ಆರ್ ಅಶ್ವಿನ್
Image Credit source: PTI
ಎಂಜಿನಿಯರ್ನ ಪರ್ಫೆಕ್ಷನ್ನಲ್ಲಿ ಕ್ರಿಕೆಟ್ ಆಡುವ ಅಥವಾ ಆಡಿದ ಆಟಗಾರರು ಯಾರೆಂದರೆ ಮೊದಲು ಬರುವ ಹೆಸರು ಅನಿಲ್ ಕುಂಬ್ಳೆ ಮತ್ತು ಆರ್ ಅಶ್ವಿನ್. ಒಬ್ಬರು ಬೆಂಗಳೂರು ಹುಡುಗ, ಮತ್ತೊಬ್ಬರು ಚೆನ್ನೈ ಹುಡುಗ. ಆರ್ ಅಶ್ವಿನ್ (Ravichandran Ashwin) ಟೆಸ್ಟ್ ಕ್ರಿಕೆಟ್ನಲ್ಲಿ 500ಕ್ಕೂ ಅಧಿಕ ವಿಕೆಟ್ಗಳನ್ನು ಕಿತ್ತು, ಭಾರತದ ಅತ್ಯಂತ ಯಶಸ್ವಿ ಬೌಲರ್ಗಳಲ್ಲಿ ಒಬ್ಬರೆನಿಸಿದ್ದಾರೆ. ಅವರ ಕೆಲ ದೈಹಿಕ ಊನವನ್ನು ಬಲವಾಗಿ ಮಾಡಿಕೊಂಡು ಸಾಧನೆ ತೋರಿದ್ದಾರೆ. ರವಿಚಂದ್ರನ್ ಅಶ್ವಿನ್, ಮೈದಾನದಲ್ಲಿ ಮಾತ್ರವಲ್ಲದೆ ಆರ್ಥಿಕ ಲೋಕದಲ್ಲೂ ತಮ್ಮ ಚಾಣಾಕ್ಷತನ ಮೆರೆದಿದ್ದಾರೆ. ಹಲವಾರು ಬ್ಯುಸಿನೆಸ್ಗಳು, ಹೂಡಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2024ರಲ್ಲಿ ಕ್ರಿಕೆಟ್ನಿಂದ ನಿವೃತ್ತರಾಗುವ ಮೊದಲಿಂದಲೂ ಆಟ ಮತ್ತು ವ್ಯವಹಾರ ಎರಡನ್ನೂ ಸಂಭಾಳಿಸುತ್ತಾ ಬಂದವರು. ಈಗ ಅವರ ಆಸ್ತಿಮೌಲ್ಯ ನೂರು ಕೋಟಿ ರೂಗೂ ಅಧಿಕ ಇದೆ.
ಅಶ್ವಿನ್ ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯ
ವರದಿಗಳ ಪ್ರಕಾರ, ರವಿಚಂದ್ರನ್ ಅಶ್ವಿನ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 16 ಮಿಲಿಯನ್ ಡಾಲರ್ (ಅಂದಾಜು ₹132 ಕೋಟಿಗೂ ಹೆಚ್ಚು) ಎಂದು ಅಂದಾಜಿಸಲಾಗಿದೆ. ಕ್ರಿಕೆಟ್ ಪ್ರಶಸ್ತಿಗಳು, ಬಿಸಿಸಿಐ (BCCI) ಒಪ್ಪಂದ, ಐಪಿಎಲ್ (IPL) ಸಂಭಾವನೆ, ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳು ಮತ್ತು ಅವರ ಸ್ವಂತ ವ್ಯವಹಾರಗಳು ಈ ಆದಾಯದ ಮುಖ್ಯ ಮೂಲಗಳಾಗಿವೆ.
ಇದನ್ನೂ ಓದಿ: ಮೊದಲ ಬಾರಿ ಇನ್ವೆಸ್ಟ್ಮೆಂಟ್ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್
ಆರ್ ಅಶ್ವಿನ್ ಅವರ ಬಿಸಿನೆಸ್ ಮತ್ತು ಸ್ಟಾರ್ಟ್‌ಅಪ್ ಹೂಡಿಕೆಗಳು
ಅಶ್ವಿನ್ ಕೇವಲ ಸಾಂಪ್ರದಾಯಿಕ ಹೂಡಿಕೆಗಳಿಗೆ ಸೀಮಿತವಾಗದೆ, ಉದಯೋನ್ಮುಖ ಸ್ಟಾರ್ಟ್‌ಅಪ್‌ಗಳಲ್ಲಿ ಹಣ ಹೂಡಿದ್ದಾರೆ. ವಿವಿಧ ಬ್ಯುಸಿನೆಸ್ಗಳಲ್ಲಿ ತೊಡಗಿಸಿಕೊಂಡಿದ್ದಾರೆ:
- ವಿಒಸಿ ಆಟೊಮೋಟಿವ್: ಇದು ದ್ವಿಚಕ್ರ ವಾಹನಗಳನ್ನು ಸರ್ವಿಸಿಂಗ್ ಮಾಡುವ ಕಂಪನಿ. ದೇಶಾದ್ಯಂತ 150 ಔಟ್ಲೆಟ್ಗಳನ್ನು ಹೊಂದಿದೆ. ರಸ್ತೆಬದಿ ಮೆಕ್ಯಾನಿಕ್ಗಳೇ ಅತಿಹೆಚ್ಚು ಇರುವ ಕ್ಷೇತ್ರದಲ್ಲಿ ವಿಒಸಿ ಆಟೊಮೋಟಿವ್ ಒಂದು ಅಧಿಕೃತತೆ ನೀಡುತ್ತದೆ. 2025ರ ಏಪ್ರಿಲ್ನಲ್ಲಿ ಅಶ್ವಿನ್ ಅವರು ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಬ್ರ್ಯಾಂಡ್ ಅಂಬಾಸಡರ್ ಆಗಿದ್ದಾರೆ.
- ಕ್ವಿಲಿ: ಇದು (Qwili) ಸೌತ್ ಆಫ್ರಿಕಾದ ಫಿನ್ಟೆಕ್ ಕಂಪನಿ. ಡಿಜಿಟಲ್ ಸರ್ವಿಸ್ಗಳನ್ನು ಕೊಡುತ್ತದೆ. 2022ರ ಜುಲೈನಲ್ಲಿ ಇದಕ್ಕೆ ಸೀಡಿಂಗ್ ಫಂಡ್ ನೀಡಿದರು ಅಶ್ವಿನ್. ಸೀಡಿಂಗ್ ಫಂಡ್ ಎಂದರೆ ಕಂಪನಿಗೆ ಆರಂಭಿಕ ಬಂಡವಾಳ.
- ಟರ್ಫ್ ಟೌನ್: ಚೆನ್ನೈ ಮೂಲದ ಈ ಕಂಪನಿಯನ್ನು 2018ರಲ್ಲಿ ಆರ್ ಅಶ್ವಿನ್ ಅವರು ಸಹ-ಸಂಸ್ಥಾಪನೆ ಮಾಡಿದ್ದಾರೆ. ವಿವಿಧ ಕ್ರೀಡಾಪಟುಗಳಿಗೆ ಸಹ-ಆಟಗಾರರು, ಕ್ರೀಡಾಂಗಣಗಳನ್ನು ಬುಕ್ ಮಾಡಲು ಅನುವು ಮಾಡಿಕೊಡುವ ಒಂದು ಸ್ಪೋರ್ಟ್ಸ್ ಮ್ಯಾಚ್ಮೇಕಿಂಗ್ ಆ್ಯಪ್.
- ಮಸ್ಕೆಟೀರ್ಸ್ ಸ್ಪೋರ್ಟ್ಸ್ ಅರೇನಾಸ್: ಪಿಕಲ್ ಬಾಲ್ಗಳ ಕೋರ್ಟ್ಗಳನ್ನು ಹೊಂದಿರುವ ಕಂಪನಿ. ಫಿಟ್ನೆಸ್ ಮತ್ತು ಮನೋಲ್ಲಾಸಕ್ಕಾಗಿ ಜನರು ಈ ಆಟ ಆಡುತ್ತಾರೆ. 2024ರ ಜೂನ್ನಲ್ಲಿ ಅಶ್ವಿನ್ ಅವರು ಈ ಕಂಪನಿಯಲ್ಲಿ ಹೂಡಿಕೆ ಮಾಡಿದರು.
- ಜೆನ್ ನೆಕ್ಸ್ಟ್ ಕ್ರಿಕೆಟ್ ಇನ್ಸ್ಟಿಟ್ಯೂಟ್: 2012ರಲ್ಲಿ ಅಶ್ವಿನ್ ಅವರ ತಂದೆ ಶುರು ಮಾಡಿದ ಸಂಸ್ಥೆ. ಕ್ರಿಕಟ್ ತರಬೇತಿ ನೀಡುತ್ತದೆ. ಚೆನ್ನೈ, ಶಾರ್ಜಾ, ಯುಕೆಯಲ್ಲಿ ಇದರ ಸೆಂಟರ್ಗಳಿವೆ. ಅಶ್ವಿನ್ ಅವರು ಈ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಾರೆ.
- ಸೂಪರ್ಕಿಂಗ್ ವೆಂಚರ್ಸ್: ಸಿಎಸ್ಕೆ ತಂಡದ ಹೈಪರ್ಫಾರ್ಮೆನ್ಸ್ ಸೆಂಟರ್ ಇದು. 2024ರ ಜೂನ್ನಲ್ಲಿ ಅಶ್ವಿನ್ ಇದರಲ್ಲಿ ತೊಡಗಿಸಿಕೊಂಡರು. ಸಣ್ಣ ಹುಡುಗರನ್ನು ಮೊಳಕೆಯಲ್ಲೇ ಗುರುತಿಸಿ ಅವರಿಗೆ ಮೆಂಟರಿಂಗ್ ಮಾಡುವ ಕೆಲಸದಲ್ಲಿದ್ದಾರೆ.
- ಡುಬ್ಲಿನ್ ಗಾರ್ಡಿಯನ್ಸ್: ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್ನಲ್ಲಿ ರಾಹುಲ್ ದ್ರಾವಿಡ್ ಖರೀದಿಸಿದ ಡುಬ್ಲಿನ್ ಗಾರ್ಡಿಯನ್ಸ್ ಫ್ರಾಂಚೈಸಿಯಲ್ಲಿ ಆರ್ ಅಶ್ವಿನ್ ಅವರು ಕ್ಯಾಪ್ಟನ್ ಮತ್ತು ಮೆಂಟರ್ ಆಗಿದ್ದಾರೆ.
- ಕೇರಂ ಬಾಲ್ ಇವೆಂಟ್ಸ್ ಅಂಡ್ ಮಾರ್ಕೆಟಿಂಗ್: ಇದು ಆರ್ ಅಶ್ವಿನ್ ಅವರೇ ಆರಂಭಿಸಿದ ಮೀಡಿಯಾ ಕಂಪನಿ. 2018ರಲ್ಲೇ ಆರಂಭವಾಗಿದೆ. ಇದರ ಯೂಟ್ಯೂಬ್ ಚಾನಲ್ಗೆ 18 ಲಕ್ಷಕ್ಕೂ ಅಧಿಕ ಸಬ್ಸಕ್ರೈಬರ್ಸ್ ಹೊಂದಿದ್ದಾರೆ. ಇವರೇ ಇಂಟರ್ವ್ಯೂ ಮಾಡುತ್ತಾರೆ. ಬಹಳ ಎಕ್ಸ್ಕ್ಲೂಸಿವ್ ಕಂಟೆಂಟ್ಗಳು, ಕ್ರೀಡೆಯ ಇನ್ಸೈಟ್ಸ್ ಎಲ್ಲವೂ ಇರುತ್ತದೆ. ವಿವಿಧ ಬ್ರ್ಯಾಂಡಿಂಗ್ಗಳ ಮೂಲಕ ಇವರು ಕೋಟಿಗಟ್ಟಲೆ ಗಳಿಸುತ್ತಾರೆ.
ಇದನ್ನೂ ಓದಿ: ಭಾರತದ ಸ್ಟುಡೆಂಟ್ ಸ್ಟಾರ್ಟ್‌ಅಪ್‌ಗಳಲ್ಲಿ ಡೀಪ್-ಟೆಕ್ ಕ್ರಾಂತಿ: ಕ್ಯಾಂಪಸ್ ಫಂಡ್ ವರದಿ
ರಿಯಲ್ ಎಸ್ಟೇಟ್ ಮತ್ತು ಐಷಾರಾಮಿ ಕಾರುಗಳು
ಚೆನ್ನೈನಲ್ಲಿ ಆರ್ ಅಶ್ವಿನ್ ಅವರು ಅತ್ಯಂತ ಸುಸಜ್ಜಿತವಾದ ಮತ್ತು ಐಷಾರಾಮಿ ಸ್ವಂತ ಮನೆಯನ್ನು ಹೊಂದಿದ್ದಾರೆ. ಇದರ ಜೊತೆಗೆ ದೇಶದ ಹಲವು ಕಡೆ ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಮಾಡಿದ್ದಾರೆ. ಅವರ ಕಾರುಗಳ ಸಂಗ್ರಹದಲ್ಲಿ ಆಡಿ (Audi), ಬಿಎಂಡಬ್ಲ್ಯೂ (BMW) ನಂತಹ ಪ್ರಮುಖ ಐಷಾರಾಮಿ ಬ್ರ್ಯಾಂಡ್‌ಗಳು ಸೇರಿವೆ.
ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ಸ್‌ಮನ್‌ಗಳ ಮುಂದಿನ ಮೂವ್ ಅನ್ನು ಮೊದಲೇ ಊಹಿಸುವ ಅಶ್ವಿನ್, ಮಾರುಕಟ್ಟೆಯ ಟ್ರೆಂಡ್ ಅರಿತು ಭವಿಷ್ಯದ ತಂತ್ರಜ್ಞಾನ ಮತ್ತು ಮಾಧ್ಯಮ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಮೈದಾನದ ಹೊರಗೂ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ