AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ ಸರೋಜಾದೇವಿಗೆ ನುಡಿ-ನಮನ: ನೆನಪುಗಳ ಬುತ್ತಿ ಬಿಚ್ಚಿದ ಕಲಾವಿದರು

B Sarojadevi: ಭಾರತೀಯ ಚಿತ್ರರಂಗದ ಮೇರು ನಟಿ ಬಿ ಸರೋಜಾದೇವಿ ಅವರು ಕೆಲ ದಿನಗಳ ಹಿಂದಷ್ಟೆ ನಿಧನ ಹೊಂದಿದರು. ಇತ್ತೀಚೆಗಷ್ಟೆ ಕಲಾವಿದರ ಭವನದಲ್ಲಿ ಬಿ ಸರೋಜಾದೇವಿ ಅವರ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಲವು ಕಲಾವಿದರು ಭಾಗಿ ಆಗಿದ್ದರು.

ಬಿ ಸರೋಜಾದೇವಿಗೆ ನುಡಿ-ನಮನ: ನೆನಪುಗಳ ಬುತ್ತಿ ಬಿಚ್ಚಿದ ಕಲಾವಿದರು
Rockline
ಮಂಜುನಾಥ ಸಿ.
|

Updated on: Aug 10, 2025 | 11:14 PM

Share

ನಟಿ, ಅಭಿನಯ ಸರಸ್ವತಿ, ಪದ್ಮಭೂಷಣ ಬಿ ಸರೋಜಾದೇವಿ ಅವರು ಕಳೆದ ತಿಂಗಳು ಇಹಲೋಕ ತ್ಯಜಿಸಿದರು. ಇತ್ತೀಚೆಗಷ್ಟೆ ಕಲಾವಿದರ ಸಂಘದಲ್ಲಿ ಸರೋಜಾದೇವಿ ಅವರ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡ, ತೆಲುಗು, ತಮಿಳು ಚಿತ್ರರಂಗದ ಕೆಲವು ಕಲಾವಿದರು, ತಂತ್ರಜ್ಞರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ‘ಕಲಾವಿದರ ಸಂಘದ ಈ ಕಟ್ಟಡ ನಿರ್ಮಾಣ ಆಗಲು ಸರೋಜಮ್ಮನವರ ಶ್ರಮ ಬಹಳ ಇದೆ. ಇದೇ ಕಾರಣಕ್ಕೆ ಈ ಕಟ್ಟಡಲ್ಲಿಯೇ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ನೆರೆಯ ಚಿತ್ರರಂಗದ ನಟರಾದ ನಾಸರ್, ಕಲಾವತಿ ಇನ್ನೂ ಕೆಲವರು ಆಗಮಿಸಿದ್ದಾರೆ. ಕಲಾವಿದರ ಭವನ ಕಟ್ಟುವುದು ರಾಜ್ ಕುಮಾರ್ ಅವರ ಕನಸಾಗಿತ್ತು. ಅದನ್ನು ಅಂಬರೀಶ್ ಅವರು ಈಡೇರಿಸಿದರು. ಈ ಭವನ ಕಟ್ಟುವ ಸಮಿತಿಯಲ್ಲಿ ಸರೋಜಾದೇವಿ ಅವರು ಅಧ್ಯಕ್ಷರಾಗಿದ್ದರು’ ಎಂದು ನೆನಪು ಮಾಡಿಕೊಂಡರು. ಇದೇ ಸಮಯದಲ್ಲಿ ತಮ್ಮ ಹಾಗೂ ಸರೋಜಾದೇವಿ ನಡುವೆ ಇದ್ದ ಬಾಂಧವ್ಯವನ್ನು ನೆನೆದು ಭಾವುಕರಾದರು.

ಮಾಜಿ ಸಂಸದೆ, ನಟಿ ಸುಮಲಾತಾ ಅಂಬರೀಶ್ ಮಾತನಾಡಿ, ‘ಸರೋಜಮ್ಮನವರದ್ದು ಬಹುದೊಡ್ಡ ಸಾಧನೆ, ಅವರ ಬಗ್ಗೆ ಮಾತನಾಡಲು ನಾವು ಚಿಕ್ಕವರು. ಅವರ ಸಾಧನೆ ಅನನ್ಯ, ಇಂದಿಗೂ ದೇಶ ವಿದೇಶಗಳಲ್ಲೂ ಅವರ ಹಾಡುಗಳನ್ನು ಇಷ್ಟ ಪಡುತ್ತಾರೆ. ದೊಡ್ಡ ವ್ಯಕ್ತಿತ್ವದವರಾದರೂ ಮಗುವಿನಂತೆ ಇರುತ್ತಿದ್ದರು. ಅಂಬರೀಶ್ ಅವರೊಟ್ಟಿಗೆ ಆತ್ಮೀಯ ಬಂಧ ಹೊಂದಿದ್ದರು. ಅಂಬರೀಶ್ ಅವರನ್ನು ಸಹೋದರನ ರೀತಿ ಭಾವಿಸಿದ್ದರು. ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಅವರು ಅದ್ಭುತವಾಗಿ ನಿಭಾಯಿಸಿದರು. ಇದು ಈಗಿನ ನಟಿಯರಿಗೆ ಮಾದರಿ ಆಗಬೇಕು. ಈ ಕಲಾವಿದರ ಭವನ ನಿರ್ಮಾಣ ಮಾಡಲು ರಾಜಕುಮಾರ್ ಹಾಗೂ ಅಂಬರೀಶ್ ಅವರಂತೆಯೇ ಸರೋಜಾದೇವಿ ಅವರ ಶ್ರಮ ಕೂಡ ಇದೆ. ಇಡೀ ದೇಶದಲ್ಲಿ ಇಂಥಹದ್ದೊಂದು ಅದ್ಭುತವಾದ ಭವನ ಇಲ್ಲ ಎಂದರು.

ಇದನ್ನೂ ಓದಿ:ಉಪೇಂದ್ರ ಹೀರೋ ಆಗಲು ಕಾರಣವಾಗಿದ್ದೇ ಬಿ. ಸರೋಜಾದೇವಿ; ಆ ಘಟನೆ ನೆನೆದ ರಿಯಲ್ ಸ್ಟಾರ್

ಖ್ಯಾತ ಪೋಷಕ ನಟ, ಬಹುಭಾಷಾ ತಾರೆ ನಾಸರ್ ಅವರು ಸರೋಜಾದೇವಿ ಬಗ್ಗೆ ಅವರ ಅಭಿಪ್ರಾಯಗಳನ್ನು ನೆನಪುಗಳನ್ನು ಸಭೆಯಲ್ಲಿ ಹಂಚಿಕೊಂಡರು. ಇನ್ನೂ ಕೆಲವು ಕಲಾವಿದರು ಸರೋಜಾದೇವಿ ಅವರ ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ಬಿ ಸರೋಜಾದೇವಿ ಅವರ ಜೀವನ, ಸಿನಿಮಾಗಳಿಗೆ ಸಂಬಂಧಿಸಿದ ವಿಡಿಯೋ ಪ್ರದರ್ಶನ ಸಹ ಮಾಡಲಾಯ್ತು.

ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು , ನಟಿ ಅನು ಪ್ರಭಾಕರ್, ನಟ ರಘು ಮುಖರ್ಜಿ, ನಟ ನೆನಪಿರಲಿ ಪ್ರೇಮ್, ನಟ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು, ನಟ ಸುಂದರರಾಜ್, ಹಿರಿಯ ನಟಿ ಗಿರಿಜಾ ಲೋಕೇಶ್ ಇನ್ನೂ ಹಲವರು ಭಾಗಿ ಆಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ