ನವದೆಹಲಿ, ಫೆಬ್ರುವರಿ 6: ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಕಮಿಟಿ ಸಭೆ (RBI MPC meeting) ಇವತ್ತು ಆರಂಭಗೊಂಡಿದೆ. ರೆಪೋ ದರ (repo rate) ಅಥವಾ ಬಡ್ಡಿದರದ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಬಹುದು ಎಂಬುದು ಎಲ್ಲರಿಗೂ ಎಂಪಿಸಿ ಸಭೆಯಲ್ಲಿ ನೆಟ್ಟಿರುವ ಕುತೂಹಲವಾಗಿದೆ. ಎಸ್ಬಿಐ ರಿಸರ್ಚ್ ವರದಿ ಪ್ರಕಾರ ಈ ಬಾರಿಯ ಎಂಪಿಸಿ ಸಭೆಯಲ್ಲಿ ರೆಪೋ ದರ ಬದಲಾಯಿಸುವ ಸಾಧ್ಯತೆ ಇಲ್ಲ. ಈ ಬಾರಿ ಮಾತ್ರವಲ್ಲ, ಜೂನ್ವರೆಗೆ ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಯಬಹುದು. ಅಂದರೆ, ಈ ಬಾರಿಯೂ ಸೇರಿ ಇನ್ನು ಮೂರು ಬಾರಿಯೂ ರೆಪೋ ದರ ಶೇ. 6.5ರಲ್ಲೇ ಮುಂದುವರಿಯಬಹುದು. ಆಗಸ್ಟ್ ತಿಂಗಳಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ಬಡ್ಡಿದರವನ್ನು ಇಳಿಸಲು ಆರ್ಬಿಐ ಆಲೋಚಿಸಬಹುದು ಎಂದು ಎಸ್ಬಿಐ ರಿಸರ್ಚ್ನ ವರದಿಯಲ್ಲಿ (SBI research report) ಅಂದಾಜು ಮಾಡಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಎಂಪಿಸಿ ಸಭೆ ಇವತ್ತು ಆರಂಭವಾಗುತ್ತದೆ. ಫೆ. 8, ಗುರುವಾರದಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸಭೆಯಲ್ಲಿ ಚರ್ಚಿತವಾದ ವಿಷಯಗಳು ಮತ್ತು ಸಭೆಯ ನಿರ್ಧಾರಗಳನ್ನು ಪತ್ರಿಕಾಗೋಷ್ಠಿ ಮೂಲಕ ಬಹಿರಂಗಪಡಿಸಲಿದ್ದಾರೆ. ರೆಪೋ ದರ ಇತ್ಯಾದಿ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ. ಹಾಗೆಯೇ, ಜಿಡಿಪಿ ಬಗ್ಗೆ ಪರಿಷ್ಕೃತ ಅಂದಾಜು, ಭವಿಷ್ಯದ ಆರ್ಥಿಕ ಬೆಳವಣಿಗೆ ಸಾಧ್ಯತೆ, ಹಣದುಬ್ಬರ ಪರಿಸ್ಥಿತಿ ಇತ್ಯಾದಿ ಬಗ್ಗೆ ಎಂಪಿಸಿ ಸಭೆಯಲ್ಲಿ ಚರ್ಚೆಗಳಾಗಲಿವೆ.
ಇದನ್ನೂ ಓದಿ: ಇಂಡಸ್ಇಂಡ್ ಷೇರು ಖರೀದಿಸಲು ಎಚ್ಡಿಎಫ್ಸಿಗೆ ಸಿಕ್ತು ಆರ್ಬಿಐ ಅನುಮತಿ; ಷೇರುದಾರರದ್ದು ಇಲ್ಲವಾ ಸಮ್ಮತಿ?
ರೆಪೋ ದರ ಎಂದರೆ ಆರ್ಬಿಐನ ಬಡ್ಡಿದರ. ವಾಣಿಜ್ಯ ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ನೀಡಬೇಕಾದ ಬಡ್ಡಿ ಇದು. ಬ್ಯಾಂಕುಗಳ ಬಡ್ಡಿದರ ಪರಿಷ್ಕರಣೆಗೆ ರೆಪೋ ದರ ಆಧಾರವಾಗಿರುತ್ತದೆ. ಹೀಗಾಗಿ, ರೆಪೋ ದರ ಬಗ್ಗೆ ಆರ್ಬಿಐ ಮಾಡುವ ಘೋಷಣೆಯತ್ತ ಎಲ್ಲರ ಚಿತ್ತ ನೆಟ್ಟಿರುತ್ತದೆ.
ಬಡ್ಡಿದರ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಆರ್ಥಿಕ ಬೆಳವಣಿಗೆಗೆ ಹಿನ್ನಡೆ ಆಗುತ್ತದೆ. ಹೀಗಾಗಿ, ಆರ್ಬಿಐ ಬಡ್ಡಿದರ ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಇದ್ದದ್ದು ಹೌದು. ಆದರೆ, ಅಮೆರಿಕದ ಆರ್ಥಿಕ ಪರಿಸ್ಥಿತಿ ಮತ್ತು ಅಲ್ಲಿನ ವೇತನ ಹೆಚ್ಚಳ ಇತ್ಯಾದಿಯಿಂದಾಗಿ ಆರ್ಬಿಐ ತನ್ನ ಬಡ್ಡಿದರ ಕಡಿತದ ಆಲೋಚನೆಯನ್ನು ಇನ್ನಷ್ಟು ಕಾಲ ಮುಂದಕ್ಕೆ ಹಾಕಬಹುದು. ಎಸ್ಬಿಐ ರಿಸರ್ಚ್ ರಿಪೋರ್ಟ್ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಪ್ಯಾನ್-ಆಧಾರ್ ಲಿಂಕ್ ವಿಳಂಬ: ಸರ್ಕಾರ ಸಂಗ್ರಹಿಸಿದ ದಂಡದ ಮೊತ್ತ 600 ಕೋಟಿ ರೂ
ಆಹಾರ ಮತ್ತು ಇಂಧನ ಹೊರತಾದ ಮುಖ್ಯ ಹಣದುಬ್ಬರ 2021 ಮತ್ತು 2022ರಲ್ಲಿ ಹೆಚ್ಚಿನ ಮಟ್ಟದಲ್ಲಿ (ಶೇ. 6) ಇತ್ತು. 2023ರಲ್ಲಿ ಇದು ಶೇ. 5ಕ್ಕೆ ಇಳಿದಿದೆ. 2023-24ರ ಹಣಕಾಸು ವರ್ಷದಲ್ಲಿ ರೀಟೇಲ್ ಹಣದುಬ್ಬರ ಶೇ. 5.4ರಷ್ಟು ಇರಬಹುದು. 2024-25ರಲ್ಲಿ ಈ ಹಣದುಬ್ಬರ ಶೇ. 4.6ರಿಂದ ಶೇ. 4.8ರಷ್ಟಿರಬಹುದು ಎಂದು ಎಸ್ಬಿಐನ ತಜ್ಞರು ಹೇಳಿದ್ದಾರೆ.
ಆರ್ಬಿಐನ ಎಂಪಿಸಿ ಸಭೆಯಲ್ಲಿ ಈ ಹಣದುಬ್ಬರ, ಜಿಡಿಪಿ ಇತ್ಯಾದಿ ವಿಚಾರಗಳು ಚರ್ಚೆಯಾಗುತ್ತವೆ. ಗವರ್ನರ್ ಶಕ್ತಿಕಾಂತ ದಾಸ್ ಸೇರಿ ಆರು ಮಂದಿ ಸದಸ್ಯರು ಈ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಇದ್ದಾರೆ. ಈ ಆರು ಮಂದಿ ಸಾಕಷ್ಟು ಚರ್ಚೆಗಳನ್ನು ಮಾಡಿ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ. ಫೆಬ್ರುವರಿ 8ರಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬೆಳಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ