ಬಿಎಸ್ಎನ್ಎಲ್ ಜೊತೆ ವೊಡಾಫೋನ್ ಐಡಿಯಾ ವಿಲೀನ? ಒಂದು ವಾರದಿಂದ ಗರಿಗೆದರಿರುವ ವಿಐ ಷೇರುಬೆಲೆ?
BSNL and Vodafone Idea merger news: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಜೊತೆ ವೊಡಾಫೋನ್ ಐಡಿಯಾ ಸಂಸ್ಥೆಯನ್ನು ವಿಲೀನಗೊಳಿಸುವ ಸುದ್ದಿ ಇದೆ. ವೊಡಾಫೋನ್ ಐಡಿಯಾ ಸರ್ಕಾರಕ್ಕೆ 84,000 ಕೋಟಿ ರೂ ಎಜಿಆರ್ ಬಾಕಿ ಹಣ ಕೊಡಬೇಕಿದೆ. ಆದರೆ, ಕಟ್ಟುವಷ್ಟು ಆರ್ಥಿಕ ಶಕ್ತಿ ಇಲ್ಲ ಎಂದು ಅದರ ಸಿಇಒ ಹತಾಶೆ ತೋಡಿಕೊಂಡಿದ್ದರು. ಸರ್ಕಾರವು ಎಜಿಆರ್ ಪಾವತಿ ವಿಚಾರದಲ್ಲಿ ವಿಐಗೆ ತುಸು ವಿನಾಯಿತಿ ಕೊಡುವ ಸುದ್ದಿಯೂ ಇದೆ.

ನವದೆಹಲಿ, ಜೂನ್ 29: ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಮತ್ತು ವೊಡಾಫೋನ್ ಐಡಿಯಾ (Vodafone Idea) ಸಂಸ್ಥೆಗಳು ವಿಲೀನಗೊಳ್ಳಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. ವೊಡಾಫೋನ್ ಐಡಿಯಾಗೆ ಎಜಿಆರ್ ಬಾಕಿ ಹಣಯಿಂದ ವಿನಾಯಿತಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನುವ ಸುದ್ದಿ ನಡುವೆ ವಿಲೀನ ಸಾಧ್ಯತೆ ಬಗ್ಗೆಯೂ ಸುದ್ದಿಗಳಿವೆ. ಈ ಮಧ್ಯೆ ಕಳೆದ ಕೆಲ ದಿನಗಳಿಂದ ವೊಡಾಫೋನ್ ಐಡಿಯಾದ ಷೇರುಬೆಲೆ ಏರತೊಡಗಿದೆ. ಜೂನ್ 18ರಿಂದೀಚೆ ವಿಐ ಷೇರುಬೆಲೆ ನಿರಂತರವಾಗಿ ಆಗುತ್ತಿದೆ.
ಜೂನ್ 19ರಂದು 6.33 ರೂ ಇದ್ದ ವಿಐ ಷೇರುಬೆಲೆ ಜೂನ್ 27 ಶುಕ್ರವಾರ 7.40 ರೂ ಬೆಲೆಯಲ್ಲಿ ಅಂತ್ಯವಾಗಿತ್ತು. ಕಳೆದ 8-10 ಸೆಷನ್ಗಳಲ್ಲಿ ಷೇರುಬೆಲೆ ಶೇ. 12ರಷ್ಟು ಹೆಚ್ಚಾಗಿದೆ. ಹತ್ತು ವರ್ಷದ ಹಿಂದೆ 118.96 ರೂ ಇದ್ದ ಅದರ ಬೆಲೆ ಶೇ. 95ರಷ್ಟು ಕುಸಿತ ಕಂಡಿದೆ. ಆದರೆ, ಕಳೆದ ಕೆಲ ದಿನಗಳಿಂದ ಅದು ಕಂಬ್ಯಾಕ್ ಮಾಡುತ್ತಿರುವುದು ಗಮನಾರ್ಹ. ಇದಕ್ಕೆ ವೊಡಾಫೋನ್ನ ಎಜಿಆರ್ ಪಾವತಿಯಿಂದ ವಿನಾಯಿತಿ ಸಿಕ್ಕಿರುವುದು ಒಂದು ಕಾರಣವಾದರೆ, ಬಿಎಸ್ಸೆನ್ನೆಲ್ ಜೊತೆ ಅದು ವಿಲೀನಗೊಳ್ಳಬಹುದು ಎನ್ನುವ ಸುದ್ದಿಯೂ ಇದಕ್ಕೆ ಕಾರಣವಿರಬಹುದು. ವೊಡಾಫೋನ್ ಐಡಿಯಾದಲ್ಲಿ ಸರ್ಕಾರ ಅತಿಹೆಚ್ಚು ಷೇರುಪಾಲು ಹೊಂದಿದೆ. ಹೀಗಾಗಿ, ಎರಡೂ ಕೂಡ ವಿಲೀನಗೊಂಡರೆ ಅಚ್ಚರಿ ಇಲ್ಲ.
ಕಳೆದ ತಿಂಗಳು ವೊಡಾಫೋನ್ ಐಡಿಯಾ ಸಿಇಒ ಅಕ್ಷಯ ಮೂಂದ್ರ (Akshaya Moondra) ಅವರು ಸರ್ಕಾರದ ನೆರವಿನ ಅವಶ್ಯಕತೆ ಬಗ್ಗೆ ಹೇಳಿದ್ದರು. ಸರ್ಕಾರವು ಎಜಿಆರ್ ವಿಷಯದಲ್ಲಿ ಸರಿಯಾದ ಸಮಯಕ್ಕೆ ಬೆಂಬಲ ನೀಡದೇ ಹೋದರೆ ವೊಡಾಫೋನ್ ಐಡಿಯಾ ಸಂಸ್ಥೆ 2025-26ಕ್ಕಿಂತ ಮುಂದೆ ಕಾರ್ಯ ನಿರ್ವಹಿಸಲು ಆಗುವುದಿಲ್ಲ ಎಂದು ಟೆಲಿಕಾಂ ಇಲಾಖೆಗೆ ಬರೆದ ಪತ್ರದಲ್ಲಿ ಸಿಇಒ ಹತಾಶೆ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಸರ್ಕಾರವು ವೊಡಾಫೋನ್ಗೆ ಎಜಿಆರ್ ರಿಲೀಫ್ ಕೊಡಲು ಮಾರ್ಗೋಪಾಯ ಹುಡುಕುತ್ತಿರುವ ಸುದ್ದಿ ಇದೆ. ಟೆಲಿಕಾಂ ಇಲಾಖೆಗೆ ವೊಡಾಫೋನ್ ಐಡಿಯಾ 84,000 ಕೋಟಿ ರೂ ಎಜಿಆರ್ ಹಣ ಕೊಡುವುದು ಬಾಕಿ ಇದೆ. ಆರು ವರ್ಷದಲ್ಲಿ ಇದನ್ನು ತೀರಿಸಬೇಕು ಎನ್ನುವ ಅಪ್ಪಣೆ ಇದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಕೌಂಟರ್ಗಳಲ್ಲಿ ಡಿಜಿಟಪಲ್ ಪೇಮೆಂಟ್ಸ್; ಆಗಸ್ಟ್ನಿಂದ ಸೌಲಭ್ಯ ಶುರು
ಸರ್ಕಾರವು ಈ ಗಡುವನ್ನು ಆರು ವರ್ಷದ ಬದಲು 20 ವರ್ಷಕ್ಕೆ ಹೆಚ್ಚಿಸಲು ಆಲೋಚಿಸುತ್ತಿದೆ. ಅಥವಾ ಎಜಿಆರ್ ವಿಷಯ ಪೂರ್ಣವಾಗಿ ಇತ್ಯರ್ಥ ಆಗುವವರೆಗೂ ವರ್ಷಕ್ಕೆ 1,000-1,500 ಕೋಟಿ ರೂ ಹಣವನ್ನು ನೀಡಲು ಅವಕಾಶ ಮಾಡಿಕೊಡುವ ಬಗ್ಗೆಯೂ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




