ಜಿಡಿಪಿ, ಹಣದುಬ್ಬರ ಸ್ಥಿತಿ ಸಕಾರಾತ್ಮಕ; ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಇಲ್ಲಿವೆ ಆರ್​ಬಿಐ ಎಂಪಿಸಿ ನಿರ್ಧಾರಗಳು

RBI MPC meeting highlights: ಆರ್​ಬಿಐನ ಎಂಪಿಸಿ ಸಭೆ ಬಡ್ಡಿದರವನ್ನು ಶೇ. 5.50ರಲ್ಲಿ ಮುಂದುವರಿಸಲು ಸರ್ವಾನುಮತದಿಂದ ತೀರ್ಮಾನಿಸಿದೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.80ರಷ್ಟು ಬೆಳೆಯಬಹುದು ಎಂದು ಅಂದಾಜಿಸಲಾಗಿದೆ. ಹಾಗೆಯೇ, ಹಣದುಬ್ಬರವು ಈ ವರ್ಷ ಶೇ. 2.6ರಷ್ಟು ಇರಬಹುದು ಎಂದೂ ಅಂದಾಜು ಮಾಡಲಾಗಿದೆ.

ಜಿಡಿಪಿ, ಹಣದುಬ್ಬರ ಸ್ಥಿತಿ ಸಕಾರಾತ್ಮಕ; ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಇಲ್ಲಿವೆ ಆರ್​ಬಿಐ ಎಂಪಿಸಿ ನಿರ್ಧಾರಗಳು
ಆರ್​ಬಿಐ

Updated on: Oct 01, 2025 | 3:43 PM

ನವದೆಹಲಿ, ಅಕ್ಟೋಬರ್ 1: ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿ (RBI MPC) ತನ್ನ ಅಕ್ಟೋಬರ್ ತಿಂಗಳ ಸಭೆಯಲ್ಲಿ ರಿಪೋ ದರ (Repo Rate) ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಿದೆ. ಇದರೊಂದಿಗೆ, ಆರ್​ಬಿಐನ ರಿಪೋ ದರ ಅಥವಾ ಬಡ್ಡಿದರ ಶೇ. 5.50ರಲ್ಲೇ ಮುಂದುವರಿಯಲಿದೆ. ಹೆಚ್ಚಿನ ಆರ್ಥಿಕ ತಜ್ಞರು ಇದೇ ಅಂದಾಜು ಮಾಡಿದ್ದರು. ಸತತ ಎರಡು ಬಾರಿ ರಿಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಅದಕ್ಕೂ ಹಿಂದಿನ ಮೂರು ಸಭೆಗಳಲ್ಲಿ ಸತತವಾಗಿ ದರ ಇಳಿಸಲಾಗಿತ್ತು. ಶೇ. 6.50ರಷ್ಟು ಇದ್ದ ಬಡ್ಡಿದರ ಶೇ. 5.50ಕ್ಕೆ ಇಳಿಕೆಯಾಗಿತ್ತು. ಮುಂದಿನ ಸಭೆಯಲ್ಲಿ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ನಡೆದ ಆರು ಸದಸ್ಯರ ಎಂಪಿಸಿ ಸಭೆಯಲ್ಲಿ ಇನ್ನೂ ಕೆಲ ಮಹತ್ವದ ಸಂಗತಿಗಳ ಚರ್ಚೆ ಮತ್ತು ತೀರ್ಮಾನಗಳು ಆಗಿವೆ. ಜಿಡಿಪಿ ಮತ್ತು ಹಣದುಬ್ಬರದ ಮುಂದಿನ ಹಾದಿ ಬಗ್ಗೆ ಅಂದಾಜು ಮಾಡಲಾಯಿತು. ಈ ಸಭೆಯಲ್ಲಿ ಚರ್ಚಿತ ವಿಷಯಗಳ ಮುಖ್ಯಾಂಶಗಳು ಇಂತಿವೆ:

ಇದನ್ನೂ ಓದಿ: ಗೋಲ್ ಲೋನ್​ನಿಂದ ಹಿಡಿದು ಸ್ಪೀಡ್ ಪೋಸ್ಟ್ ದರ ಹೆಚ್ಚಳದವರೆಗೆ, ಅ. 1ರಿಂದ ಬದಲಾಗಲಿರುವ ಹಣಕಾಸು ನಿಯಮಗಳು

  • ರಿಪೋ ದರ ಶೇ. 5.50ರಲ್ಲಿ ಮುಂದುವರಿಯಲಿದೆ
  • ಆರ್​ಬಿಐನ ಪಾಲಿಸಿ ‘ತಟಸ್ಥ’ ನಿಲುವು ಮುಂದುವರಿಯುತ್ತದೆ.
  • 2025-26ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.8ರಷ್ಟು ಬೆಳೆಯಬಹುದು. ಹಿಂದಿನ ಸಭೆಯಲ್ಲಿ ಶೇ. 6.5 ಎಂದು ಅಂದಾಜಿಸಲಾಗಿತ್ತು.
  • ಹಣದುಬ್ಬರ 2025-26ರಲ್ಲಿ ಶೇ. 2.6ರಷ್ಟು ಇರಬಹುದು ಎನ್ನುವ ಅಭಿಪ್ರಾಯಕ್ಕೆ ಸಭೆ ಬಂದಿದೆ. ಹಿಂದಿನ ಸಭೆಗಿಂತ ಕಡಿಮೆ ಹಣದುಬ್ಬರದ ಅಂದಾಜು ವ್ಯಕ್ತವಾಗಿದೆ.
  • ಅಮೆರಿಕದ ಸುಂಕ ಕ್ರಮದಿಂದ ಭಾರತದ ರಫ್ತುಗಳ ಮೇಲೆ ಪರಿಣಾಮ ಬೀರಬಹುದು. ಜಿಎಸ್​ಟಿ ದರ ಕಡಿತವು ರಫ್ತು ಇಳಿಕೆಯ ಪರಿಣಾಮವನ್ನು ಸರಿದೂಗಿಸಲು ಸಾಕಾಗದೇ ಹೋಗಬಹುದು ಎಂಬುದು ಎಂಪಿಸಿ ಅನಿಸಿಕೆ.
  • ಫಾರೆಕ್ಸ್ ರಿಸರ್ವ್ಸ್ 700 ಬಿಲಿಯನ್ ಡಾಲರ್​ನಷ್ಟಿದೆ. 11 ತಿಂಗಳ ಆಮದುಗಳಿಗೆ ಆಗುವಷ್ಟಿದೆ.
  • ಷೇರುಗಳ ಆಧಾರದ ಮೇಲೆ ಸಾಲದ ಮಿತಿಯನ್ನು 20 ಲಕ್ಷ ರೂನಿಂದ ಒಂದು ಕೋಟಿ ರೂಗೆ ಏರಿಸಲಾಗಿದೆ.
  • ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಭಾರತೀಯ ರುಪಾಯಿ ಬಳಕೆ ಹೆಚ್ಚುತ್ತಿದೆ. ಇದನ್ನು ಇನ್ನಷ್ಟು ಹೆಚ್​ಚಿಸಲು ವಿವಿಧ ಕ್ರಮಗಳನ್ನು ಎಂಪಿಸಿ ಪ್ರಸ್ತಾಪಿಸಿದೆ.
  • ವಿದೇಶೀ ಹೂಡಿಕೆಗಳು ಮತ್ತು ಅನಿವಾಸಿ ಭಾರತೀಯರು ಇಲ್ಲಿ ಬ್ಯುಸಿನೆಸ್ ಸ್ಥಾಪಿಸಲು ಇರುವ ನಿಯಮಗಳನ್ನು ಸರಳಗೊಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ