ರೆಪೋ ದರ ಏರುತ್ತಾ? ಆರ್ಬಿಐ ಎಂಪಿಸಿ ಸಭೆಯ ನಿರ್ಧಾರ ಇಂದು ಪ್ರಕಟ; ಏನಿದೆ ನಿರೀಕ್ಷೆ?
RBI MPC Meeting Announcement: ಹಣದುಬ್ಬರ ಏರುವ ಸಾಧ್ಯತೆ ಇರುವುದರಿಂದ ಆರ್ಬಿಐ ಈ ಬಾರಿ ಬಡ್ಡಿದರ ಹೆಚ್ಚಿಸುತ್ತಾ ಎನ್ನುವ ಕುತೂಹಲ ಇದೆ. ಆಗಸ್ಟ್ 8ರಿಂದ ನಡೆದ ಎಂಪಿಸಿ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಪ್ರಕಟಿಸಲಿದ್ದಾರೆ.

ನವದೆಹಲಿ, ಆಗಸ್ಟ್ 10: ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ 3 ದಿನಗಳಿಂದ ನಡೆಸುತ್ತಾ ಬಂದಿರುವ ಹಣಕಾಸು ನೀತಿ ಸಮಿತಿ ಸಭೆ (RBI Monetary Policy Committee) ಇಂದು ಗುರುವಾರ ಸಮಾಪ್ತಿಗೊಳ್ಳಲಿದೆ. ಸಭೆಯಲ್ಲಿ ಚರ್ಚಿತ ವಿಷಯಗಳು ಹಾಗೂ ತೆಗೆದುಕೊಳ್ಳಲಾದ ನಿರ್ಧಾರಗಳು ಏನು ಎಂಬುದು ಇಂದು ಬಹಿರಂಗವಾಗಲಿದೆ. ಎಂಪಿಸಿ ಸಭೆ ಬಳಿಕ ಬೆಳಗ್ಗೆ 10 ಗಂಟೆಗೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಭೆಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಮಧ್ಯಾಹ್ನ 12ಗಂಟೆಗೆ ಅವರು ಮಾಧ್ಯಮ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಕಮಿಟಿ ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸುತ್ತದೆ. ಆರ್ಬಿಐ ಗವರ್ನರ್ ಅವರನ್ನೂ ಒಳಗೊಂಡಂತೆ 6 ಮಂದಿ ಸದಸ್ಯರು ಈ ಸಮಿತಿಯಲ್ಲಿ ಇರುತ್ತಾರೆ. ದೇಶದ ಆರ್ಥಿಕ ಬೆಳವಣಿಗೆ, ಹಣದುಬ್ಬರ ಇತ್ಯಾದಿ ಅಂಶಗಳನ್ನು ಅವಲೋಕಿಸಲಾಗುತ್ತದೆ. ಹಣದುಬ್ಬರವನ್ನು ನಿಯಂತ್ರಿಸಲು ಯಾವ ಹಣಕಾಸು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಚರ್ಚಿಸಲಾಗುತ್ತದೆ.
ಈ ಬಾರಿ ರೆಪೋ ದರ ಅಥವಾ ಬಡ್ಡಿದರ ಏರಿಸುವ ಸಂಬಂಧ ಎಂಪಿಸಿ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಗಮನ ಇದೆ. ಬ್ಲೂಮ್ಬರ್ಗ್ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 37 ಆರ್ಥಿಕತಜ್ಞರು, ಆರ್ಬಿಐ ತನ್ನ ರೆಪೋ ದರದ ಯಥಾಸ್ಥಿತಿ ಮುಂದುವರಿಸಬಹುದು ಎಂದು ಅಂದಾಜಿಸಿದ್ದಾರೆ. ಫೆಬ್ರುವರಿಯಲ್ಲಿ ನಡೆದಿದ್ದ ಸಭೆಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಸಲಾಗಿತ್ತು. ಅದಾದ ಬಳಿಕ ನಡೆದ ಎರಡು ಸಭೆಗಳಲ್ಲಿ ರೆಪೋ ದರದಲ್ಲಿ ಬದಲಾವಣೆ ಮಾಡಲಾಗಿರಲಿಲ್ಲ. ಹಣದುಬ್ಬರ ನಿಯಂತ್ರಣಕ್ಕೆ ಬಂದ ಕಾರಣ ಬಡ್ಡಿದರ ಹೆಚ್ಚಿಸುವ ಗೋಜಿಗೆ ಆರ್ಬಿಐ ಹೋಗಿರಲಿಲ್ಲ.
ಈಗ ಹಣದುಬ್ಬರ ಶೇ. 6ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರ್ಬಿಐ ತುಸು ಬಡ್ಡಿ ದರ ಹೆಚ್ಚಿಸಲು ನಿರ್ಧರಿಸಿದರೆ ಅಚ್ಚರಿ ಹುಟ್ಟಿಸುವುದಿಲ್ಲ. ಆದರೆ, ಬಡ್ಡಿದರ ಏರಿಕೆಯಿಂದ ಆರ್ಥಿಕತೆಗೆ ಹಿನ್ನಡೆಯಾಗುವ ಸಾಧ್ಯತೆ ಇರುವುದರಿಂದ ಆರ್ಬಿಐ ಅಷ್ಟು ಸುಲಭಕ್ಕೆ ಆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ.
2022ರಲ್ಲಿ ಹಣದುಬ್ಬರ ಶೇ. 7ಕ್ಕಿಂತಲೂ ಮೇಲಿನ ಮಟ್ಟದಲ್ಲೇ ಇತ್ತು. ಸತತವಾಗಿ ಬಡ್ಡಿದರ ಏರಿಸಿದ ಪರಿಣಾಮ ಹಣದುಬ್ಬರ 2023ರ ಮೇ ತಿಂಗಳಲ್ಲಿ ಶೇ. 4.3ಕ್ಕೆ ಬಂದು ಮುಟ್ಟಿತ್ತು. ಒಟ್ಟು 250 ಮೂಲಾಂಕಗಳಷ್ಟು ರೆಪೋ ದರ ಏರಿಸಲಾಗಿತ್ತು. ಆದರೆ, ಜೂನ್ ತಿಂಗಳಲ್ಲಿ ಹಣದುಬ್ಬರ ಶೇ. 4.81ಕ್ಕೆ ಹೋಗಿದೆ. ಅದಾದ ಬಳಿಕ ಟೊಮೆಟೋ ಇತ್ಯಾದಿ ತರಕಾರಿಗಳ ಬೆಲೆ ಗಣನೀಯವಾಗಿ ಹೆಚ್ಚಿರುವುದರಿಂದ ಜುಲೈ ತಿಂಗಳ ಹಣದುಬ್ಬರ ಶೇ. 6ರ ಆಸುಪಾಸಿಗೆ ಹೋಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಆರ್ಥಿಕ ಹಿಂಜರಿತವಾದರೆ ಷೇರುಮಾರುಕಟ್ಟೆಗೆ ಏನಾಗುತ್ತೆ? ಷೇರುಪೇಟೆ ಕುಸಿದರೂ ನಿಮ್ಮ ಹೂಡಿಕೆ ಹಣ ಭದ್ರವಾಗಿಸುವುದು ಹೇಗೆ?
ಇನ್ನು, ಆರ್ಬಿಐನ ಎಂಪಿಸಿ ಸಭೆಯಲ್ಲಿ ಇನ್ನೂ ಹಲವು ವಿಚಾರಗಳನ್ನು ಅವಲೋಕಿಸಲಾಗುತ್ತದೆ. ವಿವಿಧ ಹಣಕಾಸು ವರ್ಷಗಳಲ್ಲಿ ದೇಶದ ಜಿಡಿಪಿ ಬೆಳವಣಿಗೆ ಹೇಗೆ ಸಾಗಬಹುದು ಎಂದು ಸಭೆಯಲ್ಲಿ ಒಂದು ಗ್ರಹಿಕೆಗೆ ಬರಬಹುದು. ಜೂನ್ನಲ್ಲಿ ನಡೆದಿದ್ದ ಸಭೆಯಲ್ಲಿ, 2023-24ರ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ಶೇ. 6.5ರಷ್ಟು ಏರಬಹುದು ಎಂದು ಅಂದಾಜಿಸಲಾಗಿತ್ತು. ಈ ಬಾರಿ ಸಭೆಯಲ್ಲಿ ಮತ್ತೊಮ್ಮೆ ಆರ್ಥಿಕತೆಯನ್ನು ಅವಲೋಕಿಸಿ, ಜಿಡಿಪಿ ಬೆಳವಣಿಗೆಯನ್ನು ಮರು ಅಂದಾಜಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




