
ಪುಣೆ, ನವೆಂಬರ್ 12: ಇವತ್ತು ಎಲ್ಲವೂ ಆನ್ಲೈನ್ ಆಗಿರುವುದರಿಂದ ಸೈಬರ್ ಅಪರಾಧಿಗಳಿಗೆ (cyber criminals) ಹಣ ದೋಚಲು ಒಳ್ಳೆಯ ಮಾರ್ಗಗಳು ಸಿಕ್ಕಿವೆ. ಇತ್ತೀಚೆಗೆ ದೇಶದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬರುತ್ತಿವೆ. ಪುಣೆಯ ಮಹಿಳೆಯೊಬ್ಬರು (woman) ಇಂಥದ್ದೇ ಪ್ರಕರಣದಲ್ಲಿ 99 ಲಕ್ಷ ರೂ ಕಳೆದುಕೊಂಡ ಘಟನೆ ನಡೆದಿದೆ. ನಕಲಿ ಸರ್ಕಾರಿ ದಾಖಲೆಗಳನ್ನು (forged documents) ಸೃಷ್ಟಿಸಿ 62 ವರ್ಷದ ಮಹಿಳೆಯೊಬ್ಬಳನ್ನು ಹೆದರಿಸಿ ಆನ್ಲೈನ್ನಲ್ಲೇ ಹಣ ಲಪಟಾಯಿಸಲಾಗಿದೆ. ವಂಚನೆಗೊಳಗಾದ 62 ವರ್ಷದ ಮಹಿಳೆಯು ಪುಣೆಯ ಕೊತ್ರುಡ್ (Kothrud) ಎಂಬಲ್ಲಿನ ನಿವಾಸಿಯಾಗಿದ್ದು, ನಿವೃತ್ತ ಎಲ್ಐಸಿ ಅಧಿಕಾರಿಯೂ ಹೌದು.
ಅಕ್ಟೋಬರ್ ಕೊನೆಯ ವಾರದಲ್ಲಿ ಈ ವಂಚನೆ ನಡೆದಿದೆ. ಸೈಬರ್ ಸಿಟಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಡಾಟಾ ಪ್ರೊಟೆಕ್ಷನ್ ಏಜೆನ್ಸಿ ಕಡೆಯವನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪುಣೆಯ ಮಹಿಳೆಯನ್ನು ಸಂಪರ್ಕಿಸುತ್ತಾನೆ. ಆಕೆಯ ಆಧಾರ್ ಜೋಡಿತ ಮೊಬೈಲ್ ನಂಬರ್ ಅನ್ನು ಅಕ್ರಮ ವಹಿವಾಟುಗಳಿಗೆ ದುರ್ಬಳಕೆ ಮಾಡಲಾಗಿದೆ ಎಂದು ಹೇಳುತ್ತಾನೆ.
ಇದನ್ನೂ ಓದಿ: ಟ್ರೈನ್ನಲ್ಲಿ ಮಕ್ಕಳಿಗೆ ಟಿಕೆಟ್; ವಿನಾಯಿತಿ, ವಯಸ್ಸು, ಸೀಟು, ನಿರ್ಬಂಧ ಇತ್ಯಾದಿ ವಿವರ
ನಂತರ ಆ ಮಹಿಳೆಗೆ ಫೋನ್ನಲ್ಲೇ ಪೊಲೀಸ್ ಅಧಿಕಾರಿ ಎನ್ನಲಾದ ಜಾರ್ಜ್ ಮ್ಯಾಥ್ಯೂ ಅವರನ್ನು ಪರಿಚಯಿಸಲಾಗುತ್ತದೆ. ಆ ನಕಲಿ ಪೊಲೀಸ್ ಅಧಿಕಾರಿಯು, ಮಹಿಳೆಯಿಂದ ಅಕ್ರಮ ಹಣ ವರ್ಗಾವಣೆ ಕೃತ್ಯ ಆಗಿದೆ ಎಂದು ಆರೋಪಿಸಿ, ಆಕೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸುತ್ತಾನೆ.
ವಂಚಕರು ಮಹಿಳೆ ವಿರುದ್ಧ ಒಂದು ನಕಲಿ ಅರೆಸ್ಟ್ ವಾರಂಟ್ ದಾಖಲೆ ಸೃಷ್ಟಿಸಿ ಅದನ್ನು ಮೊಬೈಲ್ ನಂಬರ್ಗೆ ಕಳುಹಿಸಿದ್ದಾರೆ. ಆ ದಾಖಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರ ನಕಲಿ ಹಸ್ತಾಕ್ಷರ ಇರುತ್ತದೆ. ಸರ್ಕಾರ ಅಧಿಕೃತ ಮುದ್ರೆ ರೀತಿಯ ಸೀಲ್ ಹಾಕಲಾಗಿರುತ್ತದೆ.
ಮಹಿಳೆಗೆ ವಯಸ್ಸಾಗಿರುವುದರಿಂದ ಆಕೆಯನ್ನು ಡಿಜಿಟಲ್ ಅರೆಸ್ಟ್ ಮಾಡಲಾಗುವುದು. ದೂರದಿಂದಲೇ ಆಕೆಯ ಮೇಲೆ ನಿಗಾ ಇರಿಸಲಾಗುವುದು ಎಂದು ಹೇಳುವ ದುಷ್ಕರ್ಮಿಗಳು, ಮಹಿಳೆಯ ಎಲ್ಲಾ ಬ್ಯಾಂಕು ಅಕೌಂಟ್ಗಳಲ್ಲಿರುವ ಹಣದ ಪರಿಶೀಲನೆ ಆಗಬೇಕಿರುವುದರಿಂದ, ಅದನ್ನು ಆರ್ಬಿಐ ಅಕೌಂಟ್ಗಳಿಗೆ ವರ್ಗಾಯಿಸಬೇಕೆಂದು ತಿಳಿಸುತ್ತಾರೆ. ಇವರ ಮಾತನನ್ನು ನಂಬಿ ಆ ಮಹಿಳೆ ತನ್ನಲ್ಲಿರುವ 99 ಲಕ್ಷ ರೂ ಹಣವನ್ನು ದುಷ್ಕರ್ಮಿಗಳು ತಿಳಿಸುವ ವಿವಿಧ ಬ್ಯಾಂಕ್ ಅಕೌಂಟ್ಗಳಿಗೆ ವರ್ಗಾವಣೆ ಮಾಡುತ್ತಾರೆ.
ಇದನ್ನೂ ಓದಿ: ಪಾಕಿಸ್ತಾನದ ಸಿಪೆಕ್ಗೆ ಚೀನಾ ಫಂಡಿಂಗ್ ಇಲ್ಲ; ಉಗ್ರರ ಉಪಟಳಕ್ಕೆ ಹೆದರಿತಾ? ಚೀನಾ ಸಾಲ ಕೊಡದೇ ಇರಲು ಏನು ಕಾರಣ?
ಈ ವಂಚಕರು ನಕಲಿ ಅರೆಸ್ಟ್ ವಾರಂಟ್ ಮಾತ್ರವಲ್ಲ, ಜಾರಿ ನಿರ್ದೇಶನಾಲಯ ಮತ್ತಿತರ ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಹಿಳೆಗೆ ಕಳುಹಿಸಿ ಹೆದರಿಸುವ ಕೆಲಸ ಮಾಡುತ್ತಾರೆ. ಮಹಿಳೆಯಿಂದ 99 ಲಕ್ಷ ರೂ ಹಣ ಬಂದ ಬಳಿಕ ದುಷ್ಕರ್ಮಿಗಳು ತಮ್ಮ ಸಂಪರ್ಕ ನಂಬರ್ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಆಗ ಮಹಿಳೆಗೆ ಅನುಮಾನ ಬರುತ್ತದೆ. ಪುಣೆ ಸೈಬರ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ಪೊಲೀಸರು ದುಷ್ಕರ್ಮಿಗಳ ಬ್ಯಾಂಕ್ ಅಕೌಂಟ್ ಮತ್ತು ಫೋನ್ ನಂಬರ್ಗಳನ್ನು ಟ್ರೇಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ