ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಭಾನುವಾರದಂದು ಘೋಷಣೆ ಮಾಡಿರುವಂತೆ, ಹಣಕಾಸು ನೀತಿ ಸಮಿತಿ (Monetary Policy Committee) ತ್ರೈಮಾಸಿಕ ಸಭೆಯನ್ನು ಒಂದು ದಿನ ಮುಂದೂಡಲಾಗಿದೆ. ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನದ ಕಾರಣಕ್ಕೆ ಫೆಬ್ರವರಿ 7ಕ್ಕೆ ಮಹಾರಾಷ್ಟ್ರದಲ್ಲಿ ಶೋಕಾಚರಣೆಗಾಗಿ ರಜಾ ಘೋಷಣೆ ಮಾಡಲಾಗಿದೆ. ಸಭೆಯನ್ನು ಫೆಬ್ರವರಿ 7ರಿಂದ 9ರ ತನಕ ನಿಗದಿ ಮಾಡಲಾಗಿತ್ತು. ಇದೀಗ ಫೆಬ್ರವರಿ 8ರಂದು ಆರಂಭಗೊಳ್ಳಲಿದ್ದು, 10ನೇ ತಾರೀಕಿನಂದು ನಿರ್ಣಯಗಳನ್ನು ಘೋಷಿಸಲಾಗುತ್ತದೆ. “ಫೆಬ್ರವರಿ 7, 2022ರಂದು ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ 1881 ಸೆಕ್ಷನ್ 25ರ ಅಡಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಭಾರತರತ್ನ ಕು. ಲತಾ ಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸುವ ಪ್ರಯುಕ್ತ ಆರ್ಬಿಐ ಹಣಕಾಸು ಸಮಿತಿ ಸಭೆಯನ್ನು ಫೆಬ್ರವರಿ 8ರಿಂದ 10ರ ತನಕ ಮರುನಿಗದಿ ಮಾಡಲಾಗಿದೆ,” ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಮುಂಬೈನ ಆಸ್ಪತ್ರೆಯಲ್ಲಿ ಭಾನುವಾರದಂದು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಮುಂದಿನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಪ್ರಮುಖ ಬಡ್ಡಿ ದರಗಳು ಯಥಾ ಸ್ಥಿತಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಕೇಂದ್ರ ಬಜೆಟ್ 2022ರ ಮಂಡನೆ ಆದ ನಂತರದ ಮೊದಲ ಹಣಕಾಸು ನೀತಿ ಸಮಿತಿ ಸಭೆ ಇದಾಗಿದೆ. ವಿಶ್ಲೇಷಕರ ಅಭಿಪ್ರಾಯದ ಪ್ರಕಾರ, ಆರ್ಬಿಐನ ಹಣಕಾಸು ನೀತಿ ಸಮಿತಿಯು ಪಾಲಿಸಿ ನಿರ್ಧಾರವನ್ನು “ಅಕಾಮಡೇಟಿವ್”ನಿಂದ “ನ್ಯೂಟ್ರಲ್”ಗೆ ಬದಲಾಗಬಹುದು. ಮತ್ತು ಲಿಕ್ವಿಡಿಟಿ ಸಹಜ ಸ್ಥಿತಿಗೆ ತರುವ ಪ್ರಕ್ರಿಯೆಯಲ್ಲಿ ರಿವರ್ಸ್ ರೆಪೋ ದರದಲ್ಲಿ ಸ್ವಲ್ಪ ಬದಲಾವಣೆ ಆಗಬಹುದು.
ಕೊವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೋ ದರ ಹಾಗೂ ರಿವರ್ಸ್ ರೆಪೋ ದರವನ್ನು ಕ್ರಮವಾಗಿ ಶೇ 4 ಮತ್ತು ಶೇ 3.35ರಲ್ಲೇ ಮುಂದುವರಿಸಿದೆ. ಇದರ ಜತೆಗೆ ಹಣದುಬ್ಬರ ದರವನ್ನು ಸಹ ಸಂಭಾಳಿಸಬೇಕಾದ ಹೊಣೆ ಆರ್ಬಿಐ ಮೇಲಿದೆ. ಆರ್ಬಿಐನಿಂದ ಪ್ರತಿ 2 ತಿಂಗಳಿಗೊಮ್ಮೆ ಹಣಕಾಸು ನೀತಿ ಸಭೆಯನ್ನು ನಡೆಸಲಾಗುತ್ತದೆ. ಬ್ಯಾಂಕ್ ಬಡ್ಡಿ ದರ ಸೇರಿದಂತೆ ಇತರ ಪ್ರಮುಖ ವಿಚಾರಗಳ ಬಗ್ಗೆ ಘೋಷಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಸರ್ಕಾರದ ವ್ಯವಹಾರಗಳನ್ನು ನಡೆಸಲು ಪೇಮೆಂಟ್ಸ್ ಬ್ಯಾಂಕ್ಗಳು, ಸಣ್ಣ ಹಣಕಾಸು ಬ್ಯಾಂಕ್ಗಳಿಗೆ ಆರ್ಬಿಐ ಅವಕಾಶ
Published On - 11:43 am, Mon, 7 February 22