Adani Row: ಅದಾನಿ ಪ್ರಕರಣದ ಬಗ್ಗೆ ಏನಂದ್ರು ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್? ಇಲ್ಲಿದೆ ನೋಡಿ

|

Updated on: Feb 08, 2023 | 3:38 PM

ಆರ್​ಬಿಐ ಹಣಕಾಸು ನೀತಿ ಪ್ರಕಟಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಬ್ಯಾಂಕ್​​ಗಳು ಯಾವುದೇ ಕಂಪನಿಗೆ ಸಾಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Adani Row: ಅದಾನಿ ಪ್ರಕರಣದ ಬಗ್ಗೆ ಏನಂದ್ರು ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್? ಇಲ್ಲಿದೆ ನೋಡಿ
ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್
Image Credit source: PTI
Follow us on

ಮುಂಬೈ: ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ (NBFCs) ಸೇರಿದಂತೆ ದೇಶದ ಬ್ಯಾಂಕಿಂಗ್ ವಲಯ (Indian banking sector) ಬಲಿಷ್ಠವಾಗಿದೆ. ಯಾವುದೋ ಒಂದು ಘಟನೆ ಅಥವಾ ಪ್ರಕರಣದಿಂದ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಪರಿಣಾಮವಾಗದು ಎಂದು ಆರ್​​ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ ಸದ್ಯ ಎದುರಿಸುತ್ತಿರುವ ವಿವಾದಕ್ಕೆ ಸಂಬಂಧಿಸಿ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಶಕ್ತಿಕಾಂತ ದಾಸ್ ಅವರು ಎಲ್ಲಿಯೂ ಅದಾನಿ ಸಮೂಹದ ಹೆಸರನ್ನು ಪ್ರಸ್ತಾಪಿಸಿಲ್ಲ. ಅದಾನಿ ಸಮೂಹಕ್ಕೆ ಬ್ಯಾಂಕ್​ಗಳು ನೀಡಿರುವ ಸಾಲದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ಆರ್​​ಬಿಐ ಮೌಲ್ಯಮಾಪನ ನಡೆಸಿದೆ. ದೊಡ್ಡ ಪ್ರಮಾಣದ ಸಾಲ ನೀಡಿಕೆ ವಿಚಾರವಾಗಿ ಆರ್​​ಬಿಐ ಮಾರ್ಗಸೂಚಿಯನ್ನು ಎಲ್ಲ ಬ್ಯಾಂಕ್​​ಗಳು ಅನುಸರಿಸಿವೆ ಎಂದು ತಿಳಿಸಿದ್ದಾರೆ.

ಆರ್​ಬಿಐ ಹಣಕಾಸು ನೀತಿ ಪ್ರಕಟಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಬ್ಯಾಂಕ್​​ಗಳು ಯಾವುದೇ ಕಂಪನಿಗೆ ಸಾಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬ್ಯಾಂಕ್​​​ಗಳು ಯಾವುದೇ ಕಂಪನಿಯ ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಸಾಲ ನೀಡುವುದಿಲ್ಲ. ಕಂಪನಿಯ ಸಾಮರ್ಥ್ಯ, ಮೂಲಭೂತ ಅಂಶಗಳು, ನಗದು ಹರಿವು ಹಾಗೂ ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಾಲ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Repo Rate Hike; ಆರ್​ಬಿಐ ರೆಪೊ ದರ ಮತ್ತೆ 25 ಮೂಲಾಂಶ ಹೆಚ್ಚಳ; ಹೆಚ್ಚಾಗಲಿದೆ ಇಎಂಐ ಮೊತ್ತ

ಅಮೆರಿಕದ ಹಿಂಡನ್​​​ಬರ್ಗ್​ ರಿಸರ್ಚ್ ಆರೋಪ ಮಾಡಿದ ಬಳಿಕ ಅದಾನಿ ಸಮೂಹದ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಗಣನೀಯ ಕುಸಿತ ದಾಖಲಿಸಿದ್ದವು. ಕಂಪನಿಯ ಸಂಪತ್ತು ವೇಗವಾಗಿ ಕರಗಲು ಆರಂಭವಾಗಿತ್ತು. ಇದು ದೇಶದಲ್ಲಿ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು. ಸರ್ಕಾರಿ ಸ್ವಾಮ್ಯದ ಎಲ್​​ಐಸಿ ಹೂಡಿಕೆ ಮಾಡಿರುವ ಹಾಗೂ ಸಾಲ ನೀಡಿರುವ ಕಾರಣಕ್ಕೆ ಅದಾನಿ ಪ್ರಕರಣ ಮತ್ತಷ್ಟು ಹೆಚ್ಚಿನ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಅದಾನಿ ಸಮೂಹಕ್ಕೆ ನೀಡಿರುವ ಸಾಲದ ಬಗ್ಗೆ ಬ್ಯಾಂಕ್​​ಗಳಿಂದ ಆರ್​ಬಿಐ ವಿವರ ಕೋರಿತ್ತು. ಅದಾನಿ ಸಮೂಹಕ್ಕೆ ನೀಡಿರುವ ಸಾಲ ಆರ್​ಬಿಐ ಮಾರ್ಗಸೂಚಿಯಲ್ಲಿ ಹೇಳಿರುವ ಮಿತಿಯಲ್ಲಿಯೇ ಇದೆ ಎಂದು ಎಸ್​ಬಿಐ ಸ್ಪಷ್ಟನೆ ನೀಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ