ನವದೆಹಲಿ, ಅಕ್ಟೋಬರ್ 8: ಭಾರತೀಯ ರಿಸರ್ವ್ ಬ್ಯಾಂಕ್ ಪ್ರತೀ ಎರಡು ತಿಂಗಳಿಗೊಮ್ಮೆ ನಡೆಸುವ ಮಾನಿಟರಿ ಪಾಲಿಸಿ ಕಮಿಟಿ ಸಭೆ ನಿನ್ನೆ ಸೋಮವಾರ ಆರಂಭವಾಗಿದೆ. ಮೂರು ದಿನ ನಡೆಯುವ ಈ ಸಭೆಯಲ್ಲಿ ನಿನ್ನೆ ಮತ್ತು ಇಂದು ಪ್ರಮುಖ ಸಂಗತಿಗಳ ಚರ್ಚೆಯಾಗುತ್ತದೆ. ನಾಳೆ ಬುಧವಾರ ಬೆಳಗ್ಗೆ 10 ಗಂಟೆಗೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದು ಸಭೆಯ ನಿರ್ಧಾರಗಳನ್ನು ಪ್ರಕಟಗೊಳಿಸಲಿದ್ದಾರೆ.
ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ, ಹಣಕಾಸು ಸ್ಥಿತಿ ಹೇಗಿದೆ, ಹಣದುಬ್ಬರ, ಜಿಡಿಪಿ ಇತ್ಯಾದಿ ಹೇಗಿವೆ, ಇವೆಲ್ಲವನ್ನೂ ಅವಲೋಕಿಸಲಾಗುತ್ತದೆ. ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಯಾವ ಹಣಕಾಸು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಚರ್ಚಿಸಿ ನೀತಿ ರೂಪಿಸಲಾಗುತ್ತದೆ. ಇದು ಈ ಎಂಪಿಸಿ ಸಭೆಯ ಪ್ರಮುಖ ಉದ್ದೇಶ. ಹೆಚ್ಚಿನ ಜನರ ಗಮನ ಇರುವುದು ರೆಪೋ ದರ ಅಥವಾ ಬಡ್ಡಿದರದ ಬಗ್ಗೆ ಎಂಪಿಸಿ ತೆಗೆದುಕೊಳ್ಳುವ ನಿರ್ಧಾರದತ್ತ.
ಸದ್ಯ ಬಡ್ಡಿದರ ಶೇ. 6.5ರಷ್ಟಿದೆ. ಕಳೆದ ಒಂದೂವರೆ ವರ್ಷದಿಂದ ಈ ದರದಲ್ಲಿ ಬದಲಾವಣೆ ಆಗಿಲ್ಲ. ಹಿಂದಿನ ಒಂಬತ್ತು ಸಭೆಗಳಲ್ಲಿ ಯಥಾಸ್ಥಿತಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಾರಿಯ ಸಭೆಯಲ್ಲೂ ಇದೇ ಯಥಾಸ್ಥಿತಿ ಮುಂದುವರಿಯುವ ನಿರೀಕ್ಷೆ ಇದೆ. ಡಿಸೆಂಬರ್ನಲ್ಲಿ ನಡೆಯುವ ಸಭೆಯಲ್ಲಿ ಬಡ್ಡಿದರ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಒಟ್ಟು ಆರು ಸದಸ್ಯರಿರುತ್ತಾರೆ. ಮೂವರು ಸದಸ್ಯರು ಆರ್ಬಿಐನ ಒಳಗಿನವರೇ ಆಗಿರುತ್ತಾರೆ. ಇತರ ಮೂವರು ಸದಸ್ಯರು ಹೊರಗಿನವರಾಗಿರುತ್ತಾರೆ.
ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್, ಡೆಪ್ಯುಟಿ ಗವರ್ನರ್ ಮೈಕೇಲ್ ದೇವವ್ರತಾ ಪಾತ್ರ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಜೀವ್ ರಂಜನ್ ಅವರು ಆರ್ಬಿಐ ಅನ್ನು ಪ್ರತಿನಿಧಿಸುವ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಷೇರುಗಳ ಮೇಲೆ ಹೂಡಿಕೆ: ಪಿಇ ರೇಶಿಯೋ ಮಾನದಂಡ ಬಳಸಿ ಷೇರಿನ ನಿಜಮೌಲ್ಯ ತಿಳಿಯಿರಿ
ಸೌಗತ ಭಟ್ಟಾಚಾರ್ಯ, ಡಾ. ನಾಗೇಶ್ ಕುಮಾರ್ ಮತ್ತು ಪ್ರೊಫೆಸರ್ ರಾಮ್ ಸಿಂಗ್ ಅವರು ಹೊಸದಾಗಿ ಎಂಪಿಸಿಗೆ ನೇಮಕವಾದ ಬಾಹ್ಯ ಸದಸ್ಯರಾಗಿದ್ದಾರೆ.
ಸೌಗತ ಭಟ್ಟಾಚಾರ್ಯ ಅವರು ಆರ್ಥಿಕ ತಜ್ಞರಾಗಿದ್ದಾರೆ. ಡಾ. ನಾಗೇಶ್ ಅವರು ಇನ್ಸ್ಟಿಟ್ಯೂಟ್ ಫಾರ್ ಸ್ಟಡೀಸ್ ಇನ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಪ್ರೊ. ರಾಮ್ ಸಿಂಗ್ ಅವರು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ನ ಡೈರೆಕ್ಟರ್ ಆಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ