
ಮುಂಬೈ, ಫೆಬ್ರುವರಿ 7: ವಿಶ್ವದ ಅತ್ಯಂತ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರೆನಿಸಿದ್ದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದರೂ, ಅವರು ಬರೆದಿಟ್ಟ ಉಯಿಲು ಈಗಲೂ ಸದ್ದು ಮಾಡುತ್ತಿದೆ. ಈ ‘ವಿಲ್’ನಲ್ಲಿ ಹಲವು ಅಚ್ಚರಿಗಳೇ ಅಡಕವಾಗಿರುವುದು ವಿಶೇಷ. ತಮ್ಮ ಕುಟುಂಬ ಸದಸ್ಯರಿಗೆ ಮಾತ್ರವಲ್ಲ, ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ, ಪ್ರೀತಿಸಿದ ವ್ಯಕ್ತಿ, ಹಾಗೂ ತಮ್ಮ ಪ್ರೀತಿಯ ನಾಯಿಗೂ ಅವರು ಏನಾದರೂ ಕೊಟ್ಟೇ ಹೋಗಿದ್ದಾರೆ. ಮೋಹಿನಿ ಮೋಹನ್ ದತ್ತಾ ಎಂಬ ವ್ಯಕ್ತಿಗೆ 500 ಕೋಟಿ ರೂ ಮೌಲ್ಯದ ಆಸ್ತಿ ನೀಡಲು ರತನ್ ಟಾಟಾ ಉಯಿಲಿನಲ್ಲಿ ಬರೆದಿಟ್ಟಿದ್ದಾರಂತೆ. ಟಾಟಾ ಕುಟುಂಬ ಸದಸ್ಯರು ಮತ್ತು ನಿಕಟವರ್ತಿಗಳಿಗೆಯೇ ಇದು ಅಚ್ಚರಿ ತಂದಿದೆ ಎಂದು ಹೇಳಲಾಗುತ್ತಿದೆ.
ಮೋಹಿನಿ ಮೋಹನ್ ದತ್ತಾ ಹೆಚ್ಚು ಮಂದಿಗೆ ಪರಿಚಿತವಾದ ಹೆಸರಲ್ಲ. ಹೆಸರು ಕೇಳಲು ಮಹಿಳೆಯರದ್ದೆನಿಸಬಹುದು. ಆದರೆ, ಇವರು ಪುರುಷರು. ಇವರು ಮತ್ತು ರತನ್ ಟಾಟಾ ಅವರ ಸ್ನೇಹ 64 ವರ್ಷದಷ್ಟು ಹಳೆಯದು. ದತ್ತ ಅವರ ವೃತ್ತಿ ಮತ್ತು ಬಿಸಿನೆಸ್ ಏಳ್ಗೆಯಲ್ಲಿ ರತನ್ ಟಾಟಾ ಪಾತ್ರ ಪ್ರಮುಖವಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: ರಿಪೋದರ ಶೇ. 6.25ಕ್ಕೆ ಇಳಿಸಿದ ಆರ್ಬಿಐ; ಕಡಿಮೆ ಆಗಲಿವೆ ಬ್ಯಾಂಕ್ ಸಾಲಗಳ ಬಡ್ಡಿ
ಮೋಹಿನಿ ಮೋಹನ್ ದತ್ತ ಅವರು ಸ್ಟಾಲಿಯನ್ ಎನ್ನುವ ಟ್ರಾವಲ್ ಏಜೆನ್ಸಿ ಇಟ್ಟುಕೊಂಡಿದ್ದವರು. ಟಾಟಾ ಗ್ರೂಪ್ ಒಡೆತನದ ತಾಜ್ ಗ್ರೂಪ್ ಆಫ್ ಹೋಟೆಲ್ಸ್ನ ಭಾಗವಾದ ತಾಜ್ ಸರ್ವಿಸಸ್ ಕಂಪನಿ ಜೊತೆ ಸ್ಟಾಲಿಯನ್ 2013ರಲ್ಲಿ ವಿಲೀನಗೊಂಡಿತು. ಮೋಹಿನಿ ಮೋಹನ್ ದತ್ತ ಹಾಗೂ ಅವರ ಕುಟುಂಬ ಈ ಸ್ಟಾಲಿಯನ್ನಲ್ಲಿ ಶೇ.. 80ರಷ್ಟು ಮಾಲಕತ್ವ ಹೊಂದಿತ್ತು ಎನ್ನಲಾಗಿದೆ. ದತ್ತ ಅವರು ಥಾಮಸ್ ಕುಕ್ ಸಂಸ್ಥೆಯೊಂದಿಗೆ ಈ ಹಿಂದೆ ಜೋಡಿತವಾಗಿದ್ದ ಟಿಸಿ ಟ್ರಾವಲ್ ಸರ್ವಿಸಸ್ ಎನ್ನುವ ಕಂಪನಿಯ ನಿರ್ದೇಶಕರೂ ಆಗಿದ್ದರು.
ಮೋಹಿನಿ ಮೋಹನ್ ದತ್ತ ಅವರಿಗೆ ಇಬ್ಬರು ಹೆಣ್ಮಕ್ಕಳಿದ್ದಾರೆ. ಒಬ್ಬ ಮಗಳು 2015ರಿಂದ ಒಂಬತ್ತು ವರ್ಷಗಳ ಕಾಲ ಟಾಟಾ ಟ್ರಸ್ಟ್ಸ್ನಲ್ಲಿ ಕೆಲಸ ಮಾಡಿದ್ದರು. ಈಕೆ ತಾಜ್ ಹೋಟೆಲ್ಸ್ನಲ್ಲೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಎಂಪಿಸಿ ಸಭೆ ಬಳಿಕ ಆರ್ಬಿಐನ ಎಸ್ಡಿಎಫ್, ರಿಪೋ, ಎಸ್ಎಲ್ಆರ್ ಇತ್ಯಾದಿ ಎಷ್ಟಿವೆ? ಇಲ್ಲಿದೆ ಇತ್ತೀಚಿನ ದರಗಳ ವಿವರ
2024ರ ಅಕ್ಟೋಬರ್ 9ರಂದು ಮುಂಬೈನ ಆಸ್ಪತ್ರೆಯಲ್ಲಿ ಮೃತಪಟ್ಟ ರತನ್ ಟಾಟಾ ಲಕ್ಷಾಂತರ ಕೋಟಿ ರೂ ಮೌಲ್ಯದ ಉದ್ಯಮದ ಚುಕ್ಕಾಣಿ ಹೊಂದಿದ್ದರು. ಇದರಲ್ಲಿ ವೈಯಕ್ತಿಕವಾಗಿ 8,000 ಕೋಟಿ ರೂ ನಿವ್ವಳ ಮೌಲ್ಯದ ಸಂಪತ್ತನ್ನು ಹೊಂದಿದ್ದರು. ಹೆಚ್ಚಿನ ಸಂಪತ್ತನ್ನು ತಮ್ಮವೇ ಚಾರಿಟಿ ಸಂಸ್ಥೆಗಳಿಗೆ ಧಾರೆ ಎರೆದುಕೊಟ್ಟಿದ್ದಾರೆ. ಟಾಟಾ ಉದ್ಯಮ ವ್ಯವಹಾರದಲ್ಲಿ ಚಾಣಾಕ್ಷತರಾಗಿದ್ದುದು ಮಾತ್ರವಲ್ಲ, ಮಾನವೀಯತೆಯ ಪ್ರತಿಮೂರ್ತಿಯೂ ಎನಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ