ಯುಪಿಐ ಲೈಟ್ ಇ-ಮ್ಯಾಂಡೇಟ್ ಪ್ರಕಟಿಸಿದ ಆರ್​ಬಿಐ; ಇನ್ಮುಂದೆ ಲೈಟ್​ಗೆ ಆಟೊ ಟಾಪಪ್ ಸಾಧ್ಯ

|

Updated on: Jun 07, 2024 | 12:22 PM

RBI Governor Shaktikanta Das press conference highlights: ಅಲ್ಪ ಮೊತ್ತದ ವಹಿವಾಟಿನಲ್ಲಿ ಪಿನ್ ಇಲ್ಲದೇ ಹಣ ಪಾವತಿಸಲು ಸಹಾಯ ಮಾಡುವ ಯುಪಿಐ ಲೈಟ್ ಫೀಚರ್​ಗೆ ಈಗ ಆರ್​ಬಿಐ ಇ-ಮ್ಯಾಂಡೇಟ್ ಸೌಲಭ್ಯವನ್ನು ಪ್ರಕಟಿಸಿದೆ. ಎಂಪಿಸಿ ಸಭೆ ಬಳಿಕ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಇ-ಮ್ಯಾಂಡೇಟ್​ನಲ್ಲಿ ಯುಪಿಐ ಬಳಕೆದಾರರು ಲೈಟ್ ಖಾತೆಗೆ ಸ್ವಯಂಚಾಲಿತವಾಗಿ ಹಣ ಸೇರಿಸುವಂತೆ ಬ್ಯಾಂಕ್​ಗೆ ನಿರ್ದೇಶನ ನೀಡಬಹುದು. ಇದರಿಂದ ಯುಪಿಐ ಲೈಟ್​ನಲ್ಲಿ ಹಣ ಸದಾ ಇರುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

ಯುಪಿಐ ಲೈಟ್ ಇ-ಮ್ಯಾಂಡೇಟ್ ಪ್ರಕಟಿಸಿದ ಆರ್​ಬಿಐ; ಇನ್ಮುಂದೆ ಲೈಟ್​ಗೆ ಆಟೊ ಟಾಪಪ್ ಸಾಧ್ಯ
ಯುಪಿಐ
Follow us on

ನವದೆಹಲಿ, ಜೂನ್ 7: ಯುಪಿಐ ಬಳಕೆದಾರರಿಗೆ ತುಸು ಖುಷಿಯ ಸುದ್ದಿ. ಯುಪಿಐ ಲೈಟ್ ಇ-ಮ್ಯಾಂಡೇಟ್ (UPI LITE e-Mandante) ಅನ್ನು ಆರ್​ಬಿಐ ಪ್ರಕಟಿಸಿದೆ. ಇದರೊಂದಿಗೆ ಯುಪಿಐ ಹಣ ಪಾವತಿ ವ್ಯವಸ್ಥೆ ಇನ್ನಷ್ಟು ಸುಗಮಗೊಳ್ಳಲಿದೆ. ಭಾರತೀಯ ರಿಸರ್ವ್ ಬ್ಯಾಂಕ್​ನ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರು ಬುಧವಾರದಿಂದ ನಡೆದ ಎಂಪಿಸಿ ಸಭೆಯ ಬಳಿಕ ಇಂದು ಶುಕ್ರವಾರ ಯುಪಿಐ ಲೈಟ್ ಇ-ಮ್ಯಾಂಡೇಟ್ ಅನ್ನು ಪ್ರಕಟಿಸಿದ್ದಾರೆ.

ಏನಿದು ಯುಪಿಐ ಲೈಟ್?

ಯುಪಿಐ ಪಾವತಿ ಆ್ಯಪ್​ಗಳಲ್ಲಿ 2022ರ ಸೆಪ್ಟಂಬರ್​ನಲ್ಲಿ ಲೈಟ್ ಫೀಚರ್ ಅನ್ನು ಪರಿಚಯಿಸಲಾಗಿತ್ತು. ಇದು ಒಂದು ರೀತಿಯಲ್ಲಿ ಡಿಜಿಟಲ್ ವ್ಯಾಲಟ್ ರೀತಿಯದ್ದು. ಲೈಟ್ ಅಕೌಂಟ್​ನಲ್ಲಿ 2,000 ರೂವರೆಗೆ ಹಣ ತುಂಬಿಸಿಡಬಹುದು. 200 ರೂಗಿಂತ ಕಡಿಮೆ ಮೊತ್ತದ ವಹಿವಾಟಿಗೆ ಲೈಟ್ ಮೂಲಕ ಪಿನ್ ನಮೂದಿಸುವ ಅವಶ್ಯಕತೆ ಇಲ್ಲದೇ ಹಣ ಪಾವತಿಸುವ ಅವಕಾಶ ಕೊಡಲಾಗಿತ್ತು. ಬಳಿಕ ಈ ವಹಿವಾಟು ಮಿತಿಯನ್ನು 500 ರೂಗೆ ಹೆಚ್ಚಿಸಲಾಯಿತು. ‘

ಇದನ್ನೂ ಓದಿ: ಬ್ಯಾಂಕುಗಳಿಗೆ ಸಿಂಗಲ್ ಡೆಪಾಸಿಟ್ ಮಿತಿ 3 ಕೋಟಿ ರೂಗೆ ಹೆಚ್ಚಳ; ಹೆಚ್ಚಿನ ಮೊತ್ತ ರೀಟೇಲ್ ಎಫ್​ಡಿಗೆ ವರ್ಗ

ಆದರೆ, ಯುಪಿಐ ಲೈಟ್​ನ ವ್ಯಾಲಟ್​ಗೆ ಮ್ಯಾನುಯಲ್ ಆಗಿ ಹಣ ಜಮೆ ಮಾಡಬೇಕು. ಈಗ ಇ-ಮ್ಯಾಂಡೇಟ್ ಮಾಡುವುದರಿಂದ ಎರಡು ಸಾವಿರ ರೂವರೆಗೆ ಹಣವನ್ನು ಸ್ವಯಂಚಾಲಿತವಾಗಿ ಸೇರಿಸಲು ಬ್ಯಾಂಕುಗಳಿಗೆ ನಾವು ಸೂಚಿಸಬಹುದು. ಯುಪಿಐ ಲೈಟ್​ನ ವ್ಯಾಲಟ್​ನಲ್ಲಿರುವ ಹಣ ನಿರ್ದಿಷ್ಟ ಮಿತಿಗಿಂತ ಕಡಿಮೆಗೊಂಡರೆ ಬ್ಯಾಂಕ್ ಖಾತೆಯಿಂದ ಹಣವು ಸ್ವಯಂಚಾಲಿತವಾಗಿ ಲೈಟ್​ಗೆ ಭರ್ತಿಯಾಗುತ್ತದೆ.

ಯುಪಿಐ ಲೈಟ್ ಪ್ರಯೋಜನವೇನು?

ಸಾಮಾನ್ಯವಾಗಿ ಈಗ ಮಾರುಕಟ್ಟೆಯಲ್ಲಿ ಕ್ಯಾಷ್ ಬಳಕೆ ಬಹಳ ಕಡಿಮೆ ಆಗಿದೆ. ಸಣ್ಣ ಸಣ್ಣ ಮೊತ್ತದ ವಹಿವಾಟುಗಳಲ್ಲೂ ಈಗ ಯುಪಿಐ ಮೂಲಕವೇ ಹಣ ಪಾವತಿಸುವುದು ಹೆಚ್ಚಾಗಿದೆ. ಪ್ರತೀ ಬಾರಿಯೂ ಹಣ ಪಾವತಿಸುವಾಗ ಬ್ಯಾಂಕ್ ಖಾತೆಯಿಂದ ಪಡೆಯಬೇಕಾಗುತ್ತದೆ. ಇದನ್ನು ತಪ್ಪಿಸಲು ಯುಪಿಐ ಆ್ಯಪ್​ಗಳು ವ್ಯಾಲಟ್ ಪರಿಚಯಿಸಿದವು. ಫೋನ್ ಪೆ, ಪೇಟಿಎಂನಲ್ಲಿ ವ್ಯಾಲಟ್ ಬಂದವು.

ಇದನ್ನೂ ಓದಿ: ಬಡ್ಡಿದರ ಯಥಾಸ್ಥಿತಿ ಮುಂದುವರಿಸಲು ಆರ್​ಬಿಐ ನಿರ್ಧಾರ

ಇದೇ ವೇಳೆ ಯುಪಿಐ ಲೈಟ್ ಎಂಬ ಫೀಚರ್ ಅನ್ನೂ ಪರಿಚಯಿಸಲಾಯಿತು. ಇದೂ ಕೂಡ ವ್ಯಾಲಟ್ ರೀತಿಯದ್ದೇ. ಆದರೆ, ಎರಡು ಸಾವಿರ ರೂವರೆಗೆ ಮಾತ್ರ ಅದರಲ್ಲಿ ಇರಿಸಬಹುದು. ಹಣ ಪಾವತಿಸುವಾಗ ಬ್ಯಾಂಕ್ ಖಾತೆ ಬಳಸುವ ಅವಶ್ಯಕತೆ ಇರುವುದಿಲ್ಲ. ಪಿನ್ ಹಾಕುವ ಅವಶ್ಯಕತೆ ಇಲ್ಲದೇ ಹಣ ಪಾವತಿಸಬಹುದು. ಇದರಿಂದ ಯುಪಿಐ ಬಳಕೆದಾರರಿಗೆ ಹಣ ಪಾವತಿಸುವ ಕೆಲಸ ಸಲೀಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ