ಭಾರತದಲ್ಲಿ ಮ್ಯುಚುವಲ್ ಫಂಡ್ಗೆ ಎಂಟು ದಶಕಗಳ ಇತಿಹಾಸ; 1963ರಿಂದ ಈ ಉದ್ಯಮ ಬೆಳೆದದ್ದು ಹೇಗೆ?
India's Mutual Fund history: ಭಾರತದಲ್ಲಿ 1963ರಲ್ಲಿ ಯೂನಿಟ್ ಟ್ರಸ್ಟ್ ಆಫ್ ಇಂಡಿಯಾ (ಯುಟಿಐ) ಸ್ಥಾಪನೆ ಮೂಲಕ ಮ್ಯುಚುವಲ್ ಫಂಡ್ ಉದ್ಯಮ ಸೃಷ್ಟಿಯಾಯಿತು. ಎಂಟು ದಶಕದಲ್ಲಿ ಈ ಉದ್ಯಮ ಸಾಕಷ್ಟು ಬೆಳೆದಿದೆ. 1988ರಲ್ಲಿ 6,700 ಕೋಟಿ ರೂ ಇದ್ದ ಮ್ಯುಚುವಲ್ ಫಂಡ್ ಉದ್ಯಮ ಇವತ್ತು 67 ಲಕ್ಷ ಕೋಟಿ ರೂಗೆ ಬೆಳೆದಿದೆ.
ನವದೆಹಲಿ, ಅಕ್ಟೋಬರ್ 8: ಭಾರತದಲ್ಲಿ ಷೇರು ಮಾರುಕಟ್ಟೆ 19ನೇ ಶತಮಾನದಲ್ಲೇ ಶುರುವಾದರೂ ಮ್ಯುಚುವಲ್ ಫಂಡ್ ಉದ್ಯಮಕ್ಕೆ ಎಂಟು ದಶಕಗಳ ಇತಿಹಾಸ ಇದೆ. ವಿಶ್ವದ ಮೊದಲ ಮ್ಯೂಚುವಲ್ ಫಂಡ್ 1924ರಲ್ಲಿ ಅಮೆರಿಕದಲ್ಲಿ ಆರಂಭವಾಗಿತ್ತು. ಭಾರತದಲ್ಲಿ ಮ್ಯೂಚುವಲ್ ಫಂಡ್ ಉದ್ಯಮ ಅರವತ್ತರ ದಶಕದಲ್ಲಿ (1963) ಆರಂಭವಾಯಿತು. ಭಾರತದಲ್ಲಿ ಸಾಕಷ್ಟು ತೊಡರುಗಳ ನಡುವೆ ಬೆಳೆದ ಮ್ಯೂಚುವಲ್ ಫಂಡ್ ಕಳೆದ ಹತ್ತು ವರ್ಷದಲ್ಲಿ ಅಗಾಧವಾಗಿ ವಿಸ್ತರಿಸಿಕೊಂಡಿದೆ. ಯೂನಿಟ್ ಟ್ರಸ್ಟ್ ಆಫ್ ಇಂಡಿಯಾ ಸ್ಥಾಪನೆಯಿಂದ ಶುರುವಾದ ಈ ಉದ್ಯಮ ಹೇಗೆ ಬೆಳೆದುಬಂದಿದೆ ಎಂದು ಬಿಂಬಿಸುವ ಐದು ಹಂತಗಳ ಬೆಳವಣಿಗೆಯ ಮಾಹಿತಿ ಇಲ್ಲಿದೆ.
1964ರಿಂದ 1987; ಮ್ಯೂಚುವಲ್ ಫಂಡ್ ಉದ್ಯಮದ ತಳಹದಿ
1963ರಲ್ಲಿ ಸಂಸತ್ನಲ್ಲಿ ಕಾಯ್ದೆ ಮೂಲಕ ಯೂನಿಟ್ ಟ್ರಸ್ಟ್ ಆಫ್ ಇಂಡಿಯಾವನ್ನು ರಚಿಸಲಾಯಿತು. ಅದು ಭಾರತದಲ್ಲಿ ಮ್ಯೂಚುವಲ್ ಫಂಡ್ನ ಅಧ್ಯಾಯದ ಆರಂಭವಾಯಿತು. ಆಗ ಯುಟಿಐ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಧೀನಕ್ಕೆ ಸೇರಿಸಲಾಗಿತ್ತು. 1978ರಲ್ಲಿ ಆರ್ಬಿಐ ನಿಯಂತ್ರಣದಿಂದ ಅದನ್ನು ಹೊರತಂದು, ಐಡಿಬಿಐ ಅಧೀನಕ್ಕೆ ಒಳಪಡಿಸಲಾಯಿತು.
1964ರಲ್ಲಿ ಯುಟಿಐನ ಯುನಿಟ್ ಸ್ಕೀಮ್ ಭಾರತದ ಮೊದಲ ಮ್ಯುಚುವಲ್ ಫಂಡ್. ಎರಡು ದಶಕಗಳ ನಂತರ 1988ರಲ್ಲಿ ಈ ಮ್ಯುಚುವಲ್ ಫಂಡ್ ಸುಮಾರು 6,700 ಕೋಟಿ ರೂ ಮೊತ್ತದ ಹೂಡಿಕೆಗಳನ್ನು ನಿಭಾಯಿಸುತ್ತಿತ್ತು.
ಇದನ್ನೂ ಓದಿ: ತರಕಾರಿಗೆ ಗ್ರಾಹಕ ಕೊಡುವ ಬೆಲೆಯಲ್ಲಿ ರೈತನಿಗೆ ಸಿಗೋದೆಷ್ಟು? ಆರ್ಬಿಐ ವರದಿಯಲ್ಲಿ ಮಾಹಿತಿ
1987ರಿಂದ 1993; ಪಬ್ಲಿಕ್ ಸೆಕ್ಟರ್ ಕಂಪನಿಗಳ ಪ್ರವೇಶ
1987ರಿಂದ ಮ್ಯುಚುವಲ್ ಫಂಡ್ ಉದ್ಯಮಕ್ಕೆ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಂಸ್ಥೆಗಳು ಪ್ರವೇಶ ಮಾಡಿದವು. ಎಲ್ಐಸಿ, ಜಿಐಸಿ, ಎಸ್ಬಿಐ, ಕೆನರಾ ಬ್ಯಾಂಕ್, ಪಿಎನ್ಜಿ ಮೊದಲಾದ ಸಂಸ್ಥೆಗಳು ಮ್ಯುಚುವಲ್ ಫಂಡ್ ಆರಂಭಿಸಿದವು. ಯುಟಿಐ ನಂತರ ಮ್ಯುಚುವಲ್ ಫಂಡ್ ಆರಂಭಿಸಿದ್ದು ಎಸ್ಬಿಐ.
1993ರಿಂದ 2003: ಪ್ರೈವೇಟ್ ಸೆಕ್ಟರ್ ಪ್ರವೇಶ
1992ರಲ್ಲಿ ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರವಾಗಿ ಸೆಬಿಯನ್ನು ರಚಿಸಲಾಯಿತು. ಇಲ್ಲಿಂದ ಸ್ಟಾಕ್ ಮಾರ್ಕೆಟ್ನಲ್ಲಿ ಗಮನಾರ್ಹ ಬದಲಾವಣೆಗಳಾದವು. ಮ್ಯುಚುವಲ್ ಫಂಡ್ ನಿಯಮಗಳಲ್ಲೂ ಬದಲಾವಣೆಗಳಾದವು. ಈ ಉದ್ಯಮಕ್ಕೆ ಖಾಸಗಿ ವಲಯದ ಪ್ರವೇಶ ಆಯಿತು. 1993ರಲ್ಲಿ ಫ್ರಾಂಕ್ಲಿನ್ ಟೆಂಪಲ್ಟನ್ ಭಾರತದ ಮೊದಲ ಖಾಸಗಿ ಮ್ಯುಚುವಲ್ ಫಂಡ್ ಎನಿಸಿದೆ. 2003ರಲ್ಲಿ ಭಾರತದಲ್ಲಿ ಮ್ಯುಚುವಲ್ ಫಂಡ್ಗಳ ಸಂಖ್ಯೆ 33 ದಾಟಿತ್ತು.
2003ರಿಂದ 2014: ಉದ್ಯಮಕ್ಕೆ ಸವಾಲುಗಳು…
2003ರಲ್ಲಿ ಯೂನಿಟ್ ಟ್ರಸ್ಟ್ ಆಫ್ ಇಂಡಿಯಾ ಕಾಯ್ದೆಯನ್ನು ರದ್ದುಗೊಳಿಸಲಾಯಿತು. ಆ ನಂತರ ಉದ್ಯಮದಲ್ಲಿ ಸಾಕಷ್ಟು ವಿಲೀನಗಳಾದವು. ಹಲವು ಖಾಸಗಿ ವಲಯದ ಮ್ಯೂಚುವಲ್ ಫಂಡ್ಗಳು ವಿಲೀನಗೊಂಡವು. 2008-09ರಲ್ಲಿ ಆದ ಜಾಗತಿಕ ಹಣಕಾಸು ಬಿಕ್ಕಟ್ಟು ಮ್ಯುಚುವಲ್ ಫಂಡ್ ಉದ್ಯಮಕ್ಕೆ ಘಾಸಿ ಮಾಡಿತು. ಹೂಡಿಕೆದಾರರು ಬಹಳ ನಷ್ಟ ಅನುಭವಿಸಿದರು.
2014ರಿಂದ ಇಲ್ಲಿಯವರೆಗೆ ಉದ್ಯಮಕ್ಕೆ ಹೊಸ ಉತ್ಸಾಹ
2014ರಿಂದ ಭಾರತದಲ್ಲಿ ಮ್ಯೂಚುವಲ್ ಫಂಡ್ ಉದ್ಯಮ ಬಹಳ ವೇಗದಲ್ಲಿ ಬೆಳೆಯುತ್ತಿದೆ. 2014ರಲ್ಲಿ ಈ ಉದ್ಯಮ ನಿಭಾಯಿಸುತ್ತಿದ್ದ ಹೂಡಿಕೆ 10 ಲಕ್ಷ ಕೋಟಿ ರೂ ಇತ್ತು. 2024ರಲ್ಲಿ ಇದು 67 ಲಕ್ಷ ಕೋಟಿ ರೂ ಆಗಿದೆ. ಹತ್ತು ವರ್ಷದಲ್ಲಿ ಆರೇಳು ಪಟ್ಟು ಹೆಚ್ಚು ಹೂಡಿಕೆಗಳನ್ನು ಈ ಉದ್ಯಮ ಕಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ