ಪಿಎಂ ಇಂಟರ್ನ್ಶಿಪ್ ಸ್ಕೀಮ್; ಟಾಪ್ ಕಂಪನಿಗಳಲ್ಲಿ ತರಬೇತಿ, ಜೊತೆಗೆ ವರ್ಷಕ್ಕೆ 66,000 ರೂ ಕೊಡುಗೆ; ಶಿಕ್ಷಣ, ವಯಸ್ಸು ಇತ್ಯಾದಿ ಅರ್ಹತೆಗಳ ವಿವರ
PM Internship scheme updates: ಪಿಎಂ ಇಂಟರ್ನ್ಶಿಪ್ ಯೋಜನೆಯಲ್ಲಿ ಒಂದು ಕೋಟಿ ಯುವಕರನ್ನು ಉದ್ಯೋಗಕ್ಕೆ ಅಣಿಗೊಳಿಸುವ ಗುರಿ ಇಡಲಾಗಿದೆ. 21 ವರ್ಷದಿಂದ 24 ವರ್ಷದೊಳಗಿನ ವಯಸ್ಸಿನ, ಹಾಗೂ ಇನ್ನೂ ಉದ್ಯೋಗಕ್ಕೆ ಸೇರದ ಯುವಕ ಮತ್ತು ಯುವತಿಯರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಈ ಸ್ಕೀಮ್ ತರಲಾಗಿದೆ. ಟಾಪ್ 500 ಕಂಪನಿಗಳಲ್ಲಿ ಇಂಟರ್ನ್ ಮಾಡಬಹುದಾಗಿದ್ದು, ತಿಂಗಳಿಗೆ 5,000 ರೂವರೆಗೆ ಸ್ಟೈಪೆಂಡ್ ಕೂಡ ಸಿಗುತ್ತದೆ.
ನವದೆಹಲಿ, ಅಕ್ಟೋಬರ್ 8: ದೇಶದ ಯುವಕರಲ್ಲಿ ಕೌಶಲ್ಯಾಭಿವೃದ್ಧಿಗೊಳಿಸಿ ಉದ್ಯೋಗಾವಕಾಶ ಹೆಚ್ಚಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರ ಪಿಎಂ ಇಂಟರ್ನ್ಶಿಪ್ ಸ್ಕೀಮ್ ಅನ್ನು ಆರಂಭಿಸಿದೆ. ಓದು ಮುಗಿಸಿ ಇನ್ನೂ ಕೆಲಸಕ್ಕೆ ಸೇರದ ಯುವಕ ಮತ್ತು ಯುವತಿಯರಿಗೆ ಅಗ್ರಮಾನ್ಯ ಕಂಪನಿಗಳಲ್ಲಿ ಇಂಟರ್ನ್ ಆಗಿ ತರಬೇತಿ ಪಡೆಯುವ ಅವಕಾಶ ನೀಡಲಾಗಿದೆ. ಒಂದು ವರ್ಷದ ಇಂಟರ್ನ್ಶಿಪ್ನಲ್ಲಿ ಸರ್ಕಾರದಿಂದ ಸ್ಟೈಪೆಂಡ್ ನೀಡಲಾಗುತ್ತದೆ. ಕಂಪನಿಗಳೂ ಕೂಡ ತರಬೇತಿ ಜೊತೆಗೆ ಪ್ರತೀ ತಿಂಗಳು ಹಣ ನೀಡುತ್ತವೆ. ಇಂಟರ್ನ್ಗಳಿಗೆ ತರಬೇತಿ, ಸಹಾಯಧನದ ಜೊತೆಗೆ ಇನ್ಷೂರೆನ್ಸ್ ಸೌಲಭ್ಯವನ್ನೂ ಒದಗಿಸಲಾಗುತ್ತದೆ.
ಪಿಎಂ ಇಂಟರ್ನ್ಶಿಪ್ ಯೋಜನೆಯಲ್ಲಿ ಒಂದು ಕೋಟಿ ಯುವಕ ಮತ್ತು ಯುವತಿಯರಿಗೆ ಕೆಲಸದ ತರಬೇತಿ ಕೊಡುವ ಗುರಿ ಇದೆ. ದೇಶದ ಟಾಪ್-500 ಕಂಪನಿಗಳಲ್ಲಿ ತರಬೇತಿ ಸಿಗಲಿದೆ. ಇಲ್ಲಿ ಯಾರಿಗೂ ಕಡ್ಡಾಯವಲ್ಲ. ಕಾರ್ಪೊರೇಟ್ ಸಂಸ್ಥೆಗಳು ಇಂಟರ್ನ್ಗಳನ್ನು ತೆಗೆದುಕೊಳ್ಳುವುದು ಬಿಡುವುದು ಅವರ ಐಚ್ಛಿಕ. ಈಗಾಗಲೇ 50 ಕಂಪನಿಗಳು ಯೋಜನೆಯಲ್ಲಿ ನೊಂದಾಯಿಸಿಕೊಂಡಿವೆ. ಒಟ್ಟು ಸದ್ಯ ನೂರಕ್ಕೂ ಹೆಚ್ಚು ಕಂಪನಿಗಳು ಆಸಕ್ತಿ ತೋರಿವೆ.
ಪಿಎಂ ಇಂಟರ್ನ್ಶಿಪ್ ಯೋಜನೆಗೆ ಪ್ರತ್ಯೇಕ ಪೋರ್ಟಲ್ವೊಂದನ್ನು ಅಭಿವೃದ್ದಿಪಡಿಸಲಾಗಿದೆ. ಅದರ ವಿಳಾಸ ಇಂತಿದೆ: pminternship.mca.gov.in
ಇಲ್ಲಿ ಸದ್ಯ ಕಂಪನಿಗಳಿಗೆ ನೊಂದಾಯಿಸಲು ಅವಕಾಶ ಇದೆ. ಶೀಘ್ರದಲ್ಲೇ ಅಭ್ಯರ್ಥಿಗಳ ನೊಂದಾವಣಿಗೆ ಅವಕಾಶ ಮಾಡಿಕೊಡಲಾಗುತ್ತದೆ.
ಪಿಎಂ ಇಂಟರ್ನ್ಶಿಪ್ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
- ಪಿಎಂ ಇಂಟರ್ನ್ಶಿಪ್ ಯೋಜನೆಗೆ ಕನಿಷ್ಠ ವಯಸ್ಸು 21 ವರ್ಷ. ಗರಿಷ್ಠ ವಯಸ್ಸು 24 ವರ್ಷ.
- ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಇದೆ. ಪಿಯುಸಿ, ಐಟಿಐ, ಡಿಪ್ಲೊಮಾ, ಡಿಗ್ರಿ (ಬಿಎ, ಬಿಎಸ್ಸಿ, ಬಿಬಿಎ ಇತ್ಯಾದಿ) ಓದಿರುವವರೂ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಡೆಲಿವರಿ ಬಾಯ್ ಕೆಲಸದಲ್ಲಿ ಜೊಮಾಟೊ ಸಿಇಒ; ಲಿಫ್ಟ್ ಬಳಸಲು ಬಿಡದ ಮಾಲ್ ಸೆಕ್ಯೂರಿಟಿ
ಪಿಎಂ ಇಂಟರ್ನ್ಶಿಪ್ ಯೋಜನೆಗೆ ಇವರು ಅರ್ಹರಿರುವುದಿಲ್ಲ….
- ಈಗಾಗಲೇ ಪೂರ್ಣಾವಧಿಯಾಗಿ ಕೆಲಸ ಮಾಡುತ್ತಿರುವಂತಿಲ್ಲ.
- ಪೂರ್ಣಾವಧಿ ವಿದ್ಯಾಭ್ಯಾಸದಲ್ಲಿ ತೊಡಗಿರುವಂತಿಲ್ಲ.
- ಸಿಎ, ಎಂಬಿಬಿಎಸ್, ಎಂಬಿಎ ಇತ್ಯಾದಿ ಉನ್ನತ ವ್ಯಾಸಂಗ ಅಥವಾ ವೃತ್ತಿಪರ ಕೋರ್ಸ್ ಮಾಡಿರುವಂತಿಲ್ಲ
- ಐಐಟಿ, ಐಐಎಂ, ಎನ್ಐಡಿ ಇತ್ಯಾದಿ ಪ್ರತಿಷ್ಠಿ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಡೆದಿರುವಂತಿಲ್ಲ.
- ಕುಟುಂಬದ ಯಾವ ಸದಸ್ಯರ ಆದಾಯವು ವರ್ಷಕ್ಕೆ 8 ಲಕ್ಷ ರೂಗಿಂತ ಹೆಚ್ಚಿರುವಂತಿಲ್ಲ
- ಕುಟುಂಬದಲ್ಲಿ ಯಾರೊಬ್ಬರೂ ಕೂಡ ಸರ್ಕಾರಿ ಉದ್ಯೋಗಿಯಾಗಿರುವಂತಿಲ್ಲ.
ಇಂಟರ್ನ್ ಆದರೆ ಏನು ಉಪಯೋಗ?
- ಪಿಎಂ ಇಂಟರ್ನ್ಶಿಪ್ ಯೋಜನೆಗೆ ನೀವು ಆಯ್ಕೆಯಾದರೆ ಹಲವು ಪ್ರಯೋಜನಗಳಿವೆ.
- ಕಂಪನಿಗಳಲ್ಲಿ ನೈಜ ಕೆಲಸದ ವಾತಾವರಣದಲ್ಲಿ ಕೆಲಸ ಮಾಡಿದ ಅನುಭವ ಸಿಗುತ್ತದೆ. ಕೆಲಸಕ್ಕೆ ಬೇಕಾದ ನೈಜ ಕೌಶಲ್ಯ ಸಿಗುತ್ತದೆ.
- ಇಂಟರ್ನ್ ಆದವರಿಗೆ ಸರ್ಕಾರವು ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ, ಪಿಎಂ ಸುರಕ್ಷಾ ಬಿಮಾ ಯೋಜನೆಗೆ 6,000 ರೂ ಒದಗಿಸುತ್ತದೆ.
- ಅಭ್ಯರ್ಥಿಗೆ ಪ್ರತೀ ತಿಂಗಳು 4,500 ರೂ ಸ್ಟೈಪೆಂಡ್ ನೀಡುತ್ತದೆ.
- ಕಂಪನಿ ವತಿಯಿಂದಲೂ ಅಭ್ಯರ್ಥಿಗೆ ತಿಂಗಳಿಗೆ 500 ರೂ ಸಿಗುತ್ತದೆ. ಒಟ್ಟು ತಿಂಗಳಿಗೆ 6,000 ರೂ ಸಿಗುತ್ತದೆ.
- ಇಂಟರ್ನ್ಶಿಪ್ ಅವಧಿ 12 ತಿಂಗಳು ಇರುತ್ತದೆ. ಅಭ್ಯರ್ಥಿಗೆ ಈ ಒಂದು ವರ್ಷದಲ್ಲಿ 66,000 ರೂ ಸಹಾಯಧನ ಸಿಕ್ಕಂತಾಗುತ್ತದೆ.
- ಇಂಟರ್ನ್ಶಿಪ್ ಅವಧಿಯಲ್ಲಿ ಕನಿಷ್ಠ ಶೇ. 50ರಷ್ಟು ಸಮಯ ಕಂಪನಿಯ ಕೆಲಸಗಳಲ್ಲಿ ತೊಡಗಿರಬೇಕು ಎನ್ನುವ ನಿಯಮ ಇದೆ. ತರಬೇತಿ ವೇಳೆ ಅಗತ್ಯಬಿದ್ದರೆ ತರಗತಿಗಳೂ ಇರುತ್ತವೆ.
ಇದನ್ನೂ ಓದಿ: ‘ಭಾರತದಲ್ಲಿ ಶನಿವಾರ, ಭಾನುವಾರ ರಜೆಯ ಕಾನ್ಸೆಪ್ಟೇ ಇರಲಿಲ್ಲ, ಇದೆಲ್ಲಾ ಪಾಶ್ಚಿಮಾತ್ಯದ ಎರವಲು’: ಟ್ರೋಲ್ ಆದ ಒಲಾ ಸಿಇಒ
ಒಂದು ವರ್ಷದ ಬಳಿಕ ಏನಾಗುತ್ತದೆ?
ಇಂಟರ್ನ್ಶಿಪ್ ಅವಧಿ ಒಂದು ವರ್ಷ ಇರುತ್ತದೆ. ಅದಾದ ಬಳಿಕ ಕಂಪನಿಗಳು ತಮಗೆ ಸೂಕ್ತ ಎನಿಸುವ ಅಭ್ಯರ್ಥಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಬಹುದು. ಅದು ಕಂಪನಿಗಳಿಗೆ ಇರುವ ಆಯ್ಕೆ. ಒಂದು ವೇಳೆ ಕೆಲಸಕ್ಕೆ ಆಯ್ಕೆ ಆಗದೇ ಹೋದರೂ ಅಭ್ಯರ್ಥಿಗಳಿಗೆ ನೈಜ ಕೆಲಸದ ಅನುಭವ ಸಿಗುತ್ತದೆ. ಇಂಟರ್ನ್ಶಿಪ್ ಮಾಡಿದ ಪ್ರಮಾಣಪತ್ರವೂ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ