ನವದೆಹಲಿ, ಡಿಸೆಂಬರ್ 6: ಆರ್ಬಿಐನ ಹಣಕಾಸು ನೀತಿ ಸಮಿತಿಯು ರಿಪೋ ದರವನ್ನು ಇಳಿಸದೇ ಹೋದರೂ ನಿರೀಕ್ಷೆಯಂತೆ ಸಿಆರ್ಆರ್ ಅಥವಾ ಕ್ಯಾಷ್ ರಿಸರ್ವ್ ರೇಶಿಯೋವನ್ನು 50 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಶೇ. 4.5ರಷ್ಟಿದ್ದ ಸಿಆರ್ಆರ್ ಅನ್ನು ಶೇ. 4ಕ್ಕೆ ಇಳಿಸಲಾಗಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಶುಕ್ರವಾರ ಈ ನಿರ್ಧಾರ ಪ್ರಕಟಿಸಿದರು. ಸಿಆರ್ಆರ್ ಅನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಇಳಿಕೆ ಮಾಡಿದ್ದರಿಂದ ಹಣಕಾಸು ಮಾರುಕಟ್ಟೆಗೆ 1.16 ಲಕ್ಷ ಕೋಟಿ ರೂ ಹಣದ ಹರಿವು ಹೆಚ್ಚಲಿದೆ ಎಂದು ಆರ್ಬಿಐ ಗವರ್ನರ್ ಈ ಸಂದರ್ಭದಲ್ಲಿ ಹೇಳಿದರು.
ಸಿಆರ್ಆರ್ ಎಂದರೆ ಕ್ಯಾಷ್ ರಿಸರ್ವ್ ರೇಶಿಯೋ. ಅಂದರೆ, ಮೀಸಲು ಹಣ ಪ್ರಮಾಣ. ಒಂದು ಬ್ಯಾಂಕ್ ತನ್ನ ಗ್ರಾಹಕರು ಇಡುವ ಒಟ್ಟು ಠೇವಣಿಗಳಲ್ಲಿ ನಿರ್ದಿಷ್ಟ ಭಾಗದ ಹಣವನ್ನು ಮೀಸಲು ನಿಧಿಯಾಗಿ ಇಟ್ಟುಕೊಳ್ಳಬೇಕು. ಈ ಹಣವನ್ನು ಬ್ಯಾಂಕ್ನ ಸಂಗ್ರಹದಲ್ಲಿ ಇಡಬಹುದು ಅಥವಾ ರಿಸರ್ವ್ ಬ್ಯಾಂಕ್ನಲ್ಲಿ ಇರಿಸಬಹುದು. ಠೇವಣಿದಾರರಿಗೆ ತುರ್ತಾಗಿ ಹಣ ಮರಳಿಸುವ ಸ್ಥಿತಿ ಬಂದಾಗ ಬ್ಯಾಂಕು ಈ ನಿಧಿಯನ್ನು ಬಳಸಿಕೊಳ್ಳಬಹುದು. ಗ್ರಾಹಕರ ಹಿತದೃಷ್ಟಿಯಿಂದ ಆರ್ಬಿಐ ಸಿಆರ್ಆರ್ ನಿಯಮವನ್ನು ರೂಪಿಸಿದೆ.
ಇದನ್ನೂ ಓದಿ: RBI MPC Updates: ರಿಪೋ ದರ ಇಳಿಸದ ಆರ್ಬಿಐ; ಶೇ. 6.50ರಲ್ಲೇ ಬಡ್ಡಿದರ ಮುಂದುವರಿಕೆ
ಉದಾಹರಣೆಗೆ, ಬ್ಯಾಂಕ್ನ ಗ್ರಾಹಕರು ಇಟ್ಟಿರುವ ಒಟ್ಟು ಠೇವಣಿ 10 ಲಕ್ಷ ಕೋಟಿ ರೂ ಎಂದಿದೆ ಎಂದು ಭಾವಿಸೋಣ. ಈಗ ಸಿಆರ್ಆರ್ ದರ ಶೇ. 4ಕ್ಕೆ ನಿಗದಿ ಮಾಡಲಾಗಿದೆ. ಈ ನಿಯಮದ ಪ್ರಕಾರ ಬ್ಯಾಂಕು 40,000 ಕೋಟಿ ರೂ ಹಣವನ್ನು ರಿಸರ್ವ್ ಆಗಿ ಎತ್ತಿ ಇಡಬೇಕಾಗುತ್ತದೆ.
ಈ ಮೊದಲಿನ ಸಿಆರ್ಆರ್ ದರವನ್ನು ಇದೇ ನಿದರ್ಶನದಲ್ಲಿ ಪರಿಗಣಿಸಿದಲ್ಲಿ ಬ್ಯಾಂಕು 45,000 ಕೋಟಿ ರೂ ಎತ್ತಿಡಬೇಕಿತ್ತು. ಈಗ ಅದು 40,000 ಕೋಟಿ ರೂಗೆ ಇಳಿದಿದೆ. ಈ ಬ್ಯಾಂಕಿಗೆ 5,000 ಕೋಟಿ ರೂ ಹಣವನ್ನು ಸಾಲ ನೀಡಲು ಬಳಸಿಕೊಳ್ಳಬಹುದು.
ಇದನ್ನೂ ಓದಿ: ಮನೆಮನೆಗೆ ಸೌರಶಕ್ತಿ; ಪಿಎಂ ಸೂರ್ಯಘರ್ ಯೋಜನೆಯಲ್ಲಿ 1.45 ಲಕ್ಷ ನೊಂದಣಿ; ಅರ್ಜಿ ಸಲ್ಲಿಸುವ ಕ್ರಮಗಳ ವಿವರ
ಆರ್ಬಿಐ ಕೊನೆಯದಾಗಿ ಸಿಆರ್ಆರ್ ಅನ್ನು ಕಡಿಮೆ ಮಾಡಿದ್ದು ಕೋವಿಡ್ ಸಂದರ್ಭದಲ್ಲಿ. 2020ರ ಮಾರ್ಚ್ನಲ್ಲಿ ಕ್ಯಾಷ್ ರಿಸರ್ವ್ ರೇಶಿಯೋವನ್ನು ಶೇ. 4.5ಕ್ಕೆ ಇಳಿಸಲಾಗಿತ್ತು. ನಾಲ್ಕು ವರ್ಷಗಳ ಬಳಿಕ ಈಗ ಮತ್ತೊಂದು ಸುತ್ತಿನ ಇಳಿಕೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ