದೆ ಎಂದು ಸೇರಿಸಲಾಗಿದೆ.
2021ರಲ್ಲಿ ಪರಿಚಯಿಸಿರುವ ಪಿಎನ್ಬಿ ಮೆಟ್ಲೈಫ್ ಸೆಂಚುರಿ ಪ್ಲಾನ್ ಎಂಬುದು ಪಾರ್ಟಿಸಿಪೇಟಿಂಗ್ ಲೈಫ್ ಇನ್ಷೂರೆನ್ಸ್ ಪ್ಲಾನ್. ಇದು ಗ್ರಾಹಕರಿಗೆ 100 ವರ್ಷದ ತನಕ ಗ್ಯಾರಂಟೀಡ್ ಆದಾಯ ನೀಡುತ್ತದೆ. ಜತೆಗೆ ಜೀವನದುದ್ದಕ್ಕೂ ಕವರ್ ಆಗುತ್ತದೆ. ನಿವೃತ್ತಿ ನಂತರದ ಬದುಕಿಗೆ ಎರಡನೇ ಆದಾಯವನ್ನು ಖಾತ್ರಿಗೊಳಿಸುತ್ತದೆ ಮತ್ತು ಭವಿಷ್ಯದ ತಲೆಮಾರುಗಳಿಗೂ ಅನುಕೂಲ ಒದಗಿಸುತ್ತದೆ. ಈ ಹಿಂದೆ ಜೂನ್ನಲ್ಲಿ ಐಸಿಐಸಿಐ ಪ್ರುಡೆನ್ಷಿಯಲ್ ಲೈಞ್ ಇನ್ಷೂರೆನ್ಸ್ನಿಂದ ವಾರ್ಷಿಕ ಬೋನಸ್ 867 ಕೋಟಿ ರೂಪಾಯಿ ಘೋಷಣೆ ಮಾಡಿತ್ತು. 2020- 21ನೇ ಹಣಕಾಸು ವರ್ಷಕ್ಕೆ ಸಾರ್ವಕಾಲಿಕ ಗರಿಷ್ಠ ಬೋನಸ್ ಅದಾಗಿತ್ತು. ಅದರಿಂದ 9.8 ಲಕ್ಷ ಪಾರ್ಟಿಸಿಪೇಟಿಂಗ್ ಪಾಲಿಸಿದಾರರಿಗೆ ಅನುಕೂಲ ಆಗಲಿದೆ ಎಂದು ಕಂಪೆನಿ ಹೇಳಿತ್ತು.
ಇದನ್ನೂ ಓದಿ: ICICI Prudential Life Insurance: ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್ ಕಂಪೆನಿಯಿಂದ ದಾಖಲೆಯ ವಾರ್ಷಿಕ ಬೋನಸ್
(PNB Metlife announced annual bonus of Rs 532 crore to minimum 4.6 lakh participant policyholders)
Published On - 7:28 pm, Thu, 15 July 21