ಖಾಸಗಿ ಬ್ಯಾಂಕ್ಗಳ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು (MD) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಅಧಿಕಾರಾವಧಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 15 ವರ್ಷಗಳಿಗೆ ಮಿತಿಗೊಳಿಸಿದೆ. ಪ್ರವರ್ತಕರು (ಪ್ರಮೋಟರ್ಸ್) ಅಥವಾ ಪ್ರಮುಖ ಷೇರುದಾರರು ಈ ಹುದ್ದೆಯನ್ನು 12 ವರ್ಷಕ್ಕಿಂತ ಹೆಚ್ಚಿನ ಅವಧಿ ಹೊಂದಿರುವುದಕ್ಕೆ ಅವಕಾಶ ಇಲ್ಲ. ಅಪರೂಪದ ಸನ್ನಿವೇಶದಲ್ಲಿ 3 ವರ್ಷಗಳ ಅವಧಿಗೆ ವಿಸ್ತರಣೆ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಯ್ಕೆ ಮಾಡಿಕೊಳ್ಳಬಹುದು. ಕಳೆದ ವರ್ಷ ಸಿದ್ಧಪಡಿಸಿದ ಕರಡಿನಲ್ಲಿ, ಪ್ರವರ್ತಕರಿಗೆ ಎಂ.ಡಿ. ಮತ್ತು ಸಿಇಒ ಹುದ್ದೆಯಲ್ಲಿ 10 ವರ್ಷಗಳ ಗರಿಷ್ಠ ಅವಧಿಯನ್ನು ಪ್ರಸ್ತಾವ ಮಾಡಿತ್ತು.
ಬ್ಯಾಂಕ್ಗಳ ಕಾರ್ಪೊರೇಟ್ ಆಡಳಿತಕ್ಕೆ ಸಂಬಂಧಿಸಿದಂತೆ ಆರ್ಬಿಐನ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, ವೃತ್ತಿಪರ ಎಂ.ಡಿ.ಗಳು ಮತ್ತು ಸಿಇಒಗಳು ಅಥವಾ ಪೂರ್ಣಾವಧಿ ನಿರ್ದೇಶಕರು ಮತ್ತೆ ಅದೇ ಬ್ಯಾಂಕ್ನಲ್ಲಿ ನೇಮಕಗೊಳ್ಳಲು ಅರ್ಹರು. ಆದರೆ ಆ ಮಧ್ಯೆ ಮೂರು ವರ್ಷಗಳ ಅಂತರ ಇರಬೇಕು. ಈ ಅಂತರ ಕಾಯ್ದುಕೊಳ್ಳುವ ಸಂದರ್ಭದಲ್ಲಿ ಆ ಬ್ಯಾಂಕ್ ಅಥವಾ ಅದರ ಸಮೂಹ ಸಂಸ್ಥೆಗಳಲ್ಲಿ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಯಾವುದೇ ಹುದ್ದೆಯನ್ನು ಹೊಂದಿರುವಂತಿಲ್ಲ. ಖಾಸಗಿ ಬ್ಯಾಂಕ್ಗಳು, ಸಣ್ಣ ಹಣಕಾಸು ಬ್ಯಾಂಕ್ಗಳು, ವಿದೇಶೀ ಬ್ಯಾಂಕ್ಗಳ ಸಂಪೂರ್ಣ ಮಾಲೀಕತ್ವ ಹೊಂದಿರುವ ಅಂಗಸಂಸ್ಥೆಗಳಿಗೆ ಈ ನಿಯಮವು ಅನ್ವಯ ಆಗುತ್ತದೆ.
ಇತರ ಬ್ಯಾಂಕ್ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರತ್ಯೇಕವಾಗಿ ನಿಯಮಾವಳಿಗಳನ್ನು ನೀಡಲಾಗಿದೆ. ಈಗಿನ ಹೊಸ ನಿಯಮಗಳಿಗೆ ಬ್ಯಾಂಕ್ಗಳು ಅಕ್ಟೋಬರ್ 1ರಿಂದ ಬದ್ಧವಾಗಿರಬೇಕು. ಹೊಸ ಮಾರ್ಗದರ್ಶಿ ಸೂತ್ರದ ಪ್ರಮುಖಾಂಶಗಳು ಹೀಗಿವೆ:
* ಎಂ.ಡಿ.ಗಳು, ಸಿಇಒಗಳು ಮತ್ತು ಪೂರ್ಣಾವಧಿ ನಿರ್ದೇಶಕರಿಗೆ ಗರಿಷ್ಠ ವಯೋಮಿತಿ 70 ವರ್ಷ. ಆಡಳಿತ ಮಂಡಳಿಯು ವಯೋಮಿತಿ ಕಡಿಮೆ ಮಾಡಿಕೊಳ್ಳಬಹುದು ಎಂದು ಆರ್ಬಿಐ ಹೇಳಿದೆ.
* ಬೆಳವಣಿಗೆ ಹಾಗೂ ಪ್ರವರ್ತಕರ ಷೇರಿನ ಪಾಲು ಹೊಂದಿರುವ ಪ್ರಮಾಣವನ್ನು ಸಹ ಆರ್ಬಿಐ ಗಣನೆಗೆ ತೆಗೆದುಕೊಳ್ಳುತ್ತದೆ.
* ಬ್ಯಾಂಕ್ನ ಅಧ್ಯಕ್ಷರು ಸ್ವತಂತ್ರ ನಿರ್ದೇಶಕರಾಗಿರಬೇಕು. ಆಡಳಿತ ಮಂಡಳಿಯ ಸಭೆಯಲ್ಲಿ ಭಾಗವಹಿಸುವ ನಿರ್ದೇಶಕರ ಪೈಕಿ ಅರ್ಧದಷ್ಟು ಸ್ವತಂತ್ರ ನಿರ್ದೇಶಕರಾಗಿರಬೇಕು.
* ಅದಾಗಲೇ ಅನುಮತಿ ಪಡೆದ ಪ್ರಸ್ತುತ ಅಧ್ಯಕ್ಷರು, ಎಂಡಿ ಮತ್ತು ಸಿಇಒ ಅಥವಾ ಪೂರ್ಣಾವಧಿ ನಿರ್ದೇಶಕರ ಕಾರ್ಯ ನಿರ್ವಹಣೆ ಅವಧಿಯನ್ನು ಪೂರ್ಣಗೊಳಿಸಲು ಆರ್ಬಿಐ ಅನುಮತಿ ನೀಡುತ್ತದೆ.
* ಅದರರ್ಥ ಏನೆಂದರೆ, ಕೊಟಕ್ ಮಹೀಂದ್ರಾ ಬ್ಯಾಂಕ್ನ ಉದಯ್ ಕೊಟಕ್ ಎಂ.ಡಿ. ಮತ್ತು ಸಿಇಒ ಆಗಿ 17 ವರ್ಷ ಪೂರ್ಣಗೊಳಿಸುತ್ತಿದ್ದಾರೆ. ಜನವರಿ 1, 2021ರಿಂದ ಮೂರು ವರ್ಷಗಳ ಅವಧಿಗೆ ಅವರ ಪುನರ್ ನೇಮಕಕ್ಕೆ ಆರ್ಬಿಐ ಅನುಮತಿ ನೀಡಿದೆ.
* ಇತರ ಕ್ರಮದ ವಿಚಾರಕ್ಕೆ ಬಂದರೆ, ಆಡಳಿತ ಮಂಡಳಿಯ ಲೆಕ್ಕಪರಿಶೋಧನಾ ಸಮಿತಿ (ACB) ಮತ್ತು ನಾಮಿನೇಷನ್ ಹಾಗೂ ರೆಮ್ಯುನರೇಷನ್ ಕಮಿಟಿ (NRC)ಯನ್ನು ಅಧಿಕಾರೇತರ ನಿರ್ದೇಶಕರು ಒಳಗೊಂಡಂತೆ ಮಾತ್ರ ರಚಿಸಬೇಕು. ಆದರೆ ಆಡಳಿತ ಮಂಡಳಿ ಅಧ್ಯಕ್ಷರು ಲೆಕ್ಕಪರಿಶೋಧನಾ ಸಮಿತಿಯ ಭಾಗವಾಗಲು ಸಾಧ್ಯವಿಲ್ಲ. ಇನ್ನು ಲೆಕ್ಕಪರಿಶೋಧನಾ ಸಮಿತಿ ಕನಿಷ್ಠ 3 ತಿಂಗಳಿಗೊಮ್ಮೆ ಭೇಟಿ ಆಗಬೇಕು.
* ಎಸಿಬಿಯ ಸಭೆ ಅಧ್ಯಕ್ಷತೆಯನ್ನು ಸ್ವತಂತ್ರ ನಿರ್ದೇಶಕರು ವಹಿಸಿಕೊಳ್ಳಬಹುದು ಮತ್ತು ಅವರು ಮಂಡಳಿಯ ಬೇರೆ ಯಾವುದೇ ಸಮಿತಿ ಅಧ್ಯಕ್ಷರಾಗಿರಬಾರದು. ಸಾಲ ಮಂಜೂರು ಮಾಡುವ ಸಮಿತಿಯಲ್ಲಿ ಎಸಿಬಿಯ ಅಧ್ಯಕ್ಷರು ಸದಸ್ಯರಾಗಿರಬಾರದು.
* ಅಧಿಕಾರೇತರ ನಿರ್ದೇಶಕರಿಗೆ ಗರಿಷ್ಠ ವಯೋಮಿತಿ 75 ಮತ್ತು ಅಂಥ ನಿರ್ದೇಶಕರ ಒಟ್ಟು ಅಧಿಕಾರಾವಧಿ ನಿರಂತರವಾಗಿ ಅಥವಾ ಬೇರೆ ಯಾವುದೇ ರೀತಿಯಲ್ಲಿ 8 ವರ್ಷ ಮೀರಬಾರದು. ಆದರೆ 3 ವರ್ಷಗಳ ಅಂತರ ನೀಡಿದ ನಂತರ ಪುನರಾಯ್ಕೆ ಮಾಡಬಹುದು. ಅಧ್ಯಕ್ಷರನ್ನು ಹೊರತುಪಡಿಸಿದಂತೆ ಅಧಿಕಾರೇತರ ಸ್ವತಂತ್ರ ನಿರ್ದೇಶಕರ ವೇತನವು ವರ್ಷಕ್ಕೆ 20 ಲಕ್ಷ ರೂಪಾಯಿಯನ್ನು ದಾಟಬಾರದು.
* ಈಗಿನ ಹೊಸ ಸುತ್ತೋಲೆಯ ಅನ್ವಯ, ಹೆಚ್ಚುವರಿ ಸ್ವತಂತ್ರ ನಿರ್ದೇಶಕ ಅಭ್ಯರ್ಥಿಗಳಿಗೆ ಬೇಡಿಕೆ ಜಾಸ್ತಿ ಮಾಡುತ್ತದೆ. ಇನ್ನು ಅವರಿಗೆ ಆಡಿಟ್, ತಂತ್ರಜ್ಞಾನ, ಸಾಲ, ರಿಸ್ಕ್ ಮ್ಯಾನೇಜ್ಮೆಂಟ್ ಬಗ್ಗೆ ಜ್ಞಾನ, ತಿಳಿವಳಿಕೆ ಇರಬೇಕಾಗುತ್ತದೆ ಎನ್ನುತ್ತಾರೆ ವಿಶ್ಲೇಷಕರು.
ಇದನ್ನೂ ಓದಿ: ಅಮೆರಿಕನ್ ಎಕ್ಸ್ಪ್ರೆಸ್, ಡೈನರ್ಸ್ ಕ್ಲಬ್ನಿಂದ ಮೇ 1ರಿಂದ ಹೊಸ ಸದಸ್ಯರನ್ನು ಮಾಡಿಕೊಳ್ಳಲು ಆರ್ಬಿಐ ನಿರ್ಬಂಧ
(Private banks MD’s, CEO’s maximum tenure fixed at 15 years, compliance from October 1, 2021, according to RBI new guidelines)