ಎಂಪಿಸಿ ಸಭೆ ಬಳಿಕ ಆರ್ಬಿಐನ ಎಸ್ಡಿಎಫ್, ರಿಪೋ, ಎಸ್ಎಲ್ಆರ್ ಇತ್ಯಾದಿ ಎಷ್ಟಿವೆ? ಇಲ್ಲಿದೆ ಇತ್ತೀಚಿನ ದರಗಳ ವಿವರ
RBI policy stance and latest rates and meaning of terminologies: ಆರ್ಬಿಐ ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ರಿಪೋ ದರವನ್ನು ಕಡಿತಗೊಳಿಸಿದೆ. ಶೇ. 6.50ರಷ್ಟು ಇದ್ದದ್ದನ್ನು ಶೇ. 6.25ಕ್ಕೆ ಇಳಿಸಲಾಗಿದೆ. ಎಸ್ಡಿಎಫ್, ಎಂಎಸ್ಎಫ್, ಬ್ಯಾಂಕ್ ರೇಟ್ ಇತ್ಯಾದಿಯನ್ನು ಯಥಾಸ್ಥಿತಿಯಲ್ಲಿ ಉಳಿಸಲಾಗಿದೆ. ಆರ್ಬಿಐನ ವಿವಿಧ ದರಗಳು ಎಷ್ಟಿವೆ, ಅವುಗಳ ಅರ್ಥವೇನು ಎಲ್ಲಾ ವಿವರ ಇಲ್ಲಿದೆ...

ನವದೆಹಲಿ, ಫೆಬ್ರುವರಿ 7: ಆರ್ಬಿಐ ಮಾನಿಟರಿ ಪಾಲಿಸಿ ಸಮಿತಿಯ ಸಭೆ ಮುಗಿದಿದ್ದು, ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾ ಹೇಳಿಕೆಯಲ್ಲಿ ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ. ರಿಪೋ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಇಳಿಕೆ ಮಾಡಿದ್ದಾರೆ. ಶೇ. 6.50ರಷ್ಟಿದ್ದ ರಿಪೋ ದರ ಶೇ. 6.25ಕ್ಕೆಇಳಿದಿದೆ. ಪಾಲಿಸಿ ನಿಲುವನ್ನು ನ್ಯೂಟ್ರಲ್ನಲ್ಲೇ ಮುಂದುವರಿಸುವ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ. ಎಂಎಸ್ಎಫ್, ಎಸ್ಡಿಎಫ್, ರಿವರ್ಸ್ ರಿಪೋ, ಸಿಆರ್ಆರ್, ಎಂಎಲ್ಆರ್ ಇತ್ಯಾದಿ ಹಲವು ದರಗಳು ಯಥಾಸ್ಥಿತಿಯಲ್ಲೇ ಮುಂದುವರಿಯಲಿವೆ.
ಆರ್ಬಿಐ ದರಗಳು (ಫೆ. 7ಕ್ಕೆ)
- ರಿಪೋ ದರ: ಶೇ. 6.25 (25 ಮೂಲಾಂಕಗಳಷ್ಟು ಇಳಿಕೆ)
- ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (ಎಸ್ಡಿಎಫ್) ದರ: ಶೇ. 6
- ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ಎಫ್) ದರ: ಶೇ. 6.50
- ಬ್ಯಾಂಕ್ ದರ: ಶೇ. 6.50
- ರಿವರ್ಸ್ ರಿಪೋ ದರ: ಶೇ. 3.35
- ಕ್ಯಾಷ್ ರಿಸರ್ವ್ ರೇಶಿಯೋ (ಸಿಆರ್ಆರ್): ಶೇ. 4
- ಎಸ್ಎಲ್ಆರ್: ಶೇ. 18
- ಮೂಲ ದರ: ಶೇ. 9.10ರಿಂದ ಶೇ. 10.40
- ಎಂಸಿಎಲ್ಆರ್: ಶೇ. 8.15ರಿಂದ ಶೇ. 8.45
- ಸೇವಿಂಗ್ಸ್ ಡೆಪಾಸಿಟ್ ರೇಟ್: ಶೇ. 6
- ಟರ್ಮ್ ಡೆಪಾಸಿಟ್ ರೇಟ್: ಶೇ. 6ರಿಂದ 7.125
ಇದನ್ನೂ ಓದಿ: RBI MPC Updates: ರಿಪೋದರ ಶೇ. 6.25ಕ್ಕೆ ಇಳಿಸಿದ ಆರ್ಬಿಐ; ಕಡಿಮೆ ಆಗಲಿವೆ ಬ್ಯಾಂಕ್ ಸಾಲಗಳ ಬಡ್ಡಿ
ಬ್ಯಾಂಕ್ ರೇಟ್ ಮತ್ತು ರಿಪೋ ರೇಟ್ ನಡುವೆ ಏನು ವ್ಯತ್ಯಾಸ
ಇಲ್ಲಿ ಆರ್ಬಿಐನ ಬ್ಯಾಂಕ್ ದರ ಮತ್ತು ರಿಪೋ ದರ ಎಂದು ಎರಡು ಪ್ರತ್ಯೇಕ ಇದೆ. ಎರಡೂ ಕೂಡ ವಾಣಿಜ್ಯ ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ವಿಧಿಸಲಾಗುವ ಬಡ್ಡಿದರಗಳೇ ಆಗಿವೆ. ಆದರೆ, ಈ ಎರಡು ರೇಟ್ಗಳ ಮಧ್ಯೆ ಸಣ್ಣ ವ್ಯತ್ಯಾಸ ಇದೆ. ಬ್ಯಾಂಕ್ ರೇಟ್ ಎನ್ನುವುದು ಅಡಮಾನ ರಹಿತವಾಗಿ ನೀಡಿದ ಸಾಲಕ್ಕೆ ವಿಧಿಸುವ ಬಡ್ಡಿ. ಅದೇ ರಿಪೋ ದರ ಎಂದರೆ ಸೆಕ್ಯೂರಿಟಿಗಳನ್ನು ಖರೀದಿಸಿ ಪಡೆಯುವ ಸಾಲಕ್ಕೆ ವಿಧಿಸುವ ಬಡ್ಡಿಯಾಗಿದೆ.
ಬೇಸ್ ರೇಟ್, ಎಂಸಿಎಲ್ಆರ್, ಸೇವಿಂಗ್ಸ್ ಡೆಪಾಸಿಟ್, ಟರ್ಮ್ ಡೆಪಾಸಿಟ್ ಇತ್ಯಾದಿ ದರಗಳು ಆರ್ಬಿಐನ ಬೆಂಚ್ಮಾರ್ಕ್ ರೇಟ್ಗಳಾಗಿವೆ. ಅಂದರೆ ಬ್ಯಾಂಕುಗಳಿಗೆ ಸೂಕ್ತವಾದ ಡೆಪಾಸಿಟ್ ಮತ್ತು ಸಾಲಗಳಿಗೆ ಕನಿಷ್ಠ ಬಡ್ಡಿದರವನ್ನು ಆರ್ಬಿಐ ಶಿಫಾರಸು ಮಾಡುವ ದರಗಳು ಇವು. ಬ್ಯಾಂಕುಗಳು ಈ ಶಿಫಾರಸನ್ನು ಪರಿಗಣಿಸಬೇಕು ಎನ್ನುವ ಕಟ್ಟುಪಾಡು ಇರುವುದಿಲ್ಲ.
ಪಾಲಿಸಿ ನೀತಿ ನ್ಯೂಟ್ರಲ್ ಎಂದಿದ್ದರೆ ಏನು?
ಆರ್ಬಿಐ ಮೂರು ವಿಧದ ನಿಲುವುಗಳನ್ನು ಹೊಂದಿರಬಹುದು. ಮೊದಲನೆಯದು ಅಕಾಮೊಡೇಟಿವ್, ಎರಡನೆಯದು ನ್ಯೂಟ್ರಲ್. ಮತ್ತು ಮೂರನೆಯದು ಹಾಕಿಶ್ (Hawkish) ನಿಲುವು.
ಇದನ್ನೂ ಓದಿ: ಮುಂದಿನ ವರ್ಷ ಜಿಡಿಪಿ ದರ ಶೇ. 6.7; ಹಣದುಬ್ಬರ ಶೇ. 4.2; ಆರ್ಬಿಐ ಅಂದಾಜು
ಅಕಾಮೊಡೇಟಿವ್ ನಿಲುವಿನಲ್ಲಿ ಆರ್ಬಿಐ ತನ್ನ ಪಾಲಿಸಿ ದರಗಳನ್ನು ಇಳಿಸಲು ಆದ್ಯತೆ ಕೊಡುತ್ತದೆ. ಈ ನೀತಿ ಇದ್ದಾಗ, ರಿಪೋ ದರ ಇತ್ಯಾದಿಯ ಇಳಿಕೆ ಸಾಧ್ಯತೆ ಹೆಚ್ಚಿರುತ್ತದೆ.
ನ್ಯೂಟ್ರಲ್ ಸ್ಟ್ಯಾನ್ಸ್ ಅಥವಾ ಮಧ್ಯಮ ಮಾರ್ಗದ ನಿಲುವಿನಲ್ಲಿ ಆರ್ಬಿಐ ಸಂದರ್ಭಕ್ಕೆ ಅನುಗುಣವಾಗಿ ಪಾಲಿಸಿ ರೇಟ್ಗಳನ್ನು ನಿರ್ಧರಿಸುತ್ತದೆ. ಹಣದುಬ್ಬರ, ಜಿಡಿಪಿ, ಜಾಗತಿಕ ಆರ್ಥಿಕತೆಯ ಗತಿ ಇತ್ಯಾದಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಅದಕ್ಕೆ ತಕ್ಕದಾಗಿ ಪಾಲಿಸಿ ರೇಟ್ಗಳನ್ನು ಬದಲಿಸುತ್ತದೆ.
ಮೂರನೆಯ ನಿಲುವು ತುಸು ನಿರ್ದಾಕ್ಷಿಣ್ಯವಾಗಿರಬಹುದು. ರಿಪೋ ದರ ಇತ್ಯಾದಿ ಪಾಲಿಸಿ ರೇಟ್ಗಳನ್ನು ಇಳಿಸುವ ಸಾಧ್ಯತೆ ಇರುವುದಿಲ್ಲ.
ರಿವರ್ಸ್ ರಿಪೋ, ಎಸ್ಡಿಎಫ್, ಎಂಎಸ್ಎಫ್ ನಡುವೆ ವ್ಯತ್ಯಾಸವೇನು?
ರಿವರ್ಸ್ ರಿಪೋ ಎಂದರೆ ಕಮರ್ಷಿಯಲ್ ಬ್ಯಾಂಕುಗಳು ಆರ್ಬಿಐನಲ್ಲಿ ಇರಿಸುವ ಹಣಕ್ಕೆ ಸಿಗುವ ಬಡ್ಡಿ. ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ ಅಥವಾ ಎಸ್ಡಿಎಫ್ನಲ್ಲೂ ಕಮರ್ಷಿಯಲ್ ಬ್ಯಾಂಕುಗಳು ಆರ್ಬಿಐನಲ್ಲಿ ಇರಿಸುವ ಠೇವಣಿಗೆ ಸಿಗುವ ಬಡ್ಡಿಯಾಗಿದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿಯೂ ಕೂಡ ಇದೇ ತೆರನಾದುದು. ಆದರೆ, ರಿವರ್ಸ್ ರಿಪೋ ಶೇ. 3.35, ಎಸ್ಡಿಎಫ್ ಶೇ. 6, ಮತ್ತು ಎಂಎಸ್ಎಫ್ ಶೇ. 6.50 ಇದೆ. ಆದರೆ, ಈ ಮೂರರಲ್ಲಿ ಒಂದು ಸೂಕ್ಷ್ಮ ವ್ಯತ್ಯಾಸ ಇದೆ.
ಇದನ್ನೂ ಓದಿ: ಎನ್ಬಿಎಫ್ಸಿಗಳು ಸಾಲಕ್ಕೆ ಗರಿಷ್ಠ ಬಡ್ಡಿ ಎಷ್ಟೆಂದು ನಿರ್ದಿಷ್ಟಪಡಿಸಬೇಕು: ಆರ್ಬಿಐ ನಿರ್ದೇಶನ
ರಿವರ್ಸ್ ರಿಪೋದಲ್ಲಿ ವಾಣಿಜ್ಯ ಬ್ಯಾಂಕುಗಳು ತಾವಾಗಿಯೇ ಹೆಚ್ಚುವರಿ ಹಣವನ್ನು ಆರ್ಬಿಐನಲ್ಲಿ ಇರಿಸಿದರೆ ಸಿಗುವ ಬಡ್ಡಿದರ. ಆದರೆ, ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿಯಲ್ಲಿ ಆರ್ಬಿಐ ಬ್ಯಾಂಕುಗಳಿಗೆ ನೀಡುವ ಆಫರ್ ಆಗಿರುತ್ತದೆ. ಎಂಎಸ್ಎಫ್ ಕೂಡ ಆರ್ಬಿಐ ನೀಡುವ ಡೆಪಾಸಿಟ್ ಆಫರ್. ಹೀಗಾಗಿ, ಇವುಗಳಿಗೆ ಹೆಚ್ಚಿನ ದರ ನೀಡಲಾಗುತ್ತದೆ.
ಹಣಕಾಸು ಮಾರುಕಟ್ಟೆಯಲ್ಲಿ ಹಣದ ಹರಿವು ಅಗತ್ಯಕ್ಕಿಂತ ಹೆಚ್ಚಿದೆ ಎಂದನಿಸಿದಲ್ಲಿ ಆರ್ಬಿಐ ಎಸ್ಡಿಎಫ್ ಮತ್ತು ಎಂಎಸ್ಎಫ್ ಸೌಲಭ್ಯವನ್ನು ಬಳಸಿಕೊಂಡು ಕಮರ್ಷಿಯಲ್ ಬ್ಯಾಂಕುಗಳಲ್ಲಿ ಹೆಚ್ಚುವರಿಯಾಗಿರುವ ಹಣವನ್ನು ಸೆಳೆಯಲು ಯತ್ನಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




