ನವದೆಹಲಿ: ಕೆವೈಸಿ (KYC) ಅಪ್ಡೇಟ್ ಮಾಡುವುದಕ್ಕಾಗಿ ಗ್ರಾಹಕರು ಬ್ಯಾಂಕ್ ಶಾಖೆಗೆ ತೆರಳುವ ಅಗತ್ಯವಿಲ್ಲ ಎಂದು ಆರ್‌ಬಿಐ (RBI) ಹೇಳಿದೆ. ಈಗಾಗಲೇ ಬ್ಯಾಂಕ್ಗೆ ಅಗತ್ಯ ದಾಖಲೆಗಳನ್ನು ನೀಡಿದ್ದಲ್ಲಿ, ವಿಳಾಸ ಬದಲಾವಣೆ ಆಗಿರದಿದ್ದಲ್ಲಿ ಕೆವೈಸಿ ಅಪ್ಡೇಟ್ಗೆಂದು ಬ್ಯಾಂಕ್ ಶಾಖೆಗೆ ತೆರಳಬೇಕಾಗಿಲ್ಲ ಎಂದು ಆರ್‌ಬಿಐ ಹೇಳಿದೆ. ಈ ಮೂಲಕ, ಅನವಶ್ಯಕ ಗ್ರಾಹಕರ ಸಮಯ ವ್ಯರ್ಥವಾಗುವುದನ್ನು ತಪ್ಪಿಸಿದೆ. ಆರಂಭದಲ್ಲಿ ಬ್ಯಾಂಕ್ಗೆ ಸಲ್ಲಿಸಿದ್ದ ಕೆವೈಸಿ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಅಥವಾ ಇತರ ಯಾವುದೇ ವಿಧಾನದ ಮೂಲಕ ಸ್ವ ದೃಢೀಕರಣ ಮಾಡಬಹುದು ಎಂದು ಆರ್‌ಬಿಐ ಹೇಳಿದೆ.
ಕೆವೈಸಿ ಅಪ್ಡೇಟ್ ವಿಚಾರವಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿಕೆಯ ಬೆನ್ನಲ್ಲೇ ಆರ್‌ಬಿಐ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿ ಪ್ರಕಾರ, ಕೆವೈಸಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದಲ್ಲಿ ಗ್ರಾಹಕರು ಸ್ವ ದೃಢೀಕರಣದ ಮಾಡಿದರೆ ಸಾಕು. ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ, ಎಟಿಎಂಗಳು, ಇಂಟರ್ನೆಟ್ ಬ್ಯಾಂಕಿಂಗ್ನಂಥ ಡಿಜಿಟಲ್ ವಿಧಾನಗಳ ಮೂಲಕ ಬ್ಯಾಂಕ್‌ಗಳು ಗ್ರಾಹಕರು ಸ್ವ-ದೃಢೀಕರಣ ಮಾಡಿರುವುದನ್ನು ಪರಿಶೀಲಿಸಬೇಕು. ಗ್ರಾಹಕರ ಜತೆ ಮುಖಾಮುಖಿ ಸಂವಹನ ಅಗತ್ಯವಿಲ್ಲ. ಅವರನ್ನು ಶಾಖೆಗಳಿಗೆ ಕರೆಸಿಕೊಳ್ಳುವ ಅತ್ಯವೂ ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Bank Locker Rules: ಲಾಕರ್ ವಸ್ತುಗಳಿಗೆ ಹಾನಿಯಾದರೆ ಬ್ಯಾಂಕ್‌ಗಳು ನೀಡಬೇಕು ಭಾರೀ ಪರಿಹಾರ; ಹೊಸ ನಿಯಮದ ಪೂರ್ಣ ವಿವರ ಇಲ್ಲಿದೆ
ಬ್ಯಾಂಕ್‌ಗಳು ನಿಯಮಿತವಾಗಿ ಗ್ರಾಹಕರ ದಾಖಲೆಗಳನ್ನು ಪರಿಶೀಲಿಸಿ ಸುಸ್ಥಿತಿಯಲ್ಲಿ ಇಟ್ಟುಕೊಂಡಿರಬೇಕು. ದಾಖಲೆಗಳನ್ನು ಅಕ್ರಮ ಹಣಕಾಸು ವರ್ಗಾವಣೆ ಕಾಯ್ದೆ ಅನ್ವಯ ಪರಾಮರ್ಶಿಸಿ, ಅಪ್ಡೇಟ್ ಮಾಡಿಕೊಳ್ಳುತ್ತಾ ಇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಗ್ರಾಹಕರು ಸಲ್ಲಿಸಿದ್ದ ಕೆವೈಸಿ ದಾಖಲೆಗಳ ಸಿಂಧುತ್ವವು ಅವಧಿ ಮೀರಿರುವ ಸಂದರ್ಭಗಳಲ್ಲಿ ಕೂಡ ದಾಖಲೆಗಳನ್ನು ಸಮರ್ಪಕವಾಗಿ ಕಾಪಿಡುವುದು ಅಗತ್ಯ. ಇಂಥ ಸಂದರ್ಭಗಳಲ್ಲಿ, ಗ್ರಾಹಕರು ಸಲ್ಲಿಸಿದ ಕೆವೈಸಿ ದಾಖಲೆಗಳು / ಸ್ವಯಂ-ದೃಢೀಕರಣದ ಸ್ವೀಕೃತಿಯನ್ನು ಬ್ಯಾಂಕ್‌ಗಳು ಒದಗಿಸಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ.