ಮೊದಲ ಬಾರಿ ಇನ್ವೆಸ್ಟ್ಮೆಂಟ್ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್
Financial Habits for Beginners: ಹೂಡಿಕೆ ಜಗತ್ತಿಗೆ ಹೊಸಬರೇ? ಆರ್ಥಿಕ ಭದ್ರತೆ ಮತ್ತು ದೀರ್ಘಾವಧಿ ಸಂಪತ್ತು ವೃದ್ಧಿಗೆ ಕೆಲವು ಸರಳ ಆರ್ಥಿಕ ಅಭ್ಯಾಸಗಳು ಅವಶ್ಯಕ. ಬೇಗ ಹೂಡಿಕೆ ಆರಂಭಿಸಿ, ಬಜೆಟ್ ಮಾಡಿ ಉಳಿಸಿ, ತುರ್ತು ನಿಧಿ ರೂಪಿಸಿ. ನಿಮ್ಮ ಹೂಡಿಕೆಯಲ್ಲಿ ವೈವಿಧ್ಯತೆ ಕಾಯ್ದುಕೊಳ್ಳಿ, ಶಿಸ್ತುಬದ್ಧರಾಗಿ ಮುಂದುವರಿಯಿರಿ. ಅನಗತ್ಯ ಸಾಲಗಳಿಂದ ದೂರವಿರಿ. ಈ ಕ್ರಮಗಳು ನಿಮ್ಮನ್ನು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ಕೊಂಡೊಯ್ಯುತ್ತವೆ.

ಹಣ ಗಳಿಸುವುದು ಎಷ್ಟು ಮುಖ್ಯವೋ, ಗಳಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ (Investment) ಮಾಡಿ ಅದರಿಂದ ಸಂಪತ್ತನ್ನು ಬೆಳೆಸುವುದು ಮತ್ತು ರಕ್ಷಿಸುವುದು ಅಷ್ಟೇ ಮುಖ್ಯ. ಹೂಡಿಕೆ ಜಗತ್ತಿಗೆ ಹೊಸದಾಗಿ ಕಾಲಿಡುತ್ತಿರುವವರಿಗಾಗಿ (Beginners), ದೀರ್ಘಾವಧಿಯಲ್ಲಿ ಆರ್ಥಿಕ ಭದ್ರತೆ ಪಡೆಯಲು ಸಹಾಯ ಮಾಡುವ ಕೆಲವು ಸರಳ ಮತ್ತು ಪ್ರಮುಖ ಆರ್ಥಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ನೀವು ಒಂದು ಅಥವಾ ಎರಡು ವರ್ಷದವರೆಗೆ ಮಾತ್ರ ಹೂಡಿಕೆ ಮಾಡಿ, ಹಣ ವಿತ್ಡ್ರಾ ಮಾಡಿಕೊಳ್ಳುತ್ತೇನೆ ಎಂದಿದ್ದರೆ ಆರ್ಡಿಯಲ್ಲೋ, ಎಫ್ಡಿಯಲ್ಲೋ ಅಥವಾ ಕೆಲ ಪೋಸ್ಟ್ ಆಫೀಸ್ ಸ್ಕೀಮ್ಗಳನ್ನೂ ಬಳಸಬಹುದು. ದೀರ್ಘಾವಧಿ ಹೂಡಿಕೆಯಿಂದ ಮಾತ್ರ ಸಂಪತ್ತು ಅಚ್ಚರಿ ರೀತಿಯಲ್ಲಿ ಬೆಳೆಯುತ್ತೆ. ಆ ನಿಟ್ಟಿನಲ್ಲಿ ಒಂದಷ್ಟು ಟಿಪ್ಸ್ ಇಲ್ಲಿದೆ:
ಬೇಗ ಹೂಡಿಕೆ ಆರಂಭಿಸಿ
ಹೂಡಿಕೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆರಂಭಿಸಬೇಕು. ಕಡಿಮೆ ವಯಸ್ಸಿನಲ್ಲಿ ಸಣ್ಣ ಪ್ರಮಾಣದ ಹಣವನ್ನು ಹೂಡಿಕೆ ಮಾಡಲು ಆರಂಭಿಸಿದರೂ, ದೀರ್ಘಾವಧಿಯಲ್ಲಿ ಅದು ಚಕ್ರ ಬಡ್ಡಿಯ (Power of Compounding) ಬಲದಿಂದಾಗಿ ದೊಡ್ಡ ಮೊತ್ತದ ಸಂಪತ್ತಾಗಿ ಬೆಳೆಯುತ್ತದೆ. ತಡವಾಗಿ ದೊಡ್ಡ ಮೊತ್ತ ಹೂಡುವುದಕ್ಕಿಂತ, ಬೇಗನೆ ಸಣ್ಣ ಮೊತ್ತ ಹೂಡುವುದು ಹೆಚ್ಚು ಲಾಭದಾಯಕ.
ಬಜೆಟ್ ತಯಾರಿ ಮತ್ತು ಉಳಿತಾಯ
ಹೂಡಿಕೆ ಮಾಡುವ ಮುನ್ನ ನಿಮ್ಮ ಆದಾಯ ಮತ್ತು ಖರ್ಚುಗಳ ಬಗ್ಗೆ ಸ್ಪಷ್ಟತೆ ಇರಬೇಕು. ಪ್ರತಿ ತಿಂಗಳು ಸಂಬಳ ಬಂದ ತಕ್ಷಣ ಮೊದಲು ಹೂಡಿಕೆಗಾಗಿ ಒಂದು ನಿರ್ದಿಷ್ಟ ಮೊತ್ತವನ್ನು (ಉದಾಹರಣೆಗೆ 20%) ಪಕ್ಕಕ್ಕೆ ಎತ್ತಿಡಬೇಕು. ಆ ನಂತರ ಉಳಿದ ಹಣದಲ್ಲಿ ತಿಂಗಳ ಖರ್ಚುಗಳನ್ನು ನಿಭಾಯಿಸುವ ಅಭ್ಯಾಸ ಮಾಡಿಕೊಳ್ಳಬೇಕು.
ಇದನ್ನೂ ಓದಿ: ಭಾರತದ ಸ್ಟುಡೆಂಟ್ ಸ್ಟಾರ್ಟ್‌ಅಪ್‌ಗಳಲ್ಲಿ ಡೀಪ್-ಟೆಕ್ ಕ್ರಾಂತಿ: ಕ್ಯಾಂಪಸ್ ಫಂಡ್ ವರದಿ
ತುರ್ತು ನಿಧಿ ಸ್ಥಾಪನೆ
ಯಾವುದೇ ಹೂಡಿಕೆ ಪ್ರಕ್ರಿಯೆಯನ್ನು ಆರಂಭಿಸುವ ಮುನ್ನ ಕನಿಷ್ಠ 3 ರಿಂದ 6 ತಿಂಗಳ ಖರ್ಚಿಗೆ ಆಗುವಷ್ಟು ಹಣವನ್ನು ತುರ್ತು ನಿಧಿಯಾಗಿ (Emergency Fund) ಬ್ಯಾಂಕ್ ಖಾತೆಯಲ್ಲಿ ಅಥವಾ ಸುಲಭವಾಗಿ ಹಿಂಪಡೆಯಬಹುದಾದ ಲಿಕ್ವಿಡ್ ಫಂಡ್‌ಗಳಲ್ಲಿ ಇಡಬೇಕು. ಇದು ಕೆಲಸ ಕಳೆದುಕೊಂಡಾಗ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದಾಗ ನಿಮ್ಮ ದೀರ್ಘಾವಧಿಯ ಹೂಡಿಕೆಗೆ ಧಕ್ಕೆ ಬರದಂತೆ ರಕ್ಷಿಸುತ್ತದೆ.
ಹೂಡಿಕೆಯಲ್ಲಿ ವೈವಿಧ್ಯತೆ
“ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬೇಡಿ” ಎಂಬ ಗಾದೆಯಂತೆ, ನಿಮ್ಮ ಸಂಪೂರ್ಣ ಹಣವನ್ನು ಒಂದೇ ಕಡೆ ಹೂಡಿಕೆ ಮಾಡಬಾರದು. ನಿಮ್ಮ ರಿಸ್ಕ್ (Risk Appetite) ಸಾಮರ್ಥ್ಯಕ್ಕೆ ಅನುಗುಣವಾಗಿ ಹಣವನ್ನು ಷೇರು ಮಾರುಕಟ್ಟೆ (Stocks), ಮ್ಯೂಚುಯಲ್ ಫಂಡ್‌ಗಳು, ಸ್ಥಿರ ಠೇವಣಿ (FD), ಚಿನ್ನ (Gold) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ಗಳ ನಡುವೆ ಹಂಚಿ ಹೂಡಿಕೆ (Diversification) ಮಾಡಬೇಕು. ಇದರಿಂದ ನಷ್ಟದ ಸಾಧ್ಯತೆ ಕಡಿಮೆಯಾಗುತ್ತದೆ.
ಸ್ಥಿರತೆ ಮತ್ತು ಶಿಸ್ತು
ಮಾರುಕಟ್ಟೆಯ ಏರಿಳಿತಗಳನ್ನು ನೋಡಿ ಹೆದರದೆ, ಶಿಸ್ತಿನಿಂದ ಹೂಡಿಕೆ ಮಾಡುವುದನ್ನು ಮುಂದುವರಿಸಬೇಕು. ಮ್ಯೂಚುಯಲ್ ಫಂಡ್‌ಗಳಲ್ಲಿ ಎಸ್‌ಐಪಿ (SIP – Systematic Investment Plan) ಮೂಲಕ ಪ್ರತಿ ತಿಂಗಳು ನಿಯಮಿತವಾಗಿ ಹೂಡಿಕೆ ಮಾಡುವುದು ಹೊಸಬರಿಗೆ ಅತ್ಯುತ್ತಮ ಅಭ್ಯಾಸವಾಗಿದೆ. ಇದು ಮಾರುಕಟ್ಟೆಯ ಏರಿಳಿತದ ರಿಸ್ಕ್ ಅನ್ನು ಸರಿದೂಗಿಸುತ್ತದೆ (Rupee Cost Averaging).
ಇದನ್ನೂ ಓದಿ: ಅಗ್ಗದ ಇಂಧನ ಮತ್ತು ಸ್ಥಿರ ಪೂರೈಕೆ ಇವತ್ತು ಜಗತ್ತಿಗೆ ಅವಶ್ಯಕ: ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್, ರುಬಿಯೋ ಹೇಳಿಕೆ
ಅನಗತ್ಯ ಸಾಲಗಳಿಂದ ದೂರವಿರಿ
ಕ್ರೆಡಿಟ್ ಕಾರ್ಡ್ ಸಾಲಗಳು ಮತ್ತು ಹೆಚ್ಚಿನ ಬಡ್ಡಿಯ ವೈಯಕ್ತಿಕ ಸಾಲಗಳು (Personal Loans) ನಿಮ್ಮ ಸಂಪತ್ತನ್ನು ಕರಗಿಸುತ್ತವೆ. ಹೂಡಿಕೆಯಿಂದ ಬರುವ ಲಾಭಕ್ಕಿಂತ ಈ ಸಾಲಗಳ ಬಡ್ಡಿಯೇ ಹೆಚ್ಚಿರುತ್ತದೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ಇಂತಹ ದುಬಾರಿ ಸಾಲಗಳನ್ನು (Bad Debts) ತೀರಿಸುವುದು ಜಾಣತನ.
ಶ್ರೀಮಂತರಾಗುವುದು ಒಂದೇ ದಿನದ ಪವಾಡವಲ್ಲ, ಅದೊಂದು ನಿರಂತರ ಪ್ರಕ್ರಿಯೆ. ತಾಳ್ಮೆ, ಶಿಸ್ತು ಮತ್ತು ನಿಯಮಿತ ಹೂಡಿಕೆಯ ಅಭ್ಯಾಸಗಳು ಮಾತ್ರ ನಿಮ್ಮನ್ನು ದೀರ್ಘಾವಧಿಯಲ್ಲಿ ಆರ್ಥಿಕವಾಗಿ ಸ್ವತಂತ್ರರನ್ನಾಗಿ (Financial Freedom) ಮಾಡಬಲ್ಲವು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





