Record Dividend: ಸರ್ಕಾರಕ್ಕೆ ಆರ್​​ಬಿಐನಿಂದ 2.70 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಸಾರ್ವಕಾಲಿಕ ಗರಿಷ್ಠ ಮೊತ್ತ

RBI decides to give Rs 2.70 trillion as dividend to govt: ರಿಸರ್ವ್ ಬ್ಯಾಂಕ್ 2024-25ರ ಹಣಕಾಸು ವರ್ಷಕ್ಕೆ ಸರ್ಕಾರಕ್ಕೆ 2.70 ಲಕ್ಷ ಕೋಟಿ ರೂನಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಿದೆ. 2023-24ರಲ್ಲಿ 2.1 ಲಕ್ಷ ಕೋಟಿ ರೂ ಡಿವಿಡೆಂಡ್ ನೀಡಲಾಗಿತ್ತು. ಆರ್​​ಬಿಐ ಒಂದು ವರ್ಷದಲ್ಲಿ ಎರಡು ಲಕ್ಷ ಕೋಟಿ ರೂ ಲಾಭಾಂಶ ನೀಡಿದ್ದು ಅದೇ ಮೊದಲು. ಈಗ ಸತತ ಎರಡನೇ ವರ್ಷ ಎರಡು ಲಕ್ಷ ಕೋಟಿಗೂ ಅಧಿಕ ಡಿವಿಡೆಂಡ್ ಅನ್ನು ಸರ್ಕಾರಕ್ಕೆ ನೀಡುತ್ತಿದೆ ಆರ್​​ಬಿಐ.

Record Dividend: ಸರ್ಕಾರಕ್ಕೆ ಆರ್​​ಬಿಐನಿಂದ 2.70 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಸಾರ್ವಕಾಲಿಕ ಗರಿಷ್ಠ ಮೊತ್ತ
ಆರ್​​ಬಿಐ

Updated on: May 23, 2025 | 6:45 PM

ನವದೆಹಲಿ, ಮೇ 23: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ಈ ಬಾರಿ ಹೊಸ ದಾಖಲೆಯ ಮೊತ್ತದಷ್ಟು ಡಿವಿಡೆಂಡ್ (RBI dividend) ಅನ್ನು ಸರ್ಕಾರಕ್ಕೆ ನೀಡಲು ನಿರ್ಧರಿಸಿದೆ. ವರದಿ ಪ್ರಕಾರ, 2024-25ರ ಹಣಕಾಸು ವರ್ಷಕ್ಕೆ ಸರ್ಕಾರಕ್ಕೆ ಆರ್​​ಬಿಐ 2.69 ಲಕ್ಷ ಕೋಟಿ ರೂ ಲಾಭಾಂಶ ವರ್ಗಾಯಿಸಲಿದೆ. ಹಿಂದಿನ ವರ್ಷದಲ್ಲಿ (2023-24) 2.1 ಲಕ್ಷ ಕೋಟಿ ರೂ ಡಿವಿಡೆಂಡ್ ನೀಡಿತ್ತು. ಅದು ಹೊಸ ದಾಖಲೆ ಎನಿಸಿತ್ತು. ಆದರೆ, ಈ ಬಾರಿ ಡಿವಿಡೆಂಡ್ ಶೇ. 27ರಷ್ಟು ಹೆಚ್ಚಾಗಿದೆ. ಇದು ಆರ್​​ಬಿಐನಿಂದ ಸರ್ಕಾರಕ್ಕೆ ನೀಡಲಾಗುತ್ತಿರುವ ಗರಿಷ್ಠ ಡಿವಿಡೆಂಡ್ ಮೊತ್ತವಾಗಿದೆ. 2022-23ರಲ್ಲಿ ಆರ್​​ಬಿಐನಿಂದ ಸರ್ಕಾರಕ್ಕೆ ನೀಡಲಾಗಿದ್ದ ಡಿವಿಡೆಂಡ್ 87,416 ಕೋಟಿ ರೂ ಮಾತ್ರವೇ ಇತ್ತು.

ಸರ್ಕಾರಕ್ಕೆ ಬಹಳ ಅಗತ್ಯವಾದ ಸಂದರ್ಭದಲ್ಲಿ ಆರ್​​ಬಿಐ ಸಹಾಯ…

ಜಾಗತಿಕ ಅನಿಶ್ಚಿತ ಪರಿಸ್ಥಿತಿ, ಪಾಕಿಸ್ತಾನದೊಂದಿಗೆ ಗಡಿ ಸಂಘರ್ಷ ಇತ್ಯಾದಿ ಘಟನೆಗಳು ಭಾರತದ ಆರ್ಥಿಕ ಮುನ್ನಡೆಗೆ ತುಸು ತಡೆಯಾಗಿವೆ. ಈ ಹಂತದಲ್ಲಿ ಆರ್ಥಿಕ ಬೆಳವಣಿಗೆಗೆ ಚುರುಕು ಮೂಡಿಸಲು ಸರ್ಕಾರ ಈ ವರ್ಷ ಸಾಕಷ್ಟು ವೆಚ್ಚ ಮಾಡುವುದು ಅನಿವಾರ್ಯವಾಗಿದೆ. ಈ ಕಾರಣಕ್ಕೆ ಆರ್​​ಬಿಐನಿಂದ ಸಿಗಲಿರುವ 2.70 ಲಕ್ಷ ಕೋಟಿ ರೂ ಹಣವು ಸರ್ಕಾರಕ್ಕೆ ಸಹಾಯಕವಾಗಲಿದೆ.

ಇದನ್ನೂ ಓದಿ: ಭಾರತ ಮಾತ್ರವಲ್ಲ, ಅಮೆರಿಕ ಬಿಟ್ಟು ಬೇರೆಲ್ಲೇ ಐಫೋನ್ ತಯಾರಿಸಿದ್ರೂ ಶೇ. 25 ಸುಂಕ: ಆ್ಯಪಲ್​​ಗೆ ಟ್ರಂಪ್ ಬೆದರಿಕೆ

ಆರ್​ಬಿಐನ ಹೊಸ ಗವರ್ನರ್ ಸಂಜಯ್ ಮಲ್ಹೋತ್ರಾ ಅಧ್ಯಕ್ಷತೆಯಲ್ಲಿ ಮೇ 15ರಂದು ನಡೆದ ಆರ್​​ಬಿಐನ 616ನೇ ಕೇಂದ್ರೀಯ ನಿರ್ದೇಶಕರ ಮಂಡಳಿ ಸಭೆಯಲ್ಲಿ 2,68,590.07 ಕೋಟಿ ರೂ ಡಿವಿಡೆಂಡ್ ನೀಡುವ ನಿರ್ಧಾರ ಕೈಗೊಳ್ಳಲಾಯಿತು.

ಎಕನಾಮಿಕ್ ಕ್ಯಾಪಿಟಲ್ ಫ್ರೇಮ್​​ವರ್ಕ್ ಎನ್ನುವ ಸೂತ್ರದ ಆಧಾರದ ಮೇಲೆ ಡಿವಿಡೆಂಡ್ ಎಷ್ಟೆಂಬುದನ್ನು ನಿರ್ಧರಿಸಲಾಗುತ್ತದೆ. ಈ ಫ್ರೇಮ್​ವರ್ಕ್ ಪ್ರಕಾರ ಆದಾಯದ ಶೇ. 7.50ರಿಂದ 4.50ರಷ್ಟನ್ನು ಕಂಟಿಂಜೆಂಟ್ ರಿಸ್ಕ್ ಬಫರ್ ಎಂದು ಪರಿಗಣಿಸಲಾಗಿದೆ. ಈ ರಿಸ್ಕ್ ಬಫರ್ ಮೊತ್ತವನ್ನು ಉಳಿಸಿಕೊಂಡು ಉಳಿದವನ್ನು ಡಿವಿಡೆಂಡ್ ರೂಪದಲ್ಲಿ ಸರ್ಕಾರಕ್ಕೆ ನೀಡಲಾಗುತ್ತದೆ.

ಇದನ್ನೂ ಓದಿ: ಬ್ಯಾಂಕುಗಳನ್ನು ನಿಯಂತ್ರಿಸುವ ಆರ್​​ಬಿಐಗೆ ಆದಾಯ ಎಲ್ಲಿಂದ ಬರುತ್ತೆ? ಇಲ್ಲಿದೆ ಡೀಟೇಲ್ಸ್

ಆರ್​​ಬಿಐ ಪ್ರತೀ ವರ್ಷವೂ ಸರ್ಕಾರಕ್ಕೆ ಡಿವಿಡೆಂಡ್ ನೀಡುತ್ತದೆ. ಬಾಂಡ್​​ಗಳಿಂದ ಸಿಗುವ ಬಡ್ಡಿ, ಫೋರೆಕ್ಸ್ ರಿಸರ್ವ್ಸ್​ನಲ್ಲಿರುವ ಆಸ್ತಿಗಳ ಮೌಲ್ಯ ಹೆಚ್ಚಳದಿಂದ ಸಿಗುವ ಲಾಭ ಇತ್ಯಾದಿಯು ಆರ್​​​ಬಿಐಗೆ ಪ್ರಮುಖ ಆದಾಯ ಮೂಲವಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Fri, 23 May 25