ATM charges: ಎಟಿಎಂ ನಗದು ವಿಥ್​ ಡ್ರಾ ದರ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಶುಲ್ಕವು ಸದ್ಯದಲ್ಲೇ ಏರಿಕೆ

| Updated By: Srinivas Mata

Updated on: Jun 12, 2021 | 1:15 PM

ಎಟಿಎಂ ನಗದು ವಿಥ್ ಡ್ರಾ ಮೇಲೆ ವಿಧಿಸುವ ದರ ಹಾಗೂ ಶುಲ್ಕವನ್ನು ಏರಿಕೆ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ನೀಡಿದೆ.

ATM charges: ಎಟಿಎಂ ನಗದು ವಿಥ್​ ಡ್ರಾ ದರ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಶುಲ್ಕವು ಸದ್ಯದಲ್ಲೇ ಏರಿಕೆ
ಸಾಂದರ್ಭಿಕ ಚಿತ್ರ
Follow us on

ಎಟಿಎಂ (ಆಟೋಮೆಟೆಡ್ ಟೆಲ್ಲರ್ ಮಶೀನ್​)ಗಳ ಶುಲ್ಕವನ್ನು ಒಂದು ವಹಿವಾಟಿಗೆ ರೂ. 21ಕ್ಕೆ ಹೆಚ್ಚಳ ಮಾಡುವುದಕ್ಕೆ ಬ್ಯಾಂಕ್​ಗಳಿಗೆ ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾವು ಅವಕಾಶ ನೀಡಿದೆ. ಎಟಿಎಂನಲ್ಲಿ ಉಚಿತ ವಹಿವಾಟುಗಳು ಮುಗಿದ ಮೇಲೆ ಆ ನಂತರ ಇಷ್ಟು ಮೊತ್ತದ ತನಕ ದರ ವಿಧಿಸಬಹುದು. ಈ ಪರಿಷ್ಕೃತ ದರವು ಜನವರಿ 1, 2022ರಿಂದ ಜಾರಿಗೆ ಬರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್​ನ ಎಟಿಎಂಗಳಿಂದ ಪ್ರತಿ ತಿಂಗಳು 5 ಉಚಿತ ವಹಿವಾಟನ್ನು ಮಾಡಬಹುದು. ಇದರಲ್ಲಿ ಹಣಕಾಸು ಮತ್ತು ಹಣಕಾಸೇತರ ವ್ಯವಹಾರ ಎರಡೂ ಒಳಗೊಂಡಿರುತ್ತದೆ. ಅದರ ಆಚೆಗೆ ಪ್ರತಿ ಎಟಿಎಂ ವಹಿವಾಟಿಗೆ ಹೆಚ್ಚುವರಿಯಾಗಿ ರೂ. 20 ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್​ ಎಟಿಎಂಗಳನ್ನು ಬಳಸುವಂಥ ಗ್ರಾಹಕರಿಗೆ ಮೆಟ್ರೋ ನಗರಗಳಲ್ಲಿ 3 ವಹಿವಾಟು ಮತ್ತು ಮೆಟ್ರೋಯೇತರ ಕೇಂದ್ರಗಳಲ್ಲಿ 5 ವಹಿವಾಟಿಗೆ ಅವಕಾಶ ಇದೆ.

ಏಳು ವರ್ಷಗಳ ನಂತರ ಎಟಿಎಂ ವಹಿವಾಟು ಶುಲ್ಕಗಳನ್ನು ರಿಸರ್ವ್ ಬ್ಯಾಂಕ್ ಇಂಡಿಯಾ ಏರಿಕೆ ಮಾಡಿದೆ. 2012ನೇ ಇಸವಿಯ ಆಗಸ್ಟ್​ನಲ್ಲಿ ಕೊನೆಯ ಬಾರಿಗೆ ಎಟಿಎಂ ವಹಿವಾಟಿನ ಮೇಲೆ ಇಂಟರ್​ಚೇಂಜ್ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿತ್ತು. ಗ್ರಾಹಕರು ಪಾವತಿಸುವ ಶುಲ್ಕವು 2014ರ ಆಗಸ್ಟ್​ನಲ್ಲಿ ಕೊನೆಯದಾಗಿ ಪರಿಷ್ಕೃತವಾಗಿತ್ತು. ಈ ದರ ಪರಿಷ್ಕರಣೆ ಆಗಿ ಹತ್ತಿರಹತ್ತಿರ ಏಳು ವರ್ಷಗಳು ಪೂರ್ತಿ ಆಗಿದೆ ಎಂದು ಆರ್​ಬಿಐ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಬ್ಯಾಂಕ್​ಗಳ ಎಟಿಎಂ ನಿಯೋಜನೆ ಮತ್ತು ನಿರ್ವಹಣೆ ಶುಲ್ಕಗಳು ಅಥವಾ ವೈಟ್​ಲೇಬಲ್ ಎಟಿಎಂ ಆಪರೇಟರ್ಸ್ ವೆಚ್ಚಗಳು ಹೆಚ್ಚುತ್ತಲೇ ಇದೆ. ಆ ಹಿನ್ನೆಲೆಯಲ್ಲಿ ಎಟಿಎಂ ವಹಿವಾಟು ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿದೆ.

ಎಟಿಎಂ ಶುಲ್ಕ ಮತ್ತು ದರದ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಆರ್​ಬಿಐನಿಂದ 2019ರಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಅದರಲ್ಲೂ ಎಟಿಎಂ ವಹಿವಾಟುಗಳ ಇಂಟರ್​ಚೇಂಜ್ ಸ್ಟ್ರಕ್ಚರ್ ಮೇಲೆ ಗಮನ ಹರಿಸಿತ್ತು. ಆರ್​ಬಿಐನಿಂದ ಇಂಟರ್​ಚೇಂಜ್ ಶುಲ್ಕವು (ಹಣಕಾಸು ವಹಿವಾಟಿಗೆ) ರೂ. 15ರಿಂದ 17ಕ್ಕೆ ಮತ್ತು ಹಣಕಾಸೇತರ ಶುಲ್ಕವು ರೂ. 5ರಿಂದ 6 ರೂಪಾಯಿಗೆ ಆಗಸ್ಟ್ 1, 2021ರಿಂದ ಅನ್ವಯಿಸುತ್ತದೆ. ಇಂಟರ್​ಚೇಂಜ್ ಶುಲ್ಕ ಅಂದರೆ, ಬ್ಯಾಂಕ್​ಗಳು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಾವತಿ ಮೇಲೆ ವರ್ತಕರಿಗೆ ಹಾಕುವ ಶುಲ್ಕ. ಹೆಚ್ಚುವರಿಯಾಗಿ ಅನ್ವಯ ಆಗುವ ತೆರಿಗೆ ಏನಾದರೂ ಇದ್ದಲ್ಲಿ ಅದನ್ನೂ ಹೆಚ್ಚುವರಿಯಾಗಿ ಪಾವತಿಸಲಾಗುತ್ತದೆ ಎಂದು ಆರ್​ಬಿಐ ಹೇಳಿದೆ.

ಇದನ್ನೂ ಓದಿ: SBI Cash Withdrawal Rules ಎಸ್​ಬಿಐ ಎಟಿಎಂನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆ !

ಇದನ್ನೂ ಓದಿ: RBI new rules: ಆನ್​ಲೈನ್ ವಹಿವಾಟಿಗೆ ಆರ್​ಬಿಐ ಹೊಸ ನಿಯಮ; ಇಲ್ಲಿದೆ ನೀವು ತಿಳಿಯಬೇಕಾದ ಸಂಗತಿಗಳು

(Reserve Bank Of India allowed banks to increase ATM and other charges from January 1, 2022)