ನವದೆಹಲಿ, ಡಿಸೆಂಬರ್ 25: ಭಾರತದ ಆರ್ಥಿಕತೆ ಬೆಳೆಯುತ್ತಿದೆ. ಆದರೆ, ಕೆಲವೇ ಜನರ ಬಳಿ ಸಂಪತ್ತು ಶೇಖರಣೆ ಆಗುತ್ತಿದೆ. ನಿರುದ್ಯೋಗದ ಸಮಸ್ಯೆ (unemployment issue) ಮುಂದುವರಿದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಹತ್ತು ದಿನ ಹಿಂದೆ (ಡಿ. 15) ಅಮೆರಿಕದ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ತಾನು ನಡೆಸಿದ ಸಂವಾದದ ವಿಡಿಯೋ ತುಣುಕೊಂದನ್ನು ರಾಹುಲ್ ಗಾಂಧಿ (Rahul Gandhi interaction with Harvard Universty students) ತಮ್ಮ ಎಕ್ಸ್ ಖಾತೆಯಲ್ಲಿ ನಿನ್ನೆ ಪೋಸ್ಟ್ ಮಾಡಿದ್ದಾರೆ. ಸಂವಾದದ ವೇಳೆ ವಿದ್ಯಾರ್ಥಿಗಳು ಕಳೆದ 10 ವರ್ಷದಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆ ಸಾಧಿಸಿರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ರಾಹುಲ್ ಗಾಂಧಿ, ಕೆಲವೇ ಮಂದಿಗೆ ಮಾತ್ರ ಈ ಬೆಳವಣಿಗೆ ಸೀಮಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ನೀವು ಆರ್ಥಿಕತ ಬೆಳವಣಿಗೆ ಬಗ್ಗೆ ಮಾತನಾಡುವಾಗ, ಯಾರ ಹಿತಾಸಕ್ತಿಗೆ ಆರ್ಥಿಕ ಬೆಳವಣಿಗೆ ಆಗುತ್ತಿದೆ ಎಂದು ಪ್ರಶ್ನೆ ಕೇಳಬೇಕು.
‘ಆ ಬೆಳವಣಿಗೆಯ ಸ್ವಭಾವ ಏನಿದೆ, ಅದರಿಂದ ಲಾಭ ಆಗುತ್ತಿರುವುದು ಯಾರಿಗೆ ಎಂಬುದು ಪ್ರಶ್ನೆ ಆಗಬೇಕು. ಭಾರತದ ಬೆಳವಣಿಗೆಯ ದರದ ಪಕ್ಕದಲ್ಲೇ ನಿರುದ್ಯೋಗ ದರವೂ ಇದೆ. ಭಾರತ ಬೆಳವಣಿಗೆ ಸಾಧಿಸುತ್ತಿರುವುದು ಹೌದು. ಆದರೆ, ಅದು ಬೆಳೆಯುತ್ತಿರುವ ರೀತಿಯು ಹೆಚ್ಚಿನ ಸಂಪತ್ತನ್ನು ಕೆಲವೇ ಜನರ ಬಳಿ ಶೇಖರಿಸುವಂತಿದೆ,’ ಎಂದು ರಾಹುಲ್ ಗಾಂಧಿ ಹಾರ್ವರ್ಡ್ ವಿವಿ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಜನರು ಒಂದಾಗಬೇಕು: ಮಲ್ಲಿಕಾರ್ಜುನ ಖರ್ಗೆ ಕರೆ
‘ನಮ್ಮಲ್ಲಿ ಮಿಸ್ಟರ್ ಅದಾನಿ ಇದ್ದಾರೆ. ಪ್ರಧಾನಿ ಜೊತೆ ಅವರು ನಿಕಟತೆ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ನಮ್ಮ ಎಲ್ಲಾ ಪೋರ್ಟ್, ಏರ್ಪೋರ್ಟ್, ಇನ್ಫ್ರಾಸ್ಟ್ರಕ್ಚರ್ ಎಲ್ಲವೂ ಅವರ ಕೈಯಲ್ಲೇ ಇದೆ. ನೀವು ಆರ್ಥಿಕ ವೃದ್ಧಿ ಸಾಧಿಸಿದರೂ, ಆ ರೀತಿಯ ಸಂಪತ್ತು ಶೇಖರಣೆ ಆದರೆ ಯಾರಿಗೆ ಪ್ರಯೋಜನ?’ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದ್ದರೂ ವಿಪಕ್ಷಗಳಿಗೆ ಯಾಕೆ ಚುನಾವಣೆ ಗೆಲ್ಲಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ, ಚುನಾವಣೆ ಎದುರಿಸಲು ಇರುವ ವಾಸ್ತವ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಮೋದಿ, ಶಾ, ಜೇಬುಗಳ್ಳರು ಹೇಳಿಕೆ: ರಾಹುಲ್ ವಿರುದ್ಧ ಕ್ರಮಕ್ಕೆ ಚುನಾವಣಾ ಆಯೋಗಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ
‘ಚುನಾವಣೆ ಎದುರಿಸಲು ಇನ್ಫ್ರಾಸ್ಟ್ರಕ್ಚರ್ ಬೇಕು. ಮಾಧ್ಯಮ, ನ್ಯಾಯಾಂಗ ಮತ್ತು ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿರಬೇಕು. ಹಣಕಾಸು ಸೌಲಭ್ಯ ಕೈಗೆಟುವಂತಿರಬೇಕು. ಅಮೆರಿಕದಲ್ಲಿ ಐಆರ್ಎಸ್ ಆಗಲೀ ಎಫ್ಬಿಐ ಆಗಲೀ ವಿಪಕ್ಷಗಳನ್ನು ನಾಶ ಮಾಡಲು ಪೂರ್ಣಾವಧಿ ಬಳಕೆ ಆಗುತ್ತಿದ್ದರೆ ಪರಿಸ್ಥಿತಿ ಹೇಗಿದ್ದೀತು ಊಹಿಸಿ. ಅಂಥ ಸ್ಥಿತಿಯಲ್ಲಿ ಭಾರತದಲ್ಲಿ ನಾವಿದ್ದೇವೆ. ನಾನು 4,000 ಕಿಮೀ ದೂರ ನಡಿಗೆ ಮಾಡಿದ್ದು, ನನಗೆ ಇಷ್ಟ ಅಂತ ಅಲ್ಲ. ನಮ್ಮ ಸಂದೇಶವು ಜನರನ್ನು ತಲುಪಲು ಬೇರೆ ಸಮರ್ಪಕ ಮಾರ್ಗ ಇರಲಿಲ್ಲ’ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ