ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರೆಪೋ ದರ ಶೇ 4ರಷ್ಟು ಮತ್ತು ರಿವರ್ಸ್ ರೆಪೋ ದರ ಶೇ 3.35ರಲ್ಲೇ ಮುಂದುವರಿಸುವುದಕ್ಕೆ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ (ಜೂನ್ 4, 2021) ಘೋಷಣೆ ಮಾಡಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಣಕಾಸು ನೀತಿ ಯಥಾ ಸ್ಥಿತಿಯಲ್ಲಿ ಮುಂದುವರಿಯಲಿದ್ದು, ಬ್ಯಾಂಕ್ ದರ ಶೇ 4.25ರಲ್ಲೇ ಇರಲಿದೆ ಎಂದು ಹೇಳಿದ್ದಾರೆ. ಕೊರೊನಾ ಬಿಕ್ಕಟ್ಟು, ಪಿಎಂಐ ದತ್ತಾಂಶ, ಕೊರೊನಾ ಸಂದರ್ಭದಲ್ಲಿ ಕೆಲಸದ ವಾತಾವರಣಕ್ಕೆ ಹೊಂದಾಣಿ ಮತ್ತು ಸಾಮಾನ್ಯ ಮುಂಗಾರಿನ ನಿರೀಕ್ಷೆ ಹಾಗೂ ವಾಸ್ತವ ಜಿಡಿಪಿ 2021-22ರಲ್ಲಿ ಶೇ 9.5ರಷ್ಟು ಆಗುವ ನಿರೀಕ್ಷೆ ಇದೆ ಹಾಗೂ ಸಿಪಿಐ ಹಣದುಬ್ಬರ ಶೇ 5.1ರಷ್ಟು ಆಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ್- 19 ಪರಿಣಾಮದಿಂದ ಹೊರಬರುವ ತನಕ ಅಕಾಮಡೇಟಿವ್ ಸ್ಟ್ಯಾನ್ಸ್ (ಇಳಿಕೆಗೆ ಅವಕಾಶ ಇರುವಂತೆ) ಜತೆಗೆ ಮುಂದುವರಿಯುವುದಕ್ಕೆ ಆರ್ಬಿಐ ಹಣಕಾಸು ನೀತಿ ಸಮಿತಿ (MPC) ನಿರ್ಧಾರ ಮಾಡಿದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರ ಮತ್ತು ಬ್ಯಾಂಕ್ ದರ ಬದಲಾಗದೆ ಶೇ 4.25ರಲ್ಲೇ ಮುಂದುವರಿದಿದೆ. ಎಲ್ಲರಿಗೂ ಸಮಾನವಾಗಿ ನಗದು ಹಂಚಿಕೆ ಆಗಬೇಕು ಎಂಬುದು ರಿಸರ್ವ್ ಬ್ಯಾಂಕ್ ಗಮನ. ಪ್ರೋ ಆ್ಯಕ್ಟಿವ್ ಮತ್ತು ಪ್ರೀ- ಎಂಪ್ಟಿವ್ ಧೋರಣೆಯು ಆರ್ಥಿಕತೆಯು ಮರಳಿ ಬೆಳವಣಿಗೆಯತ್ತ ಸಾಗುವುದಕ್ಕೆ ಅತಿ ಮುಖ್ಯವಾದ್ದು. ರೂ. 36,545 ಕೋಟಿ ನಗದು ಕೈಗಾರಿಕೆಗಳಿಗೆ ಪೂರೈಸಲಾಗಿದೆ. ಸರ್ಕಾರದ ಸೆಕ್ಯೂರಿಟೀಸ್ 1.0 ಅಡಿಯಲ್ಲಿ (G- Sec) ರೂ. 40,000 ಕೋಟಿ ಮೌಲ್ಯದ ಖರೀದಿ ನಡೆಸಲಾಗುವುದು. G-SAP 2.0 1.2 ಲಕ್ಷ ಕೋಟಿ ಮೌಲ್ಯದ್ದನ್ನು FY22 ಎರಡನೇ ತ್ರೈಮಾಸಿಕದಲ್ಲಿ ಮಾರುಕಟ್ಟೆ ಬೆಂಬಲಕ್ಕೆ ಮಾಡಲಾಗುವುದು. ಆರ್ಬಿಐ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸಕ್ರಿಯವಾಗಿದೆ. ಹಣಕಾಸು ಮಾರುಕಟ್ಟೆ ಗಟ್ಟಿಯಾಗುವುದು ಕೊರೊನಾ ವಿರುದ್ಧ ಹೋರಾಟಕ್ಕೆ ಮುಖ್ಯ ಎಂದು ಅವರು ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ವಾಣಿಜ್ಯ ಬ್ಯಾಂಕ್ಗಳಿಗೆ ನೀಡುವ ಸಾಲಕ್ಕೆ ರೆಪೋ ದರ ಎನ್ನಲಾಗುತ್ತದೆ. ಇನ್ನು ವಾಣಿಜ್ಯ ಬ್ಯಾಂಕ್ಗಳಿಂದ ರಿಸರ್ವ್ ಬ್ಯಾಂಕ್ನಲ್ಲಿ ಇಡುವ ಹಣಕ್ಕೆ ದೊರೆಯುವ ದರಕ್ಕೆ ರಿವರ್ಸ್ ರೆಪೋ ದರ ಎನ್ನಲಾಗುತ್ತದೆ. ಇವೆರಡರಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಆ ಕಾರಣಕ್ಕೆ ಬ್ಯಾಂಕ್ಗಳ ವಾಹನ ಸಾಲ, ಗೃಹ ಸಾಲದ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಸಾಲದ ಮೇಲಿನ ಬಡ್ಡಿ ದರದಲ್ಲಿ ಕಡಿಮೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಯಥಾ ಸ್ಥಿತಿ ಉಳಿಸಿಕೊಳ್ಳಲಾಗಿದೆ. 2021-22ರಲ್ಲಿ ಜಿಡಿಪಿ ದರ ಶೇ 9.5ರಷ್ಟು ಆಗಬಹುದು ಎಂಬ ಅಂದಾಜಿದ್ದು, 2022ರಲ್ಲಿ ಚಿಲ್ಲರೆ ಹಣದುಬ್ಬರ ದ ಶೇ 5.1ರಷ್ಟು ಆಗುವ ಅಂದಾಜಿದೆ.
ಇದನ್ನೂ ಓದಿ: ಕೋವಿಡ್- 19ರ ಎರಡನೇ ಅಲೆ ಎಷ್ಟು ಬೇಗ ತಡೆಯುತ್ತೇವೋ ಅದರ ಮೇಲೆ ಆಧಾರವಾಗಿದೆ ಭಾರತದ ಬೆಳವಣಿಗೆ: ಆರ್ಬಿಐ
(RBI repo rate and reverse repo rate unchanged in 2021 June, announced by RBI gocernor Shakthikant Das)
Published On - 11:36 am, Fri, 4 June 21