
ನವದೆಹಲಿ, ಡಿಸೆಂಬರ್ 5: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರಿಪೋ ದರವನ್ನು ಶೇ. 5.25ಕ್ಕೆ ಇಳಿಸುವುದರ ಜೊತೆಗೆ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಒಂದು ಲಕ್ಷ ಕೋಟಿ ರೂ ಮೌಲ್ಯದ ಓಪನ್ ಮಾರ್ಕೆಟ್ ಆಪರೇಷನ್ ಖರೀದಿಗಳನ್ನು (Open Market Operations Purchase) ಮಾಡಲು ನಿರ್ಧರಿಸಲಾಗಿದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನು ಪ್ರಕಟಿಸುತ್ತಾ ಈ ವಿಷಯ ತಿಳಿಸಿದ್ದಾರೆ.
ದೇಶದಲ್ಲಿ ಹಣದ ಹರಿವನ್ನು ಹೆಚ್ಚಿಸಲು ಆರ್ಬಿಐಗೆ ಇರುವ ಪ್ರಮುಖ ದಾರಿಗಳಲ್ಲಿ ಓಪನ್ ಮಾರ್ಕೆಟ್ ಆಪರೇಷನ್ಸ್ ಖರೀದಿ ಒಂದು. ಈ ಕಾರ್ಯಾಚರಣೆಯಲ್ಲಿ ಆರ್ಬಿಐ ದೇಶದ ಬ್ಯಾಂಕುಗಳಿಂದ ಗವರ್ನ್ಮೆಂಟ್ ಸೆಕ್ಯೂರಿಟಿಗಳನ್ನು ಖರೀದಿ ಮಾಡುತ್ತದೆ. ಹೀಗೆ ಖರೀದಿಸಿದಾಗ ಬ್ಯಾಂಕುಗಳಿಗೆ ಹಣ ಬಿಡುಗಡೆ ಮಾಡುತ್ತದೆ.
ಇದನ್ನೂ ಓದಿ: RBI MPC Meet: ಬಡ್ಡಿದರ 25 ಮೂಲಾಂಕಗಳಷ್ಟು ಇಳಿಸಿದ ಆರ್ಬಿಐ; ರಿಪೋ ದರ ಶೇ. 5.25ಕ್ಕೆ ಇಳಿಕೆ
ಈ ಕ್ರಮದಿಂದ ಬ್ಯಾಂಕುಗಳಿಗೆ ಹೆಚ್ಚಿನ ಹಣ ಹರಿದುಬರುತ್ತದೆ. ಸಾಲ ಕೊಡಲು ಬ್ಯಾಂಕುಗಳಿಗೆ ಸುಲಭವಾಗುತ್ತದೆ. ಆರ್ಥಿಕತೆಯಲ್ಲೂ ಹಣದ ಓಟ ಹೆಚ್ಚುತ್ತದೆ. ಜಿಡಿಪಿ ಬೆಳವಣಿಗೆಗೂ ಸಹಕಾರಿ ಆಗುತ್ತದೆ.
ಹಣದ ಹರಿವು ಹೆಚ್ಚಿಸಲು ಆರ್ಬಿಐ ಈ ತಿಂಗಳು 5 ಬಿಲಿಯನ್ ಡಾಲರ್ ಕರೆನ್ಸಿ ಖರೀದಿಯ ನಿರ್ಧಾರವನ್ನೂ ಮಾಡಿದೆ. ಇಲ್ಲಿಯೂ ಕೂಡ ಬ್ಯಾಂಕುಗಳಿಂದ ಆರ್ಬಿಐ ಡಾಲರ್ಗಳನ್ನು ಖರೀದಿಸುತ್ತದೆ. 5 ಬಿಲಿಯನ್ ಡಾಲರ್ ಹಣವನ್ನು ಖರೀದಿಸಿ ಅದರ ಮೌಲ್ಯದಷ್ಟು ರುಪಾಯಿ ಕರೆನ್ಸಿಯನ್ನು ಬ್ಯಾಂಕುಗಳಿಗೆ ನೀಡಲಾಗುತ್ತದೆ. ಸದ್ಯ ಮೂರು ವರ್ಷಕ್ಕೆ ಈ ಕ್ರಮ ಇರುತ್ತದೆ. ಅಂದರೆ, ಮೂರು ವರ್ಷದ ಬಳಿಕ ಬ್ಯಾಂಕುಗಳಿಗೆ ಆರ್ಬಿಐ ಡಾಲರ್ ಅನ್ನು ಮರಳಿಸುತ್ತದೆ.
ಇದನ್ನೂ ಓದಿ: ಕೇಂದ್ರೀಯ ಅಬಕಾರಿ ತಿದ್ದುಪಡಿ ಮಸೂದೆಗೆ ಸಂಸತ್ ಅಸ್ತು; ರಾಜ್ಯಗಳಿಗೂ ಲಾಭ ಹಂಚಿಕೆ ಎಂದ ನಿರ್ಮಲಾ ಸೀತಾರಾಮನ್
ಬ್ಯಾಂಕುಗಳಲ್ಲಿ ರುಪಾಯಿ ರೂಪದ ಹಣ ಹೆಚ್ಚು ಚಾಲನೆಯಲ್ಲಿ ಇರಲಿ, ಹಣದ ಹರಿವು ಸುಗಮವಾಗಿರಲಿ ಎಂಬ ಉದ್ದೇಶದಿಂದ ಆರ್ಬಿಐ ಈ ಎರಡು ಕ್ರಮ ಕೈಗೊಂಡಿದೆ. ಹಣಕಾಸು ವ್ಯವಸ್ಥೆಗೆ ಲಿಕ್ವಿಡಿಟಿ ಹೆಚ್ಚಿಸುವ ಅವಶ್ಯಕತೆ ಇದ್ದಾಗ ಆರ್ಬಿಐ ಅಷ್ಟೇ ಅಲ್ಲ ವಿಶ್ವದ ಎಲ್ಲಾ ಸೆಂಟ್ರಲ್ ಬ್ಯಾಂಕುಗಳೂ ಇಂಥ ಕೆಲ ಕ್ರಮಗಳನ್ನು ಕೈಗೊಳ್ಳುವುದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ