RBI: 90ನೇ ಸಂಸ್ಥಾಪನಾ ದಿನ: ಐತಿಹಾಸಕ್ಕೆ ಹಂತಕ್ಕೆ ಆರ್​ಬಿಐ ಪ್ರವೇಶ ಎಂದ ಪ್ರಧಾನಿ ಮೋದಿ

|

Updated on: Apr 01, 2024 | 1:10 PM

Reserve Bank of India @ 90 Year: 1935ರ ಏಪ್ರಿಲ್ 1ರಂದು ಸ್ಥಾಪನೆಯಾದ ಭಾರತೀಯ ರಿಸರ್ವ್ ಬ್ಯಾಂಕ್​ನ 90ನೇ ಸಂಸ್ಥಾಪನಾ ದಿನ ಇಂದು. ಈ ಸಂದರ್ಭದಲ್ಲಿ ಮುಂಬೈನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆರ್​ಬಿಐ ಬದ್ಧತೆ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ. ಕಳೆದ 10 ವರ್ಷದಲ್ಲಿ ಸರ್ಕಾರ ಹಾಗೂ ಆರ್​ಬಿಐನ ಪ್ರಯತ್ನಗಳ ಫಲವಾಗಿ ಇವತ್ತು ಭಾರತದ ಆರ್ಥಿಕತೆ ಉತ್ತಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

RBI: 90ನೇ ಸಂಸ್ಥಾಪನಾ ದಿನ: ಐತಿಹಾಸಕ್ಕೆ ಹಂತಕ್ಕೆ ಆರ್​ಬಿಐ ಪ್ರವೇಶ ಎಂದ ಪ್ರಧಾನಿ ಮೋದಿ
ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಜೊತೆ ಪ್ರಧಾನಿ ಮೋದಿ
Follow us on

ಮುಂಬೈ, ಏಪ್ರಿಲ್ 1: ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಐತಿಹಾಸಿಕ ಹಂತ ಪ್ರವೇಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಭಿಪ್ರಾಯಪಟ್ಟರು. ಆರ್​ಬಿಐನ 90ನೇ ಸಂಸ್ಥಾಪನಾ ದಿನದ (RBI @90 Years) ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪ್ರಧಾನಿಗಳು, ಆರ್​ಬಿಐನ ಬದ್ಧತೆ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದರು. ಕಳೆದ ಒಂದು ದಶಕದಲ್ಲಿ ಆರ್​ಬಿಐ ಮತ್ತು ತಮ್ಮ ಸರ್ಕಾರ ಮಾಡಿದ ಪ್ರಯತ್ನಗಳ ಫಲವಾಗಿ ಬ್ಯಾಂಕಿಂಗ್ ವಲಯ ಲಾಭದಾಯಕವಾಗಿದೆ ಮತ್ತು ಸಾಲ ನೀಡುವಿಕೆ ಹೆಚ್ಚುತ್ತಿದೆ ಎಂದು ಮೋದಿ ಈ ವೇಳೆ ಹೇಳಿದರು.

‘2014ರಲ್ಲಿ ಆರ್​ಬಿಐನ 80ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದಾಗ ಪರಿಸ್ಥಿತಿ ಭಿನ್ನವಾಗಿತ್ತು. ಇಡೀ ಬ್ಯಾಂಕಿಂಗ್ ವಲಯ ಹಲವು ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿತ್ತು. ಭಾರತದ ಬ್ಯಾಂಕಿಂಗ್ ಸೆಕ್ಟರ್​ನ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ಪ್ರತಿಯೊಬ್ಬರಿಗೂ ಅನುಮಾನವಿತ್ತು. ಪರಿಸ್ಥಿತಿ ಎಷ್ಟು ಹೀನವಾಗಿತ್ತು ಎಂದರೆ ದೇಶದ ಆರ್ಥಿಕ ಪ್ರಗತಿಗೆ ಅವಶ್ಯಕ ಕೊಡುಗೆ ನೀಡಲು ಸರ್ಕಾರಿ ಬ್ಯಾಂಕುಗಳಿಗೆ ಸಾಧ್ಯವಾಗದಂತಿತ್ತು. ಇವತ್ತು ಭಾರತದ ಬ್ಯಾಂಕಿಂಗ್ ವ್ಯವಸ್ಥೆ ವಿಶ್ವದಲ್ಲೇ ಬಲಿಷ್ಠ ಎನಿಸಿದೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಈ ಸಕಾರಾತ್ಮಕ ಪರಿವರ್ತನೆಗೆ ತಮ್ಮ ಸರ್ಕಾರದ ಸ್ಪಷ್ಟ ನೀತಿ, ಪ್ರಾಮಾಣಿಕತೆ ಮತ್ತು ಬದ್ಧತೆ ಕಾರಣ ಎಂದೂ ಪ್ರಧಾನಿಗಳು ವಿಶ್ಲೇಷಿಸಿದರು.

ಇದನ್ನೂ ಓದಿ: ಸ್ವರ್ಣಯುಗ ಆರಂಭ ಎಂದು ರಾಮಲಲ್ಲಾ ಕಿವಿಯಲ್ಲಿ ಹೇಳಿದಂತಿತ್ತು; ರಾಮಮಂದಿರ ಪ್ರಾಣಪ್ರತಿಷ್ಠೆ ಅನುಭವ ಹಂಚಿಕೊಂಡ ಪ್ರಧಾನಿ

‘ನಮ್ಮ ಪ್ರಯತ್ನಗಳು ಪ್ರಾಮಾಣಿಕತೆ ಮತ್ತು ಸ್ಥಿರತೆ ಹೊಂದಿದ್ದವು. ನಮ್ಮ ಉದ್ದೇಶ ಸ್ಪಷ್ಟವಾಗಿದ್ದರೆ ನೀತಿ ಸರಿಯಾಗಿ ಇರುತ್ತದೆ. ನೀತಿ ಸರಿಯಾಗಿದ್ದರೆ ನಿರ್ಧಾರಗಳು ಸರಿಯಾಗಿರುತ್ತವೆ. ನಿರ್ಧಾರ ಸರಿ ಇದ್ದರೆ ಫಲಿತಾಂಶ ಕೂಡ ಸರಿಯಾಗಿ ಸಿಗುತ್ತದೆ,’ ಎಂದು ಮೋದಿ ವಿವರಣೆ ನೀಡಿದರು.

‘ಭಾರತದ ಬ್ಯಾಂಕಿಂಗ್ ಸೆಕ್ಟರ್​ನ ಪರಿವರ್ತನೆ ಒಂದು ಕೇಸ್ ಸ್ಟಡಿ ಆಗಬಹುದು. ಸರ್ಕಾರಿ ಬ್ಯಾಂಕುಗಳ ಚೇತರಿಕೆಗೆ ಸರ್ಕಾರ 3.5 ಲಕ್ಷ ಕೋಟಿ ರೂ ಬಂಡವಾಳ ತುಂಬಿತು. ಬ್ಯಾಂಕುಗಳಲ್ಲಿನ ಅನುತ್ಪಾದಕ ಸಾಲಗಳು 2018ರಲ್ಲಿ ಶೇ. 11.25ರಷ್ಟು ಇದ್ದದ್ದು 2023ರ ಸೆಪ್ಟಂಬರ್​ಗೆ ಶೇ. 3ಕ್ಕಿಂತಲೂ ಕಡಿಮೆಗೆ ಬಂದಿವೆ. ಸಾಲಗಳ ಪ್ರಮಾಣ ಶೇ. 15ಕ್ಕೆ ಹೆಚ್ಚಾಗಿದೆ,’ ಎಂದು ಪ್ರಧಾನಿಗಳು ತಿಳಿಸಿದರು.

ಕಳೆದ 10 ವರ್ಷ ಬರೀ ಟ್ರೇಲರ್ ಎಂದ ಪ್ರಧಾನಿ

‘ಕಳೆದ 10 ವರ್ಷಗಳು ಟ್ರೇಲರ್ ಮಾತ್ರವೇ. ನಮ್ಮ ದೇಶವನ್ನು ಮುನ್ನಡೆಸಲು ಇನ್ನೂ ಬಹಳಷ್ಟು ಕೆಲಸ ಮಾಡಬೇಕಿದೆ. ಹಣದುಬ್ಬರ ಇಳಿಕೆಯ ಗುರಿ ಇಡುವ ಅಧಿಕಾರವನ್ನು ಆರ್​ಬಿಐಗೆ ಕೊಟ್ಟಿದ್ದೇವೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಗೆ ಸಿಲುಕಿ ಹಲವು ದೇಶಗಳ ಆರ್ಥಿಕತೆ ಒದ್ದಾಡುತ್ತಿರುವಾಗ ಭಾರತದ ಆರ್ಥಿಕತೆ ಹೊಸ ದಾಖಲೆಗಳನ್ನು ಮಾಡುತ್ತಿದೆ. ಕೋವಿಡ್, ಯುದ್ಧ ಅಥವಾ ಬೇರೆ ಯಾವುದೇ ಬಾಹ್ಯ ಪರಿಣಮಗಳಿದ್ದಾಗ್ಯೂ ಹಣದುಬ್ಬರ ಸಾಧಾರಣ ಮಟ್ಟದಲ್ಲಿ ಇದೆ,’ ಎಂದು ಅವರು ಹೇಳಿದರು.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಜಯಂತಿ: ಕನ್ನಡದಲ್ಲೇ ಸಂದೇಶ ಪ್ರಕಟಿಸಿ ನಮನ ಸಲ್ಲಿಸಿದ ಪ್ರಧಾನಿ ಮೋದಿ ಹೇಳಿದ್ದಿಷ್ಟು

ಮುಂದಿನ 10 ವರ್ಷದಲ್ಲಿ ಭಾರತದ ಆರ್ಥಿಕತೆ ಸ್ವಾವಲಂಬನೆ ಸಾಧಿಸುವುದು ಅವಶ್ಯಕವಾಗಿದೆ. ಇದರಿಂದ ಜಾಗತಿಕ ಪರಿಣಾಮಗಳು ದೇಶದ ಮೇಲೆ ಆಗದಂತೆ ನಿಯಂತ್ರಿಸಬಹುದು ಎಂದು ಪ್ರಧಾನಿಗಳು ತಿಳಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್ 1935ರ ಏಪ್ರಿಲ್ 1ರಂದು ಸ್ಥಾಪನೆಯಾಗಿದೆ. ಈ ವರ್ಷದ ಏಪ್ರಿಲ್ 1, ಆರ್​ಬಿಐನ 90ನೇ ಸಂಸ್ಥಾಪನಾ ದಿನವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ