ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣಕಾಸು ನೀತಿ ಸಮಿತಿ ಸಭೆಯ (MPC) ನಿರ್ಣಯಗಳನ್ನು ಬುಧವಾರ ಪ್ರಕಟಿಸಿದ್ದು, ರೆಪೊ ದರವನ್ನು (Repo Rate) 35 ಮೂಲಾಂಶ ಹೆಚ್ಚಿಸಿದೆ. ಇದರೊಂದಿಗೆ, ಪರಿಷ್ಕೃತ ರೆಪೊ ದರ ಶೇಕಡಾ 6.25 ಆಗಿದೆ. ಈವರೆಗೆ ರೆಪೊ ದರ ಶೇಕಡಾ 5.90ರಷ್ಟು ಇತ್ತು. ಪರಿಷ್ಕೃತ ರೆಪೊ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಆರ್‌ಬಿಐ ಘೋಷಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರು ಪತ್ರಿಕಾಗೋಷ್ಠಿ ಮೂಲಕ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದರು. ರೆಪೊ ದರ ಹೆಚ್ಚಳದ ಪರಿಣಾಮವಾಗಿ ವಾಹನ, ಗೃಹ ಸೇರಿದಂತೆ ವಿವಿಧ ಸಾಲಗಳ ಬಡ್ಡಿ ದರ, ಇಎಂಐ (EMI) ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ಜಾಗತಿಕ ಆರ್ಥಿಕತೆಯು ಅನಿಶ್ಚಿತತೆ ಎದುರಿಸುತ್ತಿದೆ. ಆಹಾರ ಕೊರತೆ ಮತ್ತು ಅತಿಯಾದ ಇಂಧನ ದರ ಬಡವರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ರಷ್ಯಾ – ಉಕ್ರೇನ್ ಯುದ್ಧದ ಬಳಿಕ ಜಾಗತಿಕ ಹಣದುಬ್ಬರ ಪ್ರಮಾಣ ಅತಿಯಾಗಿ ಏರಿಕೆ ಕಂಡಿದೆ. ಆದರೆ, ಭಾರತದ ಆರ್ಥಿಕತೆ ಸ್ಥಿರವಾಗಿದೆ. ಭಾರತವು ಜಾಗತಿಕ ಮಟ್ಟದಲ್ಲೇ ಹೆಚ್ಚು ಬೆಳವಣಿಗೆ ದಾಖಲಿಸುತ್ತಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು.
ಸತತ ಐದನೇ ಬಾರಿಗೆ ಹೆಚ್ಚಳ
ಆರ್‌ಬಿಐ ಸತತ ಐದನೇ ಬಾರಿ ರೆಪೊ ದರ ಹೆಚ್ಚಳ ಮಾಡಿದೆ. ಆರ್‌ಬಿಐ ಹಣಕಾಸು ನೀತಿ ಸಮಿತಿಯು 5, 6 ಹಾಗೂ 7ರಂದು ನಡೆಸಿದ ಸಭೆಯಲ್ಲಿ ರೆಪೊ ದರ ಹೆಚ್ಚಳದ ತೀರ್ಮಾನಕ್ಕೆ ಬರಲಾಗಿದೆ. ಹಣಕಾಸು ನೀತಿ ಸಮಿತಿ ಆರು ಮಂದಿ ಸದಸ್ಯರ ಪೈಕಿ ಐವರು ರೆಪೊ ದರ ಹೆಚ್ಚಳಕ್ಕೆ ಸಮ್ಮತಿಸಿದ್ದಾರೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು.
ಗ್ರಾಹಕರ ದರ ಸೂಚ್ಯಂಕ ಆಧಾರಿತ (ಸಿಪಿಐ) ಹಣದುಬ್ಬರ ಅಕ್ಟೋಬರ್ನಲ್ಲಿ ಶೇಕಡಾ 6.7ರಷ್ಟಿತ್ತು. ಸತತ 11 ತಿಂಗಳುಗಳಿಂದ ಹಣದುಬ್ಬರ ಪ್ರಮಾಣ ಸಹನೆಯ ಮಟ್ಟವಾದ ಶೇಕಡಾ 6ಕ್ಕಿಂತ ಮೇಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇಕಡಾ 6.7ರಷ್ಟು ಇರಲಿದೆ ಎಂದು ದಾಸ್ ತಿಳಿಸಿದ್ದಾರೆ.
ಜಿಡಿಪಿ ಬೆಳವಣಿಗೆ ದರ ಶೇಕಡಾ 6.8ಕ್ಕೆ ಇಳಿಕೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 7ರಷ್ಟು ಇರಬಹುದು ಎಂದು ಆರ್‌ಬಿಐ ಈ ಹಿಂದೆ ಅಂದಾಜಿಸಿತ್ತು. ಈಗ ಅಂದಾಜಿನಲ್ಲಿ ಕಡಿತಗೊಳಿಸಿದ್ದು, ಶೇಕಡಾ 6.8 ಇರಬಹುದು ಎಂದು ಹೇಳಿದೆ. ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆ ದರ ಅಂದಾಜನ್ನೂ ಆರ್‌ಬಿಐ 7ಕ್ಕೆ ತಗ್ಗಿಸಿದೆ. ಈ ಹಿಂದೆ ಶೇಕಡಾ 7.2ರ ಆರ್ಥಿಕ ಬೆಳವಣಿಗೆ ಅಂದಾಜಿಸಲಾಗಿತ್ತು.
Monetary Policy Committee meeting met on 5th,6th & 7th Dec, based on an assessment of macroeconomic situation & its outlook, MPC decided by a majority of 5 members out of 6 to increase policy reported by 35 basis points to 6.25% with immediate effect: RBI Governor Shaktikanta Das pic.twitter.com/OTaocT5i1h
— ANI (@ANI) December 7, 2022
ಕಳೆದ ಬಾರಿಯ ಹಣಕಾಸು ನೀತಿಯಲ್ಲಿ ಆರ್‌ಬಿಐ ರೆಪೊ ದರವನ್ನು 50 ಮೂಲಾಂಶದಷ್ಟು ಹೆಚ್ಚಳ ಮಾಡಿತ್ತು. ಒಟ್ಟಾರೆಯಾಗಿ ಮೇ ತಿಂಗಳ ಬಳಿಕ ಆರ್‌ಬಿಐ ರೆಪೊ ದರದಲ್ಲಿ 190 ಮೂಲಾಂಶದಷ್ಟು ಹೆಚ್ಚಳ ಮಾಡಿದೆ. ಹಣದುಬ್ಬರವನ್ನು (Inflation) ನಿಯಂತ್ರಣಕ್ಕೆ ತರುವುದಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಆರ್‌ಬಿಐ, ರೆಪೊ ದರವನ್ನೂ ಸತತವಾಗಿ ಹೆಚ್ಚಿಸಿತ್ತು. ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳೂ ಸೇರಿದಂತೆ ವಿವಿಧ ಬ್ಯಾಂಕ್ಗಳು ಸಾಲದ ಮತ್ತು ವಿವಿಧ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ.
ಆರ್‌ಬಿಐ ಗವರ್ನರ್ ಹೇಳಿಕೆಯ ಮುಖ್ಯಾಂಶಗಳು…
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 am, Wed, 7 December 22