Punjab National Bank: ನಗದು ಡೆಪಾಸಿಟ್​ನಿಂದ ವಿಥ್​ಡ್ರಾವರೆಗೆ, ಲಾಕರ್​ ಶುಲ್ಕದಿಂದ ಅಕೌಂಟ್​ ಕ್ಲೋಸ್​ ತನಕ ಪಿಎನ್​ಬಿಯಲ್ಲಿ ಬದಲಾವಣೆ

| Updated By: Srinivas Mata

Updated on: Jan 10, 2022 | 11:11 AM

ಜನವರಿ 15, 2022ರಿಂದ ಅನ್ವಯ ಆಗುವಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ ವಿವಿಧ ಶುಲ್ಕಗಳ ಏರಿಕೆ ಮಾಡಲಾಗುವುದು. ಯಾವ್ಯಾವುದು ಮತ್ತು ಎಷ್ಟು ಹೆಚ್ಚಳ ಮಾಡಲಾಗುವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Punjab National Bank: ನಗದು ಡೆಪಾಸಿಟ್​ನಿಂದ ವಿಥ್​ಡ್ರಾವರೆಗೆ, ಲಾಕರ್​ ಶುಲ್ಕದಿಂದ ಅಕೌಂಟ್​ ಕ್ಲೋಸ್​ ತನಕ ಪಿಎನ್​ಬಿಯಲ್ಲಿ ಬದಲಾವಣೆ
ಸಾಂದರ್ಭಿಕ ಚಿತ್ರ
Follow us on

ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನಿಂದ ವಿವಿಧ ಸೇವೆಗಳ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಈ ಬಗ್ಗೆ ಈಚೆಗೆ ಅಧಿಸೂಚನೆ ಹೊರಡಿಸಲಾಗಿದೆ. ಜನವರಿ 15, 2022ರಿಂದ ಇದು ಜಾರಿಗೆ ಬರಲಿದೆ. ಮಾಮೂಲಿ ಬ್ಯಾಂಕ್​ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಕೆಲವು ಸೇವಾ ಶುಲ್ಕಗಳನ್ನು ಬ್ಯಾಂಕ್​ನಿಂದ ಹೆಚ್ಚಿಸಲಾಗುವುದು. ಅಂದಹಾಗೆ ಯಾವ್ಯಾವುದರ ಸೇವಾ ಶುಲ್ಕಗಳು ಏರಿಕೆ ಆಗಲಿವೆ ಎಂಬುದರ ಮಾಹಿತಿ ಈ ಕೆಳಕಂಡಂತಿವೆ.

ಕನಿಷ್ಠ ಬ್ಯಾಲೆನ್ಸ್ ಅಗತ್ಯ (Minimum balance requirement)
ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ್ (QAB) ಎಂದು ಮೆಟ್ರೋ ಪ್ರದೇಶಗಳಲ್ಲಿ ಇದ್ದ ಸರಾಸರಿ ರೂ. 5000 ಮೊತ್ತವನ್ನು 10,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದಲ್ಲಿ ವಿಧಿಸುವ ಶುಲ್ಕ
ಗ್ರಾಹಕರ ಖಾತೆಯಲ್ಲಿ ಕನಿಷ್ಠ ತ್ರೈಮಾಸಿಕ ಬ್ಯಾಲೆನ್ಸ್ ನಿರ್ವಹಿಸದಿದ್ದಲ್ಲಿ ಅದಕ್ಕಾಗಿ ವಿಧಿಸುವ ಶುಲ್ಕವನ್ನು ಗ್ರಾಮೀಣ ಪ್ರದೇಶದಲ್ಲಿ ರೂ. 400ಕ್ಕೆ ಮತ್ತು ನಗರ ಹಾಗೂ ಮೆಟ್ರೋ ಪ್ರದೇಶದಲ್ಲಿ 600 ರೂಪಾಯಿಗೆ ಹೆಚ್ಚಿಸಲಾಗಿದೆ.

ಬ್ಯಾಂಕ್ ಲಾಕರ್ ಶುಲ್ಕ
ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ ಲಾಕರ್​ ಬಾಡಿಗೆ ಶುಲ್ಕವನ್ನೂ ಏರಿಕೆ ಮಾಡಲಾಗಿದೆ. ಗ್ರಾಮೀಣ, ಅರೆ ಪಟ್ಟಣ, ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ ಈ ಬದಲಾವಣೆ ಮಾಡಲಾಗಿದೆ. ಮೆಟ್ರೋ ಪ್ರದೇಶದಲ್ಲಿ ಈ ಶುಲ್ಕವನ್ನು 500 ರೂಪಾಯಿ ಹೆಚ್ಚಿಸಲಾಗಿದೆ.

ಬ್ಯಾಂಕ್​ ಲಾಕರ್ ಉಚಿತ ಭೇಟಿ
ಜನವರಿ 15, 2021ರಿಂದ ಅನ್ವಯ ಆಗುವಂತೆ ಒಂದು ವರ್ಷದಲ್ಲಿ ಬ್ಯಾಂಕ್​ ಲಾಕರ್ ಬಳಸುವುದಕ್ಕೆ ಇರುವ ಮಿತಿಯನ್ನು 12ಕ್ಕೆ ಇಳಿಸಲಾಗಿದೆ. ಆ ನಂತರ ಪ್ರತಿ ಬಾರಿ ಭೇಟಿ ನೀಡಿದಾಗಲೂ 100 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇದಕ್ಕೂ ಮುನ್ನ ಲಾಕರ್​ ಬಳಸುವುದಕ್ಕೆ ವರ್ಷದಲ್ಲಿ 15 ಬಾರಿ ಉಚಿತವಾಗಿ ಗ್ರಾಹಕರು ಭೇಟಿ ನೀಡಬಹುದಿತ್ತು.

ಚಾಲ್ತಿ ಖಾತೆ (Current account) ಮುಕ್ತಾಯ
ಚಾಲ್ತಿ ಖಾತೆ ತೆರೆದು 14 ದಿನಗಳ ನಂತರ ಅದನ್ನು ಮುಕ್ತಾಯ ಮಾಡಿದರೆ 800 ರೂಪಾಯಿಯನ್ನು ದಂಡ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಇದಕ್ಕೂ ಮುನ್ನ ಅದು 600 ರೂಪಾಯಿ ಇತ್ತು. ಆದರೆ 12 ತಿಂಗಳ ನಂತರ ಮುಕ್ತಾಯಗೊಳಿಸಿದರೆ ಯಾವುದೇ ಶುಲ್ಕ ಇಲ್ಲ.

ಉಳಿತಾಯ ಖಾತೆ ಮೇಲೆ ವಹಿವಾಟು ಶುಲ್ಕ
ಜನವರಿ 15ರಿಂದ ಜಾರಿಗೆ ಬರುವಂತೆ 3 ಉಚಿತ ವಹಿವಾಟುಗಳಿಗೆ ಅವಕಾಶ ನೀಡುತ್ತದೆ. ಆ ನಂತರ ಪ್ರತಿ ವಹಿವಾಟಿಗೆ 50 ರೂಪಾಯಿ ಶುಲ್ಕ ಹಾಕುತ್ತದೆ. ಪರ್ಯಾಯ ಚಾನೆಲ್​ಗಳಾದ ಬಿಎನ್​ಎ, ಎಟಿಎಂ ಮತ್ತು ಸಿಡಿಎಂ ಇದರಿಂದ ಹೊರತಾಗಿದ್ದು, ಇದು ಹಿರಿಯ ನಾಗರಿಕರಿಗೂ ಅನ್ವಯ ಆಗಲ್ಲ. ಪಂಜಾಬ್​ ನ್ಯಾಷನಲ್ ಬ್ಯಾಂಕ್​ನಿಂದ ಉಳಿತಾಯ ಹಾಗೂ ಚಾಲ್ತಿ ಖಾತೆ ವಹಿವಾಟು ಶುಲ್ಕವನ್ನೂ ಜಾಸ್ತಿ ಮಾಡಲಾಗಿದೆ. ಅದು ಗ್ರಾಹಕರ ಖಾತೆ ಎಲ್ಲಿರುತ್ತದೋ ಅಥವಾ ಬೇರೆ ಶಾಖೆಯೋ ಅದ್ಯಾವುದನ್ನೂ ಪರಿಗಣಿಸದೆ ಸದ್ಯಕ್ಕೆ ತಿಂಗಳಿಗೆ 5 ಉಚಿತ ವಹಿವಾಟು ನಡೆಸುವುದಕ್ಕೆ ಸದ್ಯಕ್ಕೆ ಅವಕಾಶ ಮಾಡಿಕೊಡುತ್ತಿದೆ. ಆ ನಂತರ ಪ್ರತಿ ವಹಿವಾಟಿಗೆ 25 ರೂಪಾಯಿ ಸೇವಾ ಶುಲ್ಕ (ಪರ್ಯಾಯ ಚಾನೆಲ್​ಗಳಾದ ಬಿಎನ್​ಎ, ಎಟಿಎಂ ಮತ್ತು ಸಿಡಿಎಂ ಹೊರತುಪಡಿಸಿ) ವಿಧಿಸುತ್ತಿದೆ.

ನಗದು ನಿರ್ವಹಣೆ ಶುಲ್ಕಗಳು (Cash handling charges)
ಉಳಿತಾಯ ಹಾಗೂ ಚಾಲ್ತಿ ಖಾತೆ ಎರಡರಲ್ಲೂ ನಗದು ಡೆಪಾಸಿಟ್​ನ ಮಿತಿಯನ್ನು ಬ್ಯಾಂಕ್ ಇಳಿಕೆ ಮಾಡಿದೆ. ಒಂದು ದಿನಕ್ಕೆ ಸದ್ಯಕ್ಕೆ 2 ಲಕ್ಷ ರೂಪಾಯಿ ಡೆಪಾಸಿಟ್ ಮಾಡಬಹುದಿತ್ತು. ಅದನ್ನು 1 ಲಕ್ಷ ರೂಪಾಯಿಗೆ ಇಳಿಸಲಾಗಿದೆ. ಮತ್ತು 1 ಲಕ್ಷ ರೂಪಾಯಿ ಮೇಲ್ಪಟ್ಟಂತೆ ಪ್ರತಿ ಬಿಡಿ ನೋಟಿಗೆ 10 ಪೈಸೆ ಶುಲ್ಕವನ್ನು ಜನವರಿ 15, 2022ರಿಂದ ವಿಧಿಸಲಾಗುತ್ತದೆ. ಈ ನಿಯಮವು ಗ್ರಾಹಕರು ಖಾತೆ ಹೊಂದಿರುವ ಶಾಖೆ ಹಾಗೂ ಅದರ ಹೊರತಾಗಿ ಬೇರೆ ಶಾಖೆಗಳಿಗೂ ಅನ್ವಯ ಆಗುತ್ತದೆ ಎಂದು ಬ್ಯಾಂಕ್​ನ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Bank locker: ಜನವರಿ 1ರಿಂದ ಬ್ಯಾಂಕ್​ ಲಾಕರ್​ ನಿಯಮಾವಳಿಗಳಲ್ಲಿ ಬದಲಾವಣೆ; ಈ ಅಂಶಗಳು ತಿಳಿದಿರಲಿ