Repo Rate: ಮತ್ತೆ ರೆಪೊ ದರ ಹೆಚ್ಚಿಸಿದ ಆರ್​ಬಿಐ, ಇಂದಿನಿಂದಲೇ ಜಾರಿ, ದುಬಾರಿಯಾಗಲಿದೆ ಬಡ್ಡಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 05, 2022 | 10:30 AM

ಈ ದರ ಹೆಚ್ಚಳವು ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದು ಆಗಸ್ಟ್ 2019ರ ಮಟ್ಟದ ರೆಪೊ ದರವಾಗಿದ್ದು, ಕೊವಿಡ್ ಪಿಡುಗು ಕಾಣಿಸಿಕೊಳ್ಳುವ ಮೊದಲಿನ ಹಂತಕ್ಕೆ ರೆಪೊ ದರ ಮುಟ್ಟಿದೆ.

Repo Rate: ಮತ್ತೆ ರೆಪೊ ದರ ಹೆಚ್ಚಿಸಿದ ಆರ್​ಬಿಐ, ಇಂದಿನಿಂದಲೇ ಜಾರಿ, ದುಬಾರಿಯಾಗಲಿದೆ ಬಡ್ಡಿ
ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್
Image Credit source: Hindustan Times
Follow us on

ಮುಂಬೈ: ನಿರೀಕ್ಷೆಯಂತೆಯೇ ಭಾರತೀಯ ರಿಸರ್ವ್​ ಬ್ಯಾಂಕ್ (Reserve Bank of India – RBI) ರೆಪೊ ದರವನ್ನು 50 ಮೂಲಾಂಶಗಳಷ್ಟು (50 bps) ಹೆಚ್ಚಿಸಿದೆ. ರೆಪೊ ದರಗಳನ್ನು ಆರ್​ಬಿಐ ಸತತ ಮೂರನೇ ಬಾರಿ ಹೆಚ್ಚಿಸಿದ್ದು, ಪ್ರಸ್ತುತ ರೆಪೊ ದರಗಳು ಶೇ 5.4ರಷ್ಟು ಇರುತ್ತವೆ. ಈ ದರ ಹೆಚ್ಚಳವು ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದು ಆಗಸ್ಟ್ 2019ರ ಮಟ್ಟದ ರೆಪೊ ದರವಾಗಿದ್ದು, ಕೊವಿಡ್ ಪಿಡುಗು ಕಾಣಿಸಿಕೊಳ್ಳುವ ಮೊದಲಿನ ಹಂತಕ್ಕೆ ರೆಪೊ ದರ ಮುಟ್ಟಿದೆ. ದೇಶಾದ್ಯಂತ ಎಲ್ಲ ಬ್ಯಾಂಕ್​ಗಳಲ್ಲಿಯೂ ಬಡ್ಡಿದರಗಳು ಹೆಚ್ಚಾಗಲಿವೆ.

ಮುಂಬೈನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹಣಕಾಸು ನಿರ್ವಹಣಾ ಸಮಿತಿಯ (Monetary Policy Committee – MPC) ತೀರ್ಮಾನ ಪ್ರಕಟಿಸಿದ ಅವರು, ಪಾಲಿಸಿ ರೆಪೊ ದರ ಹೆಚ್ಚಿಸಿರುವುದನ್ನು ಪ್ರಕಟಿಸಿದರು. ದೇಶದಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗಿರುವುದರಿಂದ ಇಂಥ ಕಠಿಣ ತೀರ್ಮಾನ ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು ಎಂದು ಉದ್ಯಮ ಜಗತ್ತು ಮೊದಲೇ ಅಂದಾಜಿಸಿತ್ತು. ಕೊವಿಡ್ ದೇಶವನ್ನು ವ್ಯಾಪಿಸಿದ ನಂತರ ಆರ್ಥಿಕತೆ ಕುಸಿತದತ್ತ ಸಾಗಿತ್ತು. ಇದನ್ನು ತಡೆಗಟ್ಟಲೆಂದು ಮಾರ್ಚ್ 2020ರಲ್ಲಿ ಆರ್​ಬಿಐ ರೆಪೊ ದರಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿ ಸುಲಭವಾಗಿ ಸಾಲ ಸಿಗುವಂತೆ ಮಾಡಿತ್ತು.

ಇದೀಗ ದೇಶವು ಕೊವಿಡ್​ನಿಂದ ಚೇತರಿಸಿಕೊಂಡಿದ್ದು ಆರ್ಥಿಕತೆಯು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ರಷ್ಯಾ-ಉಕ್ರೇನ್ ಸಂಘರ್ಷ, ಚೀನಾದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಜಗತ್ತು ಹಲವು ಸವಾಲು ಎದುರಿಸುವಂತಾಗಿದೆ. ಇದರ ಪರಿಣಾಮಗಳು ಭಾರತದಲ್ಲಿಯೂ ಗೋಚರವಾಗುತ್ತಿದ್ದು, ಹಣದುಬ್ಬರ ಹೆಚ್ಚಾಗಿದೆ. ಅಗತ್ಯವಸ್ತುಗಳ ಬೆಲೆಏರಿಕೆ ನಿಯಂತ್ರಿಸಬೇಕಾದ ಒತ್ತಡದಲ್ಲಿರುವ ಆರ್​ಬಿಐ ಹಣಕಾಸಿನ ಹರಿವನ್ನು ನಿರ್ಬಂಧಿಸುವ ಮೂಲಕ ಮಾರುಕಟ್ಟೆಯಲ್ಲಿ ನಗದು ಚಲಾವಣೆಗೆ ಕಡಿವಾಣ ಹಾಕಲು ಮುಂದಾಗಿದೆ. ಮೇ 4, 2022ರಲ್ಲಿ ಆರ್​ಬಿಐ ತನ್ನ ವಿಶೇಷಾಧಿಕಾರ ಬಳಸಿ, ಹಠಾತ್ತನೆ ರೆಪೊ ದರಗಳನ್ನು ಹೆಚ್ಚಿಸಿತ್ತು. ಅದಾದ ನಂತರ ಇದು 3ನೇ ರೆಪೊ ದರ ಹೆಚ್ಚಳವಾಗಿದೆ.

ಇಂಗ್ಲಿಷ್​ನಲ್ಲಿ ಸುದ್ದಿ ಓದಲು ಲಿಂಕ್: RBI MPC raises repo rate by 50 bps to 5.40%

Published On - 10:19 am, Fri, 5 August 22