ರೇಟ್ಗೇಯ್ನ್ ಟ್ರಾವೆಲ್ ಟೆಕ್ನಾಲಜೀಸ್ ಸ್ಟಾಕ್ ಡಿಸೆಂಬರ್ 17ನೇ ತಾರೀಕಿನ ಶುಕ್ರವಾರದಂದು ಷೇರು ಮಾರುಕಟ್ಟೆಯಲ್ಲಿ ಶ 15ರಷ್ಟು ರಿಯಾಯಿತಿಯೊಂದಿಗೆ ಲಿಸ್ಟಿಂಗ್ ಆಗಿದೆ. ಪ್ರತಿ ಷೇರಿಗೆ 425 ರೂಪಾಯಿಯಂತೆ ವಿತರಿಸಲಾಗಿತ್ತು. ಬಿಎಸ್ಇಯಲ್ಲಿ ರೂ. 364.80ಕ್ಕೆ ಮತ್ತು ಎನ್ಎಸ್ಇಯಲ್ಲಿ ರೂ. 360ಕ್ಕೆ ಲಿಸ್ಟಿಂಗ್ ಆಯಿತು. ಈ ಕಂಪೆನಿಯ ಐಪಿಒಗೆ ಹೂಡಿಕೆದಾರರು ಉತ್ತಮ ಸ್ಪಂದನೆ ತೋರಿದ್ದರು. ಡಿಸೆಂಬರ್ 7ರಿಂದ 9ನೇ ತಾರೀಕಿನ ಮಧ್ಯೆ, ವಿತರಣೆ ಮಾಡಬೇಕು ಎಂದು ಮೀಸಲಿರಿಸಿದ್ದಕ್ಕಿಂತ 17.41 ಪಟ್ಟು ಹೆಚ್ಚು ಬೇಡಿಕೆ ಪಡೆದಿತ್ತು. ಹಾಸ್ಪಿಟಾಲಿಟಿ ಹಾಗೂ ಟ್ರಾವೆಲ್ ವಲಯದ ಅತಿ ದೊಡ್ಡ ಸಾಫ್ಟ್ವೇರ್ ಆ್ಯಸ್ ಎ ಸರ್ವೀಸ್ (SaaS) ಕಂಪೆನಿ ರೇಟ್ಗೇಯ್ನ್ ಸಾರ್ವಜನಿಕ ವಿತರಣೆ ಮೂಲಕ 1,335.74 ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು. ಇದರಲ್ಲಿ ಹೊಸದಾಗಿ ಮಾಡಿದ ವಿತರಣೆ ರೂ. 375 ಕೋಟಿ ಮತ್ತು ಹೂಡಿಕೆದಾರರು ಹಾಗೂ ಪ್ರಮೋಟರ್ಗಳಿಂದ ಆಫರ್ ಫಾರ್ ಸೇಲ್ 960.74 ಕೋಟಿ ರೂಪಾಯಿ ಇತ್ತು.
ಐಪಿಒ ಮೂಲಕ ಸಂಗ್ರಹವಾದ ಮೊತ್ತದಿಂದ ಸಾಲವನ್ನು ಹಿಂತಿರುಗಿಸುವುದಕ್ಕೆ ಬಳಸಲಾಗುತ್ತದೆ. ಇನ್ನು DHISCO ಸ್ವಾಧೀನ ಮಾಡಿಕೊಳ್ಳುವುದಕ್ಕೆ ಮುಂದಕ್ಕೆ ಹಾಕಿದ್ದ ಹಣದ ಪಾವತಿಗಾಗಿಯೂ ಬಳಸಿಕೊಳ್ಳಲಾಗುತ್ತದೆ. ಇನ್ನು ಹೊಸದಾಗಿ ಷೇರು ವಿತರಣೆಯಿಂದ ಸಂಗ್ರಹವಾದ ಮೊತ್ತವನ್ನು ಕಾರ್ಯತಂತ್ರ ಹೂಡಿಕೆ, ತಾಂತ್ರಿಕ ಆವಿಷ್ಕಾರದಲ್ಲಿನ ಹೂಡಿಕೆ, ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ಇತರ ಉದ್ದೇಶಗಳಿಗಾಗಿ ಹಾಗೂ ಡೇಟಾ ಸೆಂಟರ್ನಲ್ಲಿ ಕೆಲವು ಬಂಡವಾಳ ಸಲಕರಣೆಗಳ ಖರೀದಿಗಾಗಿ ಉಪಯೋಗಿಸಲಾಗುತ್ತದೆ.
ಬಹುತೇಕ ಬ್ರೋಕರೇಜ್ಗಳು ಇದರ “ಸಬ್ಸ್ಕ್ರೈಬ್”ಗೆ ಶಿಫಾರಸು ಮಾಡುವ ರೇಟಿಂಗ್ ನೀಡಿದ್ದವು. 2021ರ ಹಣಕಾಸು ವರ್ಷದಲ್ಲಿ ರೇಟ್ಗೇಯ್ನ್ ನಷ್ಟವು 28.57 ಕೋಟಿ ರೂಪಾಯಿಗೆ ಹಿಗ್ಗಿತ್ತು. ಅದಕ್ಕೂ ಒಂದು ವರ್ಷದ ಹಿಂದೆ ಕೊವಿಡ್ ಬಿಕ್ಕಟ್ಟಿನಿಂದಾಗಿ 20.1 ಕೋಟಿ ರೂಪಾಯಿ ನಷ್ಟವಾಗಿತ್ತು. ಕಾರ್ಯ ಚಟುವಟಿಕೆಯಿಂದ ಬರುವ ಆದಾಯವು 398.7 ಕೋಟಿ ರೂಪಾಯಿಯಿಂದ 250.79 ಕೋಟಿ ರೂಪಾಯಿಗೆ ಇಳಿದಿದೆ.