ಡೆಲಿವರಿ ಬಾಯ್ ಕೆಲಸದಲ್ಲಿ ಜೊಮಾಟೊ ಸಿಇಒ; ಲಿಫ್ಟ್ ಬಳಸಲು ಬಿಡದ ಮಾಲ್ ಸೆಕ್ಯೂರಿಟಿ

Zomato CEO Deepinder Goyal as delivery boy: ಕಂಪನಿಯ ಅತ್ಯಂತ ತಳಮಟ್ಟದಲ್ಲಿ ಕೆಲಸ ಮಾಡುವ ಡೆಲಿವರಿ ಪಾರ್ಟ್ನರ್​ಗಳ ಕಷ್ಟಸುಖಗಳನ್ನು ಖುದ್ದಾಗಿ ಅರಿಯಲು ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ತಮ್ಮ ಪತ್ನಿ ಜೊತೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ಧಾರೆ. ಈ ವೇಳೆ ದೆಹಲಿ ಸಮೀಪದ ಗುರುಗ್ರಾಮ್​ನ ಏಂಬಿಯನ್ಸ್ ಮಾಲ್​ನಲ್ಲಿ ಆದ ಅನುಭವವೊಂದನ್ನು ಅವರು ಹಂಚಿಕೊಂಡಿದ್ದಾರೆ.

ಡೆಲಿವರಿ ಬಾಯ್ ಕೆಲಸದಲ್ಲಿ ಜೊಮಾಟೊ ಸಿಇಒ; ಲಿಫ್ಟ್ ಬಳಸಲು ಬಿಡದ ಮಾಲ್ ಸೆಕ್ಯೂರಿಟಿ
ದೀಪಿಂದರ್ ಗೋಯಲ್
Follow us
|

Updated on: Oct 07, 2024 | 12:58 PM

ನವದೆಹಲಿ, ಅಕ್ಟೋಬರ್ 7: ಹಿಂದೆಲ್ಲಾ ರಾಜ ಮಹಾರಾಜರು ಸಾಮಾನ್ಯ ಪ್ರಜೆಯ ಹಾಗೆ ಮಾರುವೇಷ ಹಾಕಿಕೊಂಡು ತಮ್ಮ ನಾಡಿನ ಸಮಸ್ಯೆಗಳನ್ನು ತಿಳಿಯಲು ಯತ್ನಿಸುತ್ತಿದ್ದರು. ಕಾರ್ಪೊರೇಟ್ ಕಂಪನಿಗಳಲ್ಲೂ ಕೆಲ ಎಕ್ಸಿಕ್ಯೂಟಿವ್​ಗಳು ಇಂಥ ಕೆಲಸ ಮಾಡುವುದು ಇದೆ. ಕೆಫೆ ಕಾಫಿ ಡೇ ಸಂಸ್ಥಾಪಕರಾಗಿದ್ದ ದಿವಂಗತ ಸಿದ್ಧಾರ್ಥ್ ಹೆಗ್ಡೆ ಸಾಮಾನ್ಯರ ಹಾಗೆ ಯಾವುದಾದರೂ ಕಾಫಿ ಡೇ ಯೂನಿಟ್​ಗೆ ಹೋಗಿ ಕಾಫಿ ಕುಡಿದು ಬರುತ್ತಿದ್ದರಂತೆ. ಇಂಥವರ ಪಟ್ಟಿಗೆ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಅವರನ್ನೂ ಸೇರಿಸಬಹುದು. ಜೊಮಾಟೊ ಬಿಸಿನೆಸ್​ನ ಪ್ರಮುಖ ಭಾಗವಾಗಿರುವ ಡೆಲಿವರಿ ಬಾಯ್​ಗಳ ಕಷ್ಟ ಏನೆಂದು ಖುದ್ದಾಗಿ ತಿಳಿಯಲು ದೀಪಿಂದರ್ ಗೋಯಲ್ ತಾವೇ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾರೆ. ಈ ವೇಳೆ ಆದ ಕೆಲ ಅನುಭವಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಗುರುಗ್ರಾಮ್​ನ ಪ್ರತಿಷ್ಠಿತ ಏಂಬಿಯನ್ಸ್ ಮಾಲ್​ಗೆ ಹೋಗಿದ್ದಾಗಿನ ಒಂದು ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ತಮ್ಮ ಎರಡನೇ ಪತ್ನಿ ಗ್ರೇಷಿಯಾ ಮುನೋಜ್ ಜೊತೆ ಸೇರಿ ಡೆಲಿವರಿ ಬಾಯ್​ನಂತೆ ಏಂಬಿಯನ್ಸ್ ಮಾಲ್​ಗೆ ಹೋಗಿದ್ದರು. ಅಲ್ಲಿ ಹಲ್ದೀರಾಮ್ ಸ್ಟೋರ್​ನಿಂದ ಆರ್ಡರ್ ಕಲೆಕ್ಟ್ ಮಾಡಲು ಲಿಫ್ಟ್ ಅಥವಾ ಎಲಿವೇಟರ್ ಬಳಸಲು ಹೋಗುತ್ತಾರೆ. ಅಲ್ಲಿದ್ದ ಸೆಕ್ಯೂರಿಟಿಯವರು ತಡೆದು, ಮೆಟ್ಟಿಲುಗಳ ಮೂಲಕ ಹೋಗುವಂತೆ ಸೂಚಿಸುತ್ತಾರೆ.

ಇದನ್ನೂ ಓದಿ: ಅಂದು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಡಾಕ್ಟರ್​​; ಬಡತನ ಗೆದ್ದ ಸ್ಫೂರ್ತಿದಾಯಕ ಕಥೆ

ದೀಪಿಂದರ್ ಗೋಯಲ್ ಸ್ಟೇರ್ ಕೇಸ್ ಬಳಸಿ ಹಲ್ದೀರಾಮ್ಸ್ ಇದ್ದ 3ನೇ ಫ್ಲೋರ್​ಗೆ ಹೋಗುತ್ತಾರೆ. ಡೆಲಿವರಿ ಹುಡುಗರು ಸ್ಟೇರ್​ಕೇಸ್​ಗೆ ಮಾತ್ರ ಸೀಮಿತ ಇರಬೇಕು. ಮಾಲ್​ನೊಳಗೆ ಪ್ರವೇಶ ಇಲ್ಲ ಎನ್ನುವ ವಿಚಾರ ಜೊಮಾಟೊ ಸಿಇಒಗೆ ತಿಳಿಯುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಸ್ಟೇರ್​ಕೇಸ್​ನಲ್ಲಿ ಕೂತು ಇತರ ಡೆಲಿವರಿ ಬಾಯ್​ಗಳೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು.

ಮಾಲ್​ಗಳೊಂದಿಗೆ ಮಾತನಾಡಬೇಕು ಎಂದ ಸಿಇಒ

ಎಲ್ಲಾ ಡೆಲಿವರಿ ಪಾರ್ಟ್ನರ್​ಗಳ ಕೆಲಸವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಮಾಲ್​ಗಳ ಜೊತೆ ನಿಕಟವಾಗಿ ಕೆಲಸ ಮಾಡುವ ಅಗತ್ಯತೆ ಇರುವುದು ಅರಿವಿಗೆ ಬಂತು. ಡೆಲಿವರಿ ಪಾರ್ಟ್ನರ್ಸ್ ವಿಚಾರದಲ್ಲಿ ಮಾಲ್​ಗಳೂ ಕೂಡ ಹೆಚ್ಚು ಮಾನವೀಯ ಕಾಳಜಿ ತೋರಬೇಕು ಎಂದು ದೀಪಿಂದರ್ ಗೋಯಲ್ ತಮ್ಮ ಎಕ್ಸ್ ಅಕೌಂಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ‘ಭಾರತದಲ್ಲಿ ಶನಿವಾರ, ಭಾನುವಾರ ರಜೆಯ ಕಾನ್ಸೆಪ್ಟೇ ಇರಲಿಲ್ಲ, ಇದೆಲ್ಲಾ ಪಾಶ್ಚಿಮಾತ್ಯದ ಎರವಲು’: ಟ್ರೋಲ್ ಆದ ಒಲಾ ಸಿಇಒ

ಜೊಮಾಟೊ ಸಿಇಒ ಅವರ ಈ ಪೋಸ್ಟ್​ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಸಿಇಒವೊಬ್ಬರು ಡೆಲಿವರಿ ಬಾಯ್​ನಂತೆ ಕೆಲಸ ಮಾಡಿರುವುದಕ್ಕೆ ಬಹಳಷ್ಟು ಜನರು ಶಹಬ್ಬಾಸ್ ಎಂದಿದ್ದಾರೆ. ಇನ್ನೂ ಕೆಲವರು ಇದು ಬರೀ ಪಿಆರ್ ಸ್ಟಂಟ್ ಮಾತ್ರವೇ. ಡೆಲಿವರಿ ಬಾಯ್​ಗಳ ಬಗ್ಗೆ ಇವರಿಗೇನೂ ಕಾಳಜಿ ಇಲ್ಲ ಎಂದು ಟೀಕಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ