ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿದ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್

Savitri Jindal wins in Hisar, Haryana: ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿದ ಉದ್ಯಮಿ ಸಾವಿತ್ರಿ ಜಿಂದಾಲ್ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹಿಸಾರ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಹಿಸಾರ್ ಕ್ಷೇತ್ರದಲ್ಲಿ ಅವರು ಜಯ ಗಳಿಸುತ್ತಿರುವುದು ಇದು ಮೂರನೇ ಸಲ.

ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿದ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್
ಸಾವಿತ್ರಿ ಜಿಂದಾಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 08, 2024 | 4:50 PM

ಚಂಡೀಗಡ್, ಅಕ್ಟೋಬರ್ 8: ಭಾರತದ ಪ್ರಖ್ಯಾತ ಜಿಂದಾಲ್ ಫ್ಯಾಮಿಲಿಗೆ ಸಾವಿತ್ರಿ ಅವರು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಾವಿತ್ರಿ ಜಿಂದಾಲ್ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಸಮೀಪದ ಸ್ಪರ್ಧಿ ಕಾಂಗ್ರೆಸ್​ನ ರಾಮ್ ನಿವಾಸ್ ರಾರಾ ಅವರನ್ನು ಸಾವಿತ್ರಿ 18,941 ಮತಗಳ ಅಂತರದಿಂದ ಸೋಲುಣಿಸಿದ್ದಾರೆ. ಈ ಮೂಲಕ ಹಿಸಾರ್ ಕ್ಷೇತ್ರದಲ್ಲಿ ಮೂರನೇ ಬಾರಿ ಅವರು ಗೆಲುವು ಸಾಧಿಸಿದಂತಾಗಿದೆ.

74 ವರ್ಷದ ಸಾವಿತ್ರಿ ಜಿಂದಾಲ್ ಅವರು ಹಿಸಾರ್ ವಿಧಾನಸಭಾ ಕ್ಷೇತ್ರದಲ್ಲಿ 49,231 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಮ್ ನಿವಾಸ್ ರಾರಾ 30,290 ಮತಗಳನ್ನು ಮಾತ್ರವೇ ಪಡೆಯಲು ಶಕ್ಯರಾಗಿದ್ದಾರೆ. ಬಿಜೆಪಿಯ ಡಾ. ಕಮಲ್ ಗುಪ್ತಾ ಪಡೆದ ಮತಗಳು ಕೇವಲ 17,385 ಮಾತ್ರ. ಇವರು ಸಚಿವರಾಗಿದ್ದೂ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಆಮ್ ಆದ್ಮಿ ಅಭ್ಯರ್ಥಿ ಸೇರಿ ಉಳಿದವರೆಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಹರ್ಯಾಣದಲ್ಲಿ ಕೈ ಹಿಡಿಯಲಿಲ್ಲ ಗ್ಯಾರಂಟಿ; ಕಾಂಗ್ರೆಸ್ ಹಿನ್ನಡೆಗೆ ಕಾರಣಗಳಿವು

ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿರುವ, ಮತ್ತು ವಿಶ್ವದ ಟಾಪ್ 50 ಶ್ರೀಮಂತರಲ್ಲಿ ಒಬ್ಬರೆನಿಸಿರುವ ಸಾವಿತ್ರಿ ಜಿಂದಾಲ್ 2005 ಮತ್ತು 2009ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಹರ್ಯಾಣದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯೂ ಆಗಿ ಕೆಲಸ ಮಾಡಿದ್ದರು. 2014ರ ಚುನಾವಣೆಯಲ್ಲಿ ಸೋಲನುಭವಿಸಿದ್ದರು. 2024ರ ಮಾರ್ಚ್ ತಿಂಗಳಲ್ಲಿ ಸಾವಿತ್ರಿ ಜಿಂದಾಲ್ ಬಿಜೆಪಿ ಸೇರಿದ್ದರು. ಅವರ ಮಗ ನವೀನ್ ಜಿಂದಾಲ್ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸಾವಿತ್ರಿ ಜಿಂದಾಲ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ.

ಉದ್ಯಮ ಮತ್ತು ರಾಜಕೀಯ ಎರಡರಲ್ಲೂ ಇರುವ ಜಿಂದಾಲ್ ಫ್ಯಾಮಿಲಿ

ಸಾವಿತ್ರಿ ಜಿಂದಾಲ್ ಅವರ ಪತಿ ಓಂ ಪ್ರಕಾಶ್ ಜಿಂದಾಲ್ (ದಿವಂಗತ) ಸಾಕಷ್ಟು ವರ್ಷ ಇದೇ ಹಿಸಾರ್ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಓ.ಪಿ. ಜಿಂದಾಲ್ ಗ್ರೂಪ್ ಅನ್ನು ಸ್ಥಾಪಿಸಿದ್ದು ಅವರೆಯೇ. ಪತಿ ನಿಧನದ ಬಳಿಕ ಸಾವಿತ್ರಿ ಜಿಂದಾಲ್ ಅವರು ಬಿಸಿನೆಸ್ ಮತ್ತು ಪೊಲಿಟಿಕ್ಸ್ ಎರಡನ್ನೂ ಮುಂದುವರಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಈಗ ಅವರು ಜಿಂದಾಲ್ ಬಿಸಿನೆಸ್ ಸಾಮ್ರಾಜ್ಯವನ್ನು ತಮ್ಮ ನಾಲ್ಕು ಮಕ್ಕಳಾದ ಪೃಥ್ವಿರಾಜ್, ಸಾಜ್ಜನ್, ರತನ್ ಮತ್ತು ನವೀನ್ ಜಿಂದಾಲ್ ಅವರಿಗೆ ಹಂಚಿದ್ದಾರೆ.

ಇದನ್ನೂ ಓದಿ: Haryana Election results 2024: ಹರ್ಯಾಣ ಜುಲಾನಾದಲ್ಲಿ ಕಾಂಗ್ರೆಸ್‌ನ ವಿನೇಶ್ ಫೋಗಟ್​​​ಗೆ ಭರ್ಜರಿ ಗೆಲುವು

ಪದ್ಮಭೂಷಣ ಸೇರಿದಂತೆ ಸಾಕಷ್ಟು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿರುವ ಸಾವಿತ್ರಿ ಜಿಂದಾಲ್ ಅವರ ಬಳಿ ಇರುವ ಸಂಪತ್ತಿನ ಮೌಲ್ಯ 3.65 ಲಕ್ಷ ಕೋಟಿ ರೂ.

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದೆ. ಈ ಮೂಲಕ ಸತತ ಮೂರನೇ ಬಾರಿ ಈ ರಾಜ್ಯದಲ್ಲಿ ಪಕ್ಷದ ಆಳ್ವಿಕೆ ಬರುತ್ತಿದೆ. ಸಾವಿತ್ರಿ ಜಿಂದಾಲ್ ಅವರಿಗೂ ಹೊಸ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆ ಇಲ್ಲದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ