ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ (Public Sector bank) ನೌಕರರು ಗುರುವಾರದಿಂದ (ಡಿಸೆಂಬರ್ 16) ಎರಡು ದಿನಗಳ ಮುಷ್ಕರ ನಡೆಸಲಿದ್ದಾರೆ ಎಂದು ಅವರ ಒಕ್ಕೂಟ ಬುಧವಾರ ಪ್ರಕಟಿಸಿತ್ತು. ಅದರಂತೆ ಇಂದಿನಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿನ ಒಂಬತ್ತು ಲಕ್ಷ ಉದ್ಯೋಗಿಗಳು, ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ತಮ್ಮ ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳಲು ಬುಧವಾರ ನಡೆದಿದ್ದ ಸರ್ಕಾರ ಮತ್ತು ಬ್ಯಾಂಕ್ ಒಕ್ಕೂಟಗಳ ಸಭೆ ಸಫಲವಾಗದ ಕಾರಣ ಮುಷ್ಕರಕ್ಕೆ ಸಂಘಟನೆ ಮುಂದಾಗಿದೆ. ಒಂಬತ್ತು ಲಕ್ಷ ನೌಕರರು ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬ್ಯಾಂಕ್ ಒಕ್ಕೂಟಗಳು ಹೇಳಿವೆ.
ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣಗೊಳಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಡಿಸೆಂಬರ್ 16 ಮತ್ತು 17 ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಯುಎಫ್ಬಿಯು ಸಂಸ್ಥೆಯು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್(AIBEA) ಮತ್ತು ಬ್ಯಾಂಕ್ ವರ್ಕರ್ಸ್ ರಾಷ್ಟ್ರೀಯ ಸಂಸ್ಥೆ (NOBW) ಸೇರಿದಂತೆ ಒಂಬತ್ತು ಒಕ್ಕೂಟಗಳ ಒಂದು ಒಕ್ಕೂಟ ಸಂಸ್ಥೆಯಾಗಿದೆ.
ಯಾವೆಲ್ಲಾ ಸೇವೆಗಳಿಗೆ ತೊಂದರೆಯಾಗಲಿದೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ಹೆಚ್ಚಿನ ಬ್ಯಾಂಕ್‌ಗಳು ಚೆಕ್ ಕ್ಲಿಯರೆನ್ಸ್ ಮತ್ತು ಹಣ ವರ್ಗಾವಣೆಯಂತಹ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಮುಷ್ಕರದ ಸಂಭವನೀಯ ಪರಿಣಾಮ ಎದುರಾಗಬಹುದು ಎಂದು ಈಗಾಗಲೇ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಬುಧವಾರ ಬ್ಯಾಂಕ್ ಒಕ್ಕೂಟಗಳು ಮತ್ತು ಸರ್ಕಾರದ ನಡುವೆ ಸಭೆ ನಡೆಸಲಾಯಿತು, ಆದರೆ ಯಾವುದೇ ನಿರ್ಣಯವನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ನಂತರ ಮುಷ್ಕರವನ್ನು ಕಾರ್ಯಗೊತಗೊಳಿಸಲು ಸಂಘಟನೆ ಮುಂದಾಯಿತು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತಾ ತಿಳಿಸಿದ್ದಾರೆ.
ಮುಷ್ಕರದ ಕುರಿತು ಬ್ಯಾಂಕ್ ಸಂಘಟನೆಗಳ ಅಧಿಕಾರಿಗಳು ಹೇಳಿದ್ದೇನು?
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕ್ ಖಾಸಗೀಕರಣ ಮಸೂದೆಯನ್ನು (ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ, 2021) ಮಂಡಿಸುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದರೆ, ಮುಷ್ಕರವನ್ನು ಮರುಪರಿಶೀಲಿಸಲು ನಾವು ಒಲವು ತೋರುತ್ತೇವೆ. ಆದರೆ ಸರ್ಕಾರ ಈ ಕುರಿತು ಯಾವುದೇ ಭರವಸೆ ನೀಡಿಲ್ಲ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ಹೇಳಿದ್ದಾರೆ.
2021-22ರ ಬಜೆಟ್‌ನಲ್ಲಿ ಸರ್ಕಾರವು ಈ ವರ್ಷದಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ (ಪಿಎಸ್‌ಬಿ) ಖಾಸಗೀಕರಣವನ್ನು ತೆಗೆದುಕೊಳ್ಳುವ ಉದ್ದೇಶವನ್ನು ಘೋಷಿಸಿತ್ತು. ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಿದರೆ, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿನ ಬ್ಯಾಂಕ್ ಶಾಖೆಗಳನ್ನು ಮುಚ್ಚುವ ಸಂದರ್ಭ ಎದುರಾಗಬಹುದು ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾದ ಎಲ್ಲಾ ಸರ್ಕಾರಿ ಯೋಜನೆಗಳ ಅನುಷ್ಠಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಯುಎಫ್ಬಿಯುನ ಮಹಾರಾಷ್ಟ್ರ ಘಟಕದ ಸಂಚಾಲಕ ದೇವಿದಾಸ್ ತುಳಜಾಪುರಕರ್ ಹೇಳಿದ್ದಾರೆ.
ಕೇವಲ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 60,000ಕ್ಕೂ ಅಧಿಕ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಲಿದ್ದಾರೆ.
ಇದನ್ನೂ ಓದಿ:
Published On - 9:20 am, Thu, 16 December 21