RBI MPC Meeting: ಆರ್​ಬಿಐ ಹಣಕಾಸು ನೀತಿ ಸಭೆ; ಸಾಲದ ಬಡ್ಡಿ ದರ ಹೆಚ್ಚಳದ ಆತಂಕದಲ್ಲಿ ಗ್ರಾಹಕರು

| Updated By: Ganapathi Sharma

Updated on: Dec 05, 2022 | 10:31 AM

ಮೇ - ಸೆಪ್ಟೆಂಬರ್​​ ಅವಧಿಯಲ್ಲಿ ಆರ್​ಬಿಐ ಸತತವಾಗಿ ರೆಪೊ ದರ ಹೆಚ್ಚಿಸಿದೆ. ಈ ಅವಧಿಯಲ್ಲಿ ಒಟ್ಟು 190 ಮೂಲಾಂಶದಷ್ಟು ರೆಪೊ ದರ ಹೆಚ್ಚಳ ಮಾಡಲಾಗಿದೆ. ಸದ್ಯ ರೆಪೊ ದರ ಪ್ರಮಾಣ ಶೇಕಡಾ 5.9ರಷ್ಟಿದೆ.

RBI MPC Meeting: ಆರ್​ಬಿಐ ಹಣಕಾಸು ನೀತಿ ಸಭೆ; ಸಾಲದ ಬಡ್ಡಿ ದರ ಹೆಚ್ಚಳದ ಆತಂಕದಲ್ಲಿ ಗ್ರಾಹಕರು
ಆರ್​ಬಿಐ
Follow us on

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹಣಕಾಸು ನೀತಿ ಸಮಿತಿ ಸಭೆಯು (MPC Meeting) ಇಂದು (ಸೋಮವಾರ) ಆರಂಭವಾಗಿದ್ದು ಮೂರು ದಿನ ನಡೆಯಲಿದೆ. ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು ಸಮಿತಿಯು ಬುಧವಾರ ಪ್ರಕಟಿಸಲಿದ್ದು, ರೆಪೊ ದರ (Repo Rate) 30ರಿಂದ ಮೂಲಾಂಶದಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹಣದುಬ್ಬರ ಪ್ರಮಾಣವನ್ನು (inflation) ಶೇಕಡಾ 6ಕ್ಕಿಂತ ಕೆಳಮಟ್ಟಕ್ಕೆ ತರಲು ಹರಹಸಾಹಸಪಡುತ್ತಿರುವ ಆರ್​ಬಿಐ ಮತ್ತೆ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆಯೇ ಹೆಚ್ಚು ಎಂದು ಹೆಚ್ಚಿನ ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೆಪ್ಟೆಂಬರ್​ನಲ್ಲಿ ಪ್ರಕಟಿಸಿದ್ದ ಹಣಕಾಸು ನೀತಿಯಲ್ಲಿ ಆರ್​ಬಿಐ 50 ಮೂಲಾಂಶದಷ್ಟು ಬಡ್ಡಿ ದರವನ್ನು ಹೆಚ್ಚಿಸಿತ್ತು.

ಮೇ – ಸೆಪ್ಟೆಂಬರ್​​ ಅವಧಿಯಲ್ಲಿ ಆರ್​ಬಿಐ ಸತತವಾಗಿ ರೆಪೊ ದರ ಹೆಚ್ಚಿಸಿದೆ. ಈ ಅವಧಿಯಲ್ಲಿ ಒಟ್ಟು 190 ಮೂಲಾಂಶದಷ್ಟು ರೆಪೊ ದರ ಹೆಚ್ಚಳ ಮಾಡಲಾಗಿದೆ. ಸದ್ಯ ರೆಪೊ ದರ ಪ್ರಮಾಣ ಶೇಕಡಾ 5.9ರಷ್ಟಿದೆ. ಇಷ್ಟಾಗಿಯೂ ಹಣದುಬ್ಬರ ಪ್ರಮಾಣ ಶೇಕಡಾ 6ಕ್ಕಿಂತ ಕೆಳಗೆ ತರುವುದು ಆರ್​ಬಿಐಗೆ ಸಾಧ್ಯವಾಗಿಲ್ಲ. ಆದರೆ ಹಣದುಬ್ಬರದ ತೀವ್ರಗತಿಯ ಏರಿಕೆ ತಡೆಯುವಲ್ಲಿ ತುಸು ಮಟ್ಟಿಗೆ ಆರ್​ಬಿಐ ಯಶಸ್ವಿಯಾಗಿದೆ.

ರೆಪೊ ದರ ಹೆಚ್ಚಾದರೆ ತುಟ್ಟಿಯಾಗಲಿದೆ ಸಾಲದ ಬಡ್ಡಿ ದರ

ರೆಪೊ ದರಕ್ಕೆ ಅನುಗುಣವಾಗಿ ಬ್ಯಾಂಕ್​ಗಳು ಸಾಲ ಮತ್ತು ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸುತ್ತವೆ. ಯಾಕೆಂದರೆ, ದೇಶದ ಬ್ಯಾಂಕ್​ಗಳಿಗೆ ಆರ್​ಬಿಐ ನೀಡುವ ಹಣಕಾಸು ನಿಧಿಗೆ ಅಥವಾ ಸಾಲಕ್ಕೆ ವಿಧಿಸುವ ಬಡ್ಡಿ ದರವೇ ರೆಪೊ ದರ. ಹೀಗಾಗಿ ಬುಧವಾರ ಆರ್​ಬಿಐ ರೆಪೊ ದರ ಹೆಚ್ಚಳ ಪ್ರಕಟಿಸಿದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಸಾಲ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವೂ ಹೆಚ್ಚಾಗಲಿವೆ. ಇದು ಬ್ಯಾಂಕ್ ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಹಲವು ಬಾರಿ ಹೆಚ್ಚಿದೆ ಬಡ್ಡಿ ದರ

ಕಳೆದ ಕೆಲವು ತಿಂಗಳುಗಳಲ್ಲಿ ದೇಶದ ಅನೇಕ ಪ್ರಮುಖ ಬ್ಯಾಂಕ್​ಗಳು ವಿವಿಧ ಸಾಲಗಳ ಹಾಗೂ ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸಿವೆ. ಆದರೆ, ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದಷ್ಟು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುತ್ತಿಲ್ಲ. ರೆಪೊ ದರ ಹೆಚ್ಚಳದ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ ಎಂಬ ಆರೋಪವೂ ಬ್ಯಾಂಕ್​ಗಳ ಮೇಲೆ ಗ್ರಾಹಕ ವಲಯದಿಂದ ಕೇಳಿಬರುತ್ತಿದೆ.

ನವೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಎಂಪಿಸಿ

ಚಿಲ್ಲರೆ ಹಣದುಬ್ಬರ ನಿಯಂತ್ರಿಸಲು ವಿಫಲವಾಗಿರುವುದಕ್ಕೆ ಸಂಬಂಧಿಸಿ ನವೆಂಬರ್ 3ರಂದು ವಿಶೇಷ ಸಭೆ ನಡೆಸಿದ್ದ ಹಣಕಾಸು ನೀತಿ ಸಮಿತಿ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 45 ಝಡ್​ಎನ್​ ಅಡಿಯಲ್ಲಿ ಹಣಕಾಸು ನೀತಿ ಸಮಿತಿಯ ಹೆಚ್ಚುವರಿ ಸಭೆ ನಡೆದಿತ್ತು. ಸತತ ಮೂರು ತ್ರೈಮಾಸಿಕಗಳವರೆಗೆ ಹಣದುಬ್ಬರವನ್ನು ಮಿತಿಯೊಳಗೆ ಇರಿಸಲು ಸಾಧ್ಯವಾಗದಿದ್ದರೆ, ಅದಕ್ಕೆ ಕಾರಣ ಏನು ಎಂಬುದನ್ನು ಆರ್‌ಬಿಐ ಕೇಂದ್ರಕ್ಕೆ ತಿಳಿಸಬೇಕಿದ್ದು, ಆ ಕಾರಣಕ್ಕಾಗಿ ವಿಶೇಷ ಸಭೆ ನಡೆಸಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ