Bank Locker Rules: ಲಾಕರ್ ವಸ್ತುಗಳಿಗೆ ಹಾನಿಯಾದರೆ ಬ್ಯಾಂಕ್ಗಳು ನೀಡಬೇಕು ಭಾರೀ ಪರಿಹಾರ; ಹೊಸ ನಿಯಮದ ಪೂರ್ಣ ವಿವರ ಇಲ್ಲಿದೆ
ಲಾಕರ್ಗಳಿಗೆ ಹಾನಿಯಾದಲ್ಲಿ, ವಸ್ತುಗಳು ಕಳೆದುಹೋದಲ್ಲಿ ಬ್ಯಾಂಕ್ಗಳು ಭಾರೀ ಮೊತ್ತದ ಪರಿಹಾರ ನೀಡಬೇಕಾಗುತ್ತದೆ. ಬ್ಯಾಂಕ್ ಲಾಕರ್ಗೆ ಸಂಬಂಧಿಸಿ ಆರ್ಬಿಐ ಪ್ರಕಟಿಸಿರುವ ಹೊಸ ನಿಯಮಗಳ ಪೂರ್ಣ ವಿವರ ಇಲ್ಲಿದೆ.
ಅನೇಕ ಕಾರಣಗಳಿಗಾಗಿ ಜನ ಬ್ಯಾಂಕ್ ಲಾಕರ್ಗಳನ್ನು (Bank Locker) ಬಳಸಿಕೊಳ್ಳುತ್ತಾರೆ. ಅತ್ಯಮೂಲ್ಯ ದಾಖಲೆಗಳನ್ನು ಕಾಪಿಡುವುದಕ್ಕೆ, ಆಭರಣ, ಸಾಲದ ದಾಖಲೆಗಳು, ಆಸ್ತಿ ದಾಖಲೆಗಳು ಇತ್ಯಾದಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಡಲು ಗ್ರಾಹಕರು ಬ್ಯಾಂಕ್ ಲಾಕರ್ಗಳ ಸೇವೆ ಪಡೆಯುವುದು ಸಾಮಾನ್ಯ. ಲಾಕರ್ನ ಗಾತ್ರಕ್ಕೆ ಅನುಗುಣವಾಗಿ ಬ್ಯಾಂಕ್ಗಳು ವಾರ್ಷಿಕ ಬಾಡಿಗೆ ವಿಧಿಸುತ್ತವೆ. ಈ ಲಾಕರ್ಗಳಿಗೆ ಸಂಬಂಧಿಸಿದ ನಿಯಮದಲ್ಲಿ ಹೊಸ ವರ್ಷದಿಂದ ಜಾರಿಗೆ ಬರುವಂತೆ ಆರ್ಬಿಐ (RBI) ಕೆಲವು ಬದಲಾವಣೆಗಳನ್ನು ಮಾಡಿದೆ. ಇದರಂತೆ, ಬ್ಯಾಂಕ್ಗಳು ಲಾಕರ್ ವಿಚಾರದಲ್ಲಿ ಗ್ರಾಹಕರ ಮೇಲೆ ನಿರಂಕುಶವಾಗಿ ವರ್ತಿಸುವಂತಿಲ್ಲ. ಅಲ್ಲದೆ, ಲಾಕರ್ಗಳಿಗೆ ಹಾನಿಯಾದಲ್ಲಿ, ವಸ್ತುಗಳು ಕಳೆದುಹೋದಲ್ಲಿ ಬ್ಯಾಂಕ್ಗಳು ಭಾರೀ ಮೊತ್ತದ ಪರಿಹಾರ ನೀಡಬೇಕಾಗುತ್ತದೆ. ಬ್ಯಾಂಕ್ ಲಾಕರ್ಗೆ ಸಂಬಂಧಿಸಿ ಆರ್ಬಿಐ ಪ್ರಕಟಿಸಿರುವ ಹೊಸ ನಿಯಮಗಳ ಪೂರ್ಣ ವಿವರ ಇಲ್ಲಿದೆ.
ಹೊಸ ಬ್ಯಾಂಕ್ ಲಾಕರ್ ನಿಯಮದಲ್ಲೇನಿದೆ?
ಬ್ಯಾಂಕ್ ಲಾಕರ್ನಲ್ಲಿಟ್ಟಿರುವ ಮಹತ್ವದ ವಸ್ತು ಕಳೆದು ಹೋದರೆ ಅಂಥ ಗ್ರಾಹಕರಿಗೆ ಸಂಬಂಧಪಟ್ಟ ಬ್ಯಾಂಕ್, ಲಾಕರ್ ಬಾಡಿಗೆ ಶುಲ್ಕದ 100 ಪಟ್ಟು ಪರಿಹಾರ ನೀಡಬೇಕು ಎಂದು ಪರಿಷ್ಕೃತ ನಿಯಮದಲ್ಲಿ ಹೇಳಲಾಗಿದೆ. ಬ್ಯಾಂಕ್ ಲಾಕರ್ ಸೇವೆ ಹೆಸರಿನಲ್ಲಿ ಬ್ಯಾಂಕುಗಳು ಗ್ರಾಹಕರಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವಂತಿಲ್ಲ. ಖಾಲಿ ಲಾಕರ್ಗಳು, ವೈಟಿಂಗ್ ಲಿಸ್ಟ್ನಲ್ಲಿರುವ ಲಾಕರ್ಗಳ ವಿವರವನ್ನು ಬ್ಯಾಂಕುಗಳು ಪ್ರಕಟಿಸಬೇಕು ಎಂದು ಆರ್ಬಿಐ ಹೊಸ ನಿಯಮ ಉಲ್ಲೇಖಿಸಿದೆ.
ಬ್ಯಾಂಕ್ ಲಾಕರ್ ಸಂಬಂಧಿತ ವಿವರ ಪಾರದರ್ಶಕವಾಗಿರಬೇಕು
ಲಾಕರ್ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಬೇಕು ಎಂದು ಪರಿಷ್ಕೃತ ನಿಯಮದಲ್ಲಿ ಹೇಳಲಾಗಿದೆ. ಗ್ರಾಹಕರ ಅಮೂಲ್ಯವಾದ ವಸ್ತುಗಳು ಕಳೆದುಹೋಗದಂತೆ ನೋಡಿಕೊಳ್ಳಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರ್ಬಿಐ ಹೇಳಿದೆ. ಖಾಲಿ ಲಾಕರ್ಗಳು, ವೈಟಿಂಗ್ ಲಿಸ್ಟ್ನಲ್ಲಿರುವ ಲಾಕರ್ಗಳ ವಿವರವನ್ನು ಬ್ಯಾಂಕ್ಗಳು ಪ್ರಕಟಿಸಬೇಕು. ಬ್ಯಾಂಕ್ ಕಡೆಯಿಂದ ಗ್ರಾಹಕರಿಗೆ ಸೂಕ್ತ ವಿವರ ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಆರ್ಬಿಐ ಹೇಳಿದೆ. ಲಾಕರ್ ಕೊಠಡಿಗೆ ಭೇಟಿ ನೀಡುವ, ಅಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಹಾಗೂ ಅಲ್ಲಿನ ಪ್ರತಿಯೊಂದು ಚಟುವಟಿಕೆ ಮೇಲೂ ಸಿಸಿಟಿವಿ ಕ್ಯಾಮರಾ ಮೂಲಕ ನಿಗಾ ಇರಿಸಬೇಕು ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ.
ಬ್ಯಾಂಕ್ ಲಾಕರ್ ಸೌಲಭ್ಯ ಪಡೆಯುವುದು ಹೇಗೆ?
ಲಾಕರ್ ತೆರೆಯಲು ಬಯಸುವ ಬ್ಯಾಂಕ್ ಶಾಖೆಗೆ ಅರ್ಜಿ ಸಲ್ಲಿಸಬೇಕು. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದ ಮೇಲೆ ಲಾಕರ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ನಿಮ್ಮ ಹೆಸರು ವೈಟಿಂಗ್ ಲಿಸ್ಟ್ನಲ್ಲಿದ್ದರೆ, ಈಗಾಗಲೇ ಲಾಕರ್ ಹೊಂದಿರುವ ಬಳಕೆದಾರರು ತೆರವು ಮಾಡಿದ ನಂತರ ನೀವು ಅರ್ಹರಾಗುತ್ತೀರಿ. ಇದಕ್ಕಾಗಿ, ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಹೊಂದಿರುವುದು ಅಗತ್ಯ. ವಾರ್ಷಿಕ ಬಾಡಿಗೆಯನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ವಿಧಿಸಲಾಗುತ್ತದೆ.
ಲಾಕರ್ ಸೌಲಭ್ಯಕ್ಕೆ ಬ್ಯಾಂಕ್ಗಳು ವಿಧಿಸುವ ಶುಲ್ಕವೆಷ್ಟು?
ಲಾಕರ್ ಸೌಲಭ್ಯಕ್ಕೆ ವಿಧಿಸುವ ಬಾಡಿಗೆ ಅಥವಾ ಶುಲ್ಕ ವಿವಿಧ ಬ್ಯಾಂಕ್ಗಳಲ್ಲಿ ವ್ಯತ್ಯಸ್ತವಾಗಿರುತ್ತವೆ. ಎಸ್ಬಿಐಯಲ್ಲಿ 2,000 ರೂ.ನಿಂದ 12,000 ರೂ.ವರೆಗೆ ಬಾಡಿಗೆ ಇದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ 1,250 ರೂ.ನಿಂದ 10,000 ರೂ.ವರೆಗೆ ಶುಲ್ಕ ವಿಧಿಸಲಾಗುತ್ತಿದೆ. ಕೆನರಾ ಬ್ಯಾಂಕ್ನಲ್ಲಿ 2,000 ರೂ.ನಿಂದ 10,000 ರೂ, ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ 3,000 ರೂ.ನಿಂದ 20,000 ರೂ, ಐಸಿಐಸಿಐ ಬ್ಯಾಂಕ್ನಲ್ಲಿ 1,200ರಿಂದ 5,000 ರೂ.ವರೆಗೆ ಬಾಡಿಗೆ ವಿಧಿಸಲಾಗುತ್ತಿದೆ.