ಪಾಕಿಸ್ತಾನದಲ್ಲಿ ಬಡವರ ಪಟ್ಟಿಗೆ 6 ವರ್ಷದಲ್ಲಿ 2.7 ಕೋಟಿ ಜನರ ಸೇರ್ಪಡೆ; ಬಡತನ ಶೇ. 7ರಷ್ಟು ಹೆಚ್ಚಳ
Pakistan Poverty Jumps: ಪಾಕಿಸ್ತಾನದಲ್ಲಿ ಕಳೆದ ಆರು ವರ್ಷಗಳಲ್ಲಿ ಬಡತನ ದರ ಶೇ. 7ರಷ್ಟು ಜಿಗಿದು 28.9% ಕ್ಕೆ ತಲುಪಿದೆ. ಸುಮಾರು 2.7 ಕೋಟಿಗೂ ಹೆಚ್ಚು ಜನರು ಹೊಸದಾಗಿ ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಟ್ಟಿದ್ದು, ಒಟ್ಟು 7 ಕೋಟಿ ಜನ ಬಡವರಾಗಿದ್ದಾರೆ. ಆರ್ಥಿಕ ಸಮೀಕ್ಷೆ 2025-26 ಪ್ರಕಾರ, ಹಣದುಬ್ಬರ, ಆರ್ಥಿಕ ಆಘಾತಗಳು ಮತ್ತು IMF ಷರತ್ತುಗಳು ಬಡತನ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ, ಇದರಿಂದ ಆದಾಯ ಅಸಮಾನತೆಯೂ ತೀವ್ರಗೊಂಡಿದೆ.

ಇಸ್ಲಾಮಾಬಾದ್, ಜೂನ್ 12: ಪಾಕಿಸ್ತಾನ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಆರ್ಥಿಕ ಸಮೀಕ್ಷೆ 2025-26’ (Pakistan Economic Survey) ವರದಿಯ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ದೇಶದ ಬಡತನದ ಪ್ರಮಾಣವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಸುಮಾರು 2.70 ಕೋಟಿಗೂ ಹೆಚ್ಚು ಜನರು ಹೊಸದಾಗಿ ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಟ್ಟಿದ್ದು, ದೇಶದ ಒಟ್ಟು ಬಡವರ ಸಂಖ್ಯೆ ಈಗ ಅಂದಾಜು 7 ಕೋಟಿಗೆ ತಲುಪಿದೆ.
2018-19 ರಲ್ಲಿ ಪಾಕಿಸ್ತಾನ ದೇಶದಲ್ಲಿದ್ದ ಬಡತನದ ಪ್ರಮಾಣ ಶೇ. 21.9 ರಷ್ಟಿತ್ತು. 2024-25 ರ ವೇಳೆಗೆ ಇದು ಶೇ. 28.9 ಕ್ಕೆ ಏರಿಕೆಯಾಗಿದೆ. ಅಂದರೆ ಕೇವಲ 6 ವರ್ಷಗಳಲ್ಲಿ ಬಡತನದ ಪ್ರಮಾಣದಲ್ಲಿ ಶೇ. 7 ರಷ್ಟು ಜಿಗಿತ ಕಂಡುಬಂದಿದೆ. ಹಳ್ಳಿಗಳಲ್ಲಿ ಬಡತನದ ಪ್ರಮಾಣವು ಶೇಕಡಾ 28.2 ರಿಂದ 36.2 ಕ್ಕೆ ಏರಿದೆ. ನಗರ ಪ್ರದೇಶಗಳಲ್ಲೂ ಪರಿಸ್ಥಿತಿ ಬಿಗಡಾಯಿಸಿದ್ದು, ಬಡತನದ ಪ್ರಮಾಣವು ಶೇ. 11 ರಿಂದ 17.4 ಕ್ಕೆ ಏರಿಕೆಯಾಗಿದೆ.
ಪಾಕಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿ ಬಡತನದ ಸ್ಥಿತಿಗತಿ
- ಬಲೂಚಿಸ್ತಾನ್: ಇಲ್ಲಿ ಬಡತನದ ಪ್ರಮಾಣವು ಶೇ. 41.8 ರಿಂದ ಶೇ. 47 ಕ್ಕೆ ಏರಿಕೆಯಾಗಿದ್ದು, ದೇಶದಲ್ಲೇ ಅತ್ಯಂತ ಹೆಚ್ಚು ಬಡತನ ಹೊಂದಿರುವ ಪ್ರದೇಶವಾಗಿದೆ.
- ಸಿಂಧ್: ಶೇ. 24.5 ರಿಂದ ಶೇ. 32.6 ಕ್ಕೆ ಏರಿದೆ.
- ಖೈಬರ್ ಪಖ್ತುಂಖ್ವಾ: ಶೇ. 28.7 ರಿಂದ ಶೇ. 35.3 ಕ್ಕೆ ಹೆಚ್ಚಾಗಿದೆ.
- ಪಂಜಾಬ್: ಶೇ. 16.5 ರಿಂದ ಶೇ. 23.3 ಕ್ಕೆ ಏರಿಕೆಯಾಗಿದ್ದರೂ, ಬೇರೆ ಪ್ರಾಂತ್ಯಗಳಿಗೆ ಹೋಲಿಸಿದರೆ ಇಲ್ಲಿ ಬಡತನದ ತೀವ್ರತೆ ಸ್ವಲ್ಪ ಕಡಿಮೆ ಇದೆ.
ಇದನ್ನೂ ಓದಿ: ಈಗಲೂ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ವಿಶ್ವಬ್ಯಾಂಕ್ ವರದಿ
ಬಡತನ ಹೆಚ್ಚಾಗಲು ಪ್ರಮುಖ ಕಾರಣಗಳೇನು?
ದೇಶದಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಆರ್ಥಿಕ ಆಘಾತಗಳೇ ಇದಕ್ಕೆ ಕಾರಣ ಎಂದು ಆರ್ಥಿಕ ಸಮೀಕ್ಷಾ ವರದಿ ಹೇಳಿದೆ. ದಾಖಲೆ ಮಟ್ಟದ ಹಣದುಬ್ಬರ (ಬೆಲೆ ಏರಿಕೆ) ಮತ್ತು ಪಾಕಿಸ್ತಾನಿ ರೂಪಾಯಿ ಮೌಲ್ಯದ ಕುಸಿರುವುದು; ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ವಿಧಿಸಿರುವ ಕಠಿಣ ಆರ್ಥಿಕ ಸ್ಥಿರೀಕರಣ ಕ್ರಮಗಳು; ಭೀಕರ ಪ್ರವಾಹದಂತಹ ಹವಾಮಾನ ವೈಪರೀತ್ಯದ ವಿಕೋಪಗಳು; ಹಾಗೂ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಸಂಘರ್ಷಗಳ ಜಾಗತಿಕ ಪ್ರಭಾವವು ಬಡತನ ಹೆಚ್ಚಳಕ್ಕೆ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ.
ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ
ಬಡತನ ಹೆಚ್ಚಾಗುವುದರ ಜೊತೆಗೆ ಶ್ರೀಮಂತರು ಮತ್ತು ಬಡವರ ನಡುವಿನ ಆರ್ಥಿಕ ಅಸಮಾನತೆಯೂ (Income Inequality) ಹೆಚ್ಚಾಗಿದೆ. ದೇಶದ ಆದಾಯದ ಅಸಮಾನತೆಯನ್ನು ಅಳೆಯುವ ‘ಗಿನಿ ಕೋಫಿಷಿಯಂಟ್’ (Gini coefficient) ಸೂಚ್ಯಂಕವು 2018-19 ರಲ್ಲಿದ್ದ 28.4 ರಿಂದ 2024-25 ರ ವೇಳೆಗೆ 32.7 ಕ್ಕೆ ಏರಿಕೆಯಾಗಿದೆ. ಇದು ದೇಶದಲ್ಲಿ ಸಂಪತ್ತಿನ ಹಂಚಿಕೆ ಸರಿಯಾಗಿ ಆಗುತ್ತಿಲ್ಲ ಎಂಬುದನ್ನು ತೋರಿಸುತ್ತದೆ.
ಇದನ್ನೂ ಓದಿ: ಡಾಲರ್ ಎದುರು ರುಪಾಯಿ ಮೌಲ್ಯ 67 ಪೈಸೆ ಜಿಗಿತ; 10 ದಿನದಲ್ಲಿ 100 ಪೈಸೆ ಮೌಲ್ಯ ಹೆಚ್ಚಳ
ಭಾರತದಲ್ಲಿರುವಂತೆ ಪಾಕಿಸ್ತಾನದಲ್ಲೂ ಕೂಡ ಪ್ರತಿ ವರ್ಷ ಸರ್ಕಾರವು ತನ್ನ ದೇಶದ ಬಜೆಟ್ ಮಂಡಿಸುವ ಮುನ್ನ ಅಧಿಕೃತ ಆರ್ಥಿಕ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡುತ್ತದೆ. ಈ ವರದಿಯು ಮೂಲಭೂತ ಅಗತ್ಯಗಳ ವೆಚ್ಚದ (Cost of Basic Needs) ಆಧಾರದ ಮೇಲೆ ಬಡತನವನ್ನು ಲೆಕ್ಕ ಹಾಕುತ್ತದೆ. ವಿಶ್ವಬ್ಯಾಂಕ್ ವರದಿ ಪ್ರಕಾರ ಭಾರತದಲ್ಲಿ ಕಡುಬಡತನದ ಮಟ್ಟ ಶೇ 5-6ರಷ್ಟು ಇದ್ದರೆ, ಪಾಕಿಸ್ತಾನದಲ್ಲಿ ಅದು ಶೇ. 25ಕ್ಕಿಂತಲೂ ಹೆಚ್ಚು ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




